ರಾತ್ರಿ 10 ಗಂಟೆಗೂ ಮಹಿಳೆಯರು ನಿರ್ಭಯವಾಗಿ ಓಡಾಡಬೇಕು: ಪೊಲೀಸರಿಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಣಿ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಹಿಳೆಯರು ರಾತ್ರಿ 10 ಗಂಟೆಗೂ ಯಾವುದೇ ಭಯವಿಲ್ಲದೆ ಸುರಕ್ಷಿತವಾಗಿ ಓಡಾಡುವಂತಹ ವಾತಾವರಣವನ್ನ ನಿರ್ಮಿಸುವುದು ಪೊಲೀಸರ ಆದ್ಯ ಕರ್ತವ್ಯ ಎಂದು ಸರ್ವೋಚ್ಚ ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣಗಳನ್ನ ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು, ಕೇವಲ ಕಾಗದದ ಮೇಲಿನ ನಿಯಮಗಳಿಂದ ಅಪರಾಧಗಳನ್ನ ತಡೆಯಲು ಸಾಧ್ಯವಿಲ್ಲ, ಅವುಗಳನ್ನು ಕಟ್ಟುನಿಟ್ಟಾಗಿ ನೆಲಮಟ್ಟದಲ್ಲಿ ಜಾರಿಗೆ ತರಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು, ದೆಹಲಿ ಪೊಲೀಸರು ಹಾಗೂ ಕೇಂದ್ರ ಸರ್ಕಾರಕ್ಕೆ ಮಹಿಳಾ ಸುರಕ್ಷತೆಯ ಬಗ್ಗೆ ಕಠಿಣ ಕ್ರಮಗಳನ್ನ ಕೈಗೊಳ್ಳಲು ನಿರ್ದೇಶಿಸಿದೆ. "ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದರೆ ಮಾತ್ರ ಸಾಲದು, ಆ ನಿಯಮಗಳು ವಾಸ್ತವದಲ್ಲಿ ಜಾರಿಯಾಗಬೇಕು. ಅಪರಾಧಿಗಳ ಮನಸ್ಸಿನಲ್ಲಿ ಭಯ ಹುಟ್ಟಿಸುವಂತಹ ಕಠಿಣ ಕ್ರಮಗಳು ಅಗತ್ಯ. ಪೊಲೀಸರ ಕಾರ್ಯವೈಖರಿ ಅಪರಾಧವನ್ನ ತಡೆಗಟ್ಟುವಂತಿರಬೇಕು ಹೊರತು, ಅಪರಾಧ ನಡೆದ ಮೇಲೆ ಕ್ರಮ ಕೈಗೊಳ್ಳುವುದಲ್ಲ" ಎಂದು ಪೀಠವು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದೆ.
ಪ್ರತಿಯೊಬ್ಬ ಸಂತ್ರಸ್ತೆಯೂ ನಮ್ಮ ತಾಯಿ, ಸಹೋದರಿಯಿದ್ದಂತೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಿ ಎಂದು ಪೊಲೀಸರಿಗೆ ಕಿವಿಮಾತು ಹೇಳಿದೆ.
ದೆಹಲಿ ಪೊಲೀಸ್ ಗಸ್ತು ಮತ್ತು ಕಣ್ಗಾವಲು ಹೆಚ್ಚಳ
ಬಸ್ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು, ರೈಲು ನಿಲ್ದಾಣಗಳು, ಶಾಲಾ-ಕಾಲೇಜು ಆವರಣಗಳು ಸೇರಿದಂತೆ ಮಹಿಳೆಯರು ಮತ್ತು ಯುವತಿಯರು ಹೆಚ್ಚು ಓಡಾಡುವ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಗಸ್ತು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಪೊಲೀಸರು ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ವರ್ತಿಸಬೇಕು, ಸಂಕಷ್ಟದಲ್ಲಿರುವವರು ಯಾವುದೇ ಭಯವಿಲ್ಲದೆ ಪೊಲೀಸರನ್ನ ಸಂಪರ್ಕಿಸುವಂತಿರಬೇಕು ಎಂದು ನ್ಯಾಯಾಲಯ ಸಲಹೆ ನೀಡಿದೆ.
ಅಲ್ಲದೆ, ಸಾರ್ವಜನಿಕ ಸ್ಥಳಗಳು ಹಾಗೂ ಉದ್ಯಾನವನಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿ, ಬೃಹತ್ ಕಣ್ಗಾವಲು ಘಟಕದ ಮೂಲಕ ನಿರಂತರವಾಗಿ ನಿಗಾವಹಿಸುವಂತೆ ಸೂಚಿಸಲಾಗಿದೆ.
ಆಸ್ತಾ ಕುಂಜ್ ಪಾರ್ಕ್ ಅತ್ಯಾಚಾರ ಪ್ರಕರಣದ ಹಿನ್ನೆಲೆ
ಸೆಪ್ಟೆಂಬರ್ 21ರಂದು ಆಸ್ತಾ ಕುಂಜ್ ಪಾರ್ಕ್‌ನಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವು ದೆಹಲಿಯಲ್ಲಿ ಮಹಿಳಾ ಸುರಕ್ಷತೆಯ ಕುರಿತು ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯ ಬಳಿಕ ದೆಹಲಿ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಲೆಕ್ಕಪರಿಶೋಧನೆಯಲ್ಲಿ ಆಘಾತಕಾರಿ ಅಂಶಗಳು ಬಯಲಾಗಿವೆ.
ಡಿಡಿಎ ನಿರ್ವಹಿಸುವ 736 ಉದ್ಯಾನವನಗಳ ಪೈಕಿ ಕೇವಲ 16 ಪಾರ್ಕ್‌ಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾಗಳಿವೆ. 190 ಉದ್ಯಾನವನಗಳು ಅತಿ ಹೆಚ್ಚು ಅಪಾಯಕಾರಿ ವಲಯಗಳೆಂದು ಗುರುತಿಸಲ್ಪಟ್ಟಿದ್ದು, 520 ಪಾರ್ಕ್‌ಗಳಲ್ಲಿ ಸೂಕ್ತ ದೀಪದ ವ್ಯವಸ್ಥೆಯೇ ಇಲ್ಲ ಎಂಬುದು ಬೆಳಕಿಗೆ ಬಂದಿದೆ. ಈ ನಿರ್ಲಕ್ಷ್ಯವನ್ನ ವ್ಯವಸ್ಥಿತ ವೈಫಲ್ಯ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್, 2012ರ ನಿರ್ಭಯಾ ಪ್ರಕರಣದಿಂದ ನಾವು ಇನ್ನೂ ಪಾಠ ಕಲಿತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದೆ.
ಸಂವಿಧಾನದ 21ನೇ ವಿಧಿಯ ಪ್ರಕಾರ ಘನತೆ ಮತ್ತು ಹಿಂಸಾಚಾರ ಮುಕ್ತವಾಗಿ ಬದುಕುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಇದನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿ ಎಂದು ನ್ಯಾಯಾಲಯ ನೆನಪಿಸಿದೆ. ಅಲ್ಲದೆ, ಸಿಎಜಿ ವರದಿಯ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನ ಶೀಘ್ರವಾಗಿ ಭರ್ತಿ ಮಾಡಲು ಮತ್ತು ಮಹಿಳಾ ಸುರಕ್ಷತೆಯ ಬಗ್ಗೆ ಪೊಲೀಸರಿಗೆ ಸೂಕ್ತ ತರಬೇತಿ ನೀಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.
ಅಪರಾಧಿಗಳಲ್ಲಿ ಕಾನೂನಿನ ಭಯ ಮೂಡಿಸುವತ್ತ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿರುವ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದೆ.


Click it and Unblock the Notifications
