ಇಂಗ್ಲೀಷ್ ಹಿಂದೆ ಬೀಳಬೇಡಿ ಎಂದು ಸಲಹೆ ಕೊಟ್ಟ ಪ್ರಧಾನಿ ಮೋದಿ!
ನವದೆಹಲಿ, ಅಕ್ಟೋಬರ್ 19: ದೇಶದಲ್ಲಿ ಸ್ಥಳೀಯ ಭಾಷೆಗಳ ಬಳಕೆಯನ್ನು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಇಂಗ್ಲಿಷ್ ಕೇವಲ ಒಂದು ಸಂವಹನ ಮಾಧ್ಯಮವಾಗಿದೆಯೇ ಹೊರತೂ ಬೌದ್ಧಿಕತೆಯನ್ನು ಅಳೆಯುವ ಮಾನದಂಡವಲ್ಲ ಎಂದು ಹೇಳಿದ್ದಾರೆ.
ಗಾಂಧಿನಗರದ ಅದಾಲಾಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂವಹನ ಮಾಧ್ಯಮವಾಗಿರುವ ಇಂಗ್ಲಿಷ್ ಭಾಷೆಯನ್ನು ಬೌದ್ಧಿಕ ಮಾನದಂಡ ಎನ್ನುವ ರೀತಿ ಪರಿಗಣಿಸಲಾಗುತ್ತಿದೆ ಎಂದು ಉಲ್ಲೇಖಿಸಿದರು.
"ಹಿಂದೆ, ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಪರಿಗಣಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ. ಹಿಂದಿಯಲ್ಲಿ ಆರಾಮದಾಯಕವಾಗಿ ಮಾತನಾಡುವ ಜನರು ಇಂಗ್ಲೀಷ್ ಭಾಷೆಯ ಹಿಂದೆ ಬೀಳುವ ಅಗತ್ಯವಿಲ್ಲ," ಎಂದು ಪ್ರಧಾನಿ ಮೋದಿ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಧಾನಿ ಮೋದಿ ಉಲ್ಲೇಖ
ಇಂಗ್ಲಿಷ್ ಭಾಷೆಯ ತೊಡಕಿನಿಂದಾಗಿ ಹಳ್ಳಿಗಳ ಅನೇಕ ಯುವ ಪ್ರತಿಭೆಗಳು ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಇಲ್ಲದ ಕಾರಣ ವೈದ್ಯರು ಮತ್ತು ಎಂಜಿನಿಯರ್ ಆಗಲು ಸಾಧ್ಯವಾಗುತ್ತಿಲ್ಲ. ಹೊಸ ಶಿಕ್ಷಣ ನೀತಿಯು (ಎನ್‌ಇಪಿ) ದೇಶವನ್ನು ಇಂಗ್ಲಿಷ್ ಭಾಷೆಯನ್ನು ಸುತ್ತುವರೆದಿರುವ "ಗುಲಾಮ ಮನಸ್ಥಿತಿ"ಯಿಂದ ಹೊರತರಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಶ್ರೀಮಂತರ ಮಕ್ಕಳಷ್ಟೇ ಡಾಕ್ಟರ್, ಇಂಜಿನಿಯರ್ ಆಗಬೇಕೇ?
ಭಾರತದಲ್ಲಿ ಬಡ ಪೋಷಕರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದದಿದ್ದರೂ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಭವಿಷ್ಯದಲ್ಲಿ ವೈದ್ಯರು ಮತ್ತು ಇಂಜಿನಿಯರ್ ಆಗುವಂತೆ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವುದೇ ನಮ್ಮ ಗುರಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

ಇಂಗ್ಲೀಷ್ ಕಾರಣಕ್ಕೆ ಹಿಂಜರಿಕೆ ಹುಟ್ಟಿಕೊಳ್ಳಬಾರದು
ದೇಶದಲ್ಲಿ ಇಂಗ್ಲಿಷ್ ಭಾಷೆಯಲ್ಲಿನ ಹಿಡಿತದ ಕೊರತೆಯಿಂದಾಗಿ ಯಾರೂ ಹಿಂದೆ ಸರಿಯದಂತೆ ನೋಡಿಕೊಳ್ಳಬೇಕಿದೆ. "ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯು ಇಂಗ್ಲಿಷ್ ಭಾಷೆಯ ಸುತ್ತಲಿನ ಈ ಗುಲಾಮ ಮನಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸುತ್ತದೆ. ಇದಲ್ಲದೆ, ದೇಶದಲ್ಲಿ ಹೊಸದಾಗಿ ಪ್ರಾರಂಭಿಸಲಾದ 5G ಟೆಲಿಕಾಂ ಸೇವೆಗಳು ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ. 5G ಸೇವೆಯು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು ಮೀರಿ ಹೋಗುತ್ತದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ," ಎಂದು ಪ್ರಧಾನಿ ಹೇಳಿದರು.

ಸ್ಥಳೀಯ ಭಾಷೆಗಳಿಗೆ ಉತ್ತೇಜನ ನೀಡುವಂತೆ ಪ್ರಧಾನಿ ಸಲಹೆ
ವೈದ್ಯಕೀಯ ಶಿಕ್ಷಣವನ್ನು ಹಿಂದಿ ಭಾಷೆಯಲ್ಲಿ ನೀಡುವ ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪರಿಚಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಮೂರು ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಇದಾಗಿ ಎರಡು ದಿನಗಳಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ಒತ್ತಾಯಿಸಿದ್ದಾರೆ.
ಈ ವಾರದ ಆರಂಭದಲ್ಲಿ ಭೋಪಾಲ್‌ನಲ್ಲಿ ಎಂಬಿಬಿಎಸ್‌ಗಾಗಿ ಹಿಂದಿಯಲ್ಲಿ ವೈದ್ಯಕೀಯ ಜೀವರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ ಶರೀರಶಾಸ್ತ್ರ ವಿಷಯಗಳ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಲಾಗಿತ್ತು.












Click it and Unblock the Notifications