ಮುಸ್ಲಿಂ ಯುವಕರನ್ನು ಬಂಧಿಸಬೇಡಿ: ಶಿಂದೆ ಫರ್ಮಾನು
ನವದೆಹಲಿ, ಅ.1: ಭಯೋತ್ಪಾದನೆಯ ಹೆಸರಲ್ಲಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಬೇಡಿ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂದೆ ಆದೇಶಿಸಿದ್ದಾರೆ. ಆದರೆ ಇದು ಭಾರಿ ವಿವಾದಕ್ಕೆ ನಾಂದಿ ಹಾಡಿದಂತಾಗಿದೆ.
ಈಗಾಗಲೇ ಹಲವಾರು ವಿವಾದಗಳಲ್ಲಿ ಸಿಲುಕಿರುವ ಯುಪಿಎ ಸರಕಾರಕ್ಕೆ ಶಿಂದೆ ಬರೆದಿರುವ ಪತ್ರ ಮತ್ತೊಂದು ಮುಜುಗರ ಸೃಷ್ಟಿಸುವ ಲಕ್ಷಣಗಳಿವೆ. ಧರ್ಮ/ ಜಾತಿ ಆಧಾರದಲ್ಲಿ ದೇಶವನ್ನು ಒಡೆಯಲು ಖುದ್ದು ಗೃಹ ಸಚಿವರೇ ಮುಂದಾಗಿದ್ದು, ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಶಿಂದೆ ಆದೇಶ ಕೇಳಿ ಬೆಚ್ಚಿಬಿದ್ದ ಪೊಲೀಸರು
ಶಿಂದೆ ಆದೇಶವನ್ನು ಕೇಳಿ ಪೊಲೀಸರು, ಭಯೋತ್ಪಾದನೆ ನಿಗ್ರಹ ಕೆಲಸದಲ್ಲಿ ತೊಡಗಿರುವ ಭದ್ರತಾ ಸಂಸ್ಥೆಗಳು ಬೆಚ್ಚಿಬಿದ್ದಿವೆ. ತಪ್ಪು ಯಾರೆ ಮಾಡಲಿ ಆ ವ್ಯಕ್ತಿಯ ಕೃತ್ಯ ಪ್ರಧಾನವಾಗುತ್ತದೆ. ಅದರ ಹೊರತು, ಧರ್ಮ, ಜಾತಿ, ವರ್ಣಗಳನ್ನು ಪರಿಗಣಿಸುತ್ತಾ ನಾವು ಕುಳಿತುಕೊಳ್ಳುವುದಿಲ್ಲ. ಆದರೆ ಈಗ ಶಿಂದೆ ಆದೇಶ ನಮ್ಮ ಕೈಕಟ್ಟಿ ಹಾಕಿದಂತಾಗಿದೆ ಎಂದು ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರ ಓಲೈಕೆಯೇ ಗುರಿ:
ಇದು ಶುದ್ಧ ಓಟ್ ಬ್ಯಾಂಕ್ ರಾಜಕಾರಣ. ಮುಂಬರುವ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಇಂಥ ಪತ್ರವನ್ನು ಶಿಂದೆ ಬರೆದಿದ್ದಾರೆ. ಅವರ ನಡೆ ಅಸಂವಿಧಾನಿಕ ಮತ್ತು ಪ್ರಶ್ನೆಗೆ ಆಸ್ಪದ ನೀಡುವಂಥದ್ದು. ಕೂಡಲೇ ನಿರ್ದೇಶನವನ್ನು ಅವರು ಈ ಕೂಡಲೇ ವಾಪಸ್ ಪಡೆಯಬೇಕು- ಬಿಜೆಪಿ ನಾಯಕ ಎಂ ವೆಂಕಯ್ಯನಾಯ್ಡು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ
'ಯಾವುದೇ ಧರ್ಮದ ವ್ಯಕ್ತಿಯನ್ನು ಸೂಚಿಸದೇ, ಭಯೋತ್ಪಾದನೆ ಹೆಸರಲ್ಲಿ ಅಮಾಯಕರನ್ನು ಬಂಧಿಸಿ, ಹಿಂಸಿಸಬೇಡಿ ಎಂಬ ಸೂಚನೆಗಳನ್ನು ನೀಡಿದ್ದರೆ ಒಪ್ಪಬಹುದಿತ್ತು. ಆದರೆ ಇದೇನಿದು ಧರ್ಮದ ಹೆಸರು ಹಿಡಿದು ಮುಸ್ಲಿಮರನ್ನು ಮಾತ್ರ ಬಂಧಿಸಬೇಡಿ. ಅವರಿಗೆ ಅನ್ಯಾಯ ಮಾಡಿ ಎಂದು ಹೇಳಿರುವುದು. ಇದು ಸರ್ವತಾ ಸಾಧುವಲ್ಲ' ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಪ್ರತಾಪ್ ರೂಡಿ ದೂರಿದ್ದಾರೆ.
'ದೇಶದ ಸಂವಿಧಾನವನ್ನು ಶಿಂದೆ ಮರೆತಿದ್ದಾರೆ ಇಲ್ಲವೇ ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ಧರ್ಮ ಕುರಿತಾಗಿ ಪೂರ್ವಗ್ರಹಗಳಿಲ್ಲದೇ ಸೇವೆ ಮಾಡುವುದಾಗಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದ್ದನ್ನು ನೆನಪಿಸಿಕೊಳ್ಳಬೇಕು' ಎಂದೂ ಅವರು ಕಿವಿಮಾತು ಹೇಳಿದ್ದಾರೆ.

ಶಿಂದೆ ಹೇಳಿರುವುದೇನು?
'ಭಯೋತ್ಪಾದನೆ ನಿಗ್ರಹ ಹೆಸರಿನಲ್ಲಿ ಕಾನೂನು ಜಾರಿ ಸಂಸ್ಥೆಗಳು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ, ಕಿರುಕುಳ ನೀಡುತ್ತಿರುವ ಬಗ್ಗೆ ಸಮಾಜದ ನಾನಾ ಕಡೆಯಿಂದ ದೂರುಗಳು ಬರುತ್ತಿವೆ. ಇದರಿಂದ ಅಲ್ಪಸಂಖ್ಯಾತ ಸಮುದಾಯದ ಯುವಕರು ಭಯದಿಂದ ಕುಗ್ಗಿ ಹೋಗಿದ್ದಾರೆ. ತಮ್ಮನ್ನು ಪೊಲೀಸರು ಗುರಿಯಾಗಿಟ್ಟುಕೊಂಡು, ಮೂಲಭೂತ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎನ್ನುವ ಆತಂಕವೂ ಸಮುದಾಯದಲ್ಲಿದೆ. ಇಂಥದ್ದು ನಡೆಯಬಾರದು' ಎಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಶಿಂದೆ ಎಚ್ಚರಿಸಿದ್ದಾರೆ.

ಇನ್ನೂ ಏನು ಹೇಳಿದ್ದಾರೆ ಶಿಂದೆ?
'ಎಲ್ಲ ರೀತಿಯ ಭಯೋತ್ಪಾದನೆ ನಿಗ್ರಹಿಸಲು ಸರಕಾರಬದ್ಧವಾಗಿದೆ. ಆದರೆ ಅನಗತ್ಯವಾಗಿ ಅಮಾಯಕರನ್ನು ಬಂಧಿಸಿ, ಹಿಂಸಿಸುವುದು ಸಲ್ಲದು. ಭಯೋತ್ಪಾದನೆ ಪ್ರಕರಣಗಳ ವಿಚಾರಣೆಗಳು ತ್ವರಿತವಾಗಿ ನಡೆಯಬೇಕು. ಈ ಸಂಬಂಧ ಹೈಕೋರ್ಟ್ ಜತೆ ಮಾತುಕತೆ ನಡೆಸಿ, ಪ್ರತ್ಯೇಕ ವಿಶೇಷ ನ್ಯಾಯಾಲಯಗಳನ್ನು ರಾಜ್ಯ ಸರಕಾರಗಳು ಸ್ಥಾಪಿಸಬೇಕು. ಅಲ್ಲದೇ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಳನ್ನೂ ನೇಮಕ ಮಾಡಬೇಕು. ಬಾಕಿ ಉಳಿದಿರುವ ಇತರೆ ಪ್ರಕರಣಗಳ ವಿಚಾರಣೆಗಿಂತಲೂ ಭಯೋತ್ಪಾದನೆ ಪ್ರಕರಣಗಳ ವಿಚಾರಣೆಗೆ ಹೆಚ್ಚಿನ ಆದ್ಯತೆ ನೀಡಿ' ಎಂದು ರಾಜ್ಯ ಸರಕಾರಗಳಿಗೆ ಶಿಂದೆ ತಾಕೀತು ಮಾಡಿದ್ದಾರೆ.

ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಲು ಫರ್ನಾನು
'ಭಯೋತ್ಪಾದಕರೆಂಬ ನೆಪದಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ರಾಜ್ಯ ಸರಕಾರಗಳು ಕೈಗೊಳ್ಳಬೇಕು. ಅಲ್ಲದೇ ಬಂಧಿತ ವ್ಯಕ್ತಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ ಸೂಕ್ತ ನಷ್ಟ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಿ, ಮುಖ್ಯವಾಹಿನಿಯಲ್ಲಿ ಬೆರೆಯಲು ಸರಕಾರಗಳು ಅವಕಾಶ ಕಲ್ಪಿಸಬೇಕು' ಎಂದೂ ಶಿಂದೆ ಪತ್ರದಲ್ಲಿ ಫರ್ನಾನು ಹೊರಡಿಸಿದ್ದಾರೆ.












Click it and Unblock the Notifications