Enforcement Directorate: 500 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡ ಇಡಿ
ನವದೆಹಲಿ, ಅಕ್ಟೋಬರ್ 29: ಮಹಾರಾಷ್ಟ್ರದ ನಾಗ್ಪುರದ ಜಾರಿ ನಿರ್ದೇಶನಾಲಯ ವಿಭಾಗದ ಬಹುದೊಡ್ಡ ಕಾರ್ಯಾಚರಣೆಯನ್ನು ನಡೆಸಿದೆ. ದೇಶದ ವಿವಿಧ ಕಡೆ ಸುಮಾರು 503.16 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಕಾರ್ಪೊರೇಟ್ ಪವರ್ ಲಿಮಿಟೆಡ್ ಮತ್ತು ಅದರ ಪ್ರಮೋಟರ್ಸ್ ನಿರ್ದೇಶಕರಿಗೆ ಸೇರಿದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆಸ್ತಿ ಮುಟ್ಟುಗೋಲು ನಡೆದಿದೆ.
ಮಹಾರಾಷ್ಟ್ರ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದ್ದು 503.16 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಿರ್ದೇಶಕರಾದ ಮನೋಜ್ ಜೈಸ್ವಾಲ್, ಅಭಿಜಿತ್ ಜೈಸ್ವಾಲ್, ಅಭಿಷೇಕ್ ಜೈಸ್ವಾಲ್ ಮತ್ತು ಇತರರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅನ್ವಯ ಕಾರ್ಯಾಚಣೆ ನಡೆಸಿ ಅಕ್ಟೋಬರ್ 24ರಂದು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಕ್ಟೋಬರ್ 28ರಂದು ಜಾರಿ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದೆ.
ಯೂನಿಯನ್ ಬ್ಯಾಂಕ್ ಕಾರ್ಪೊರೇಟ್ ಪವರ್ ಲಿಮಿಟೆಡ್ ಮತ್ತು ಅದರ ಪ್ರಮೋಟರ್ಸ್ ನಿರ್ದೇಶಕರಿಗೆ ಸೇರಿದ ಬ್ಯಾಂಕ್ ವಂಚನೆ ಪ್ರಕರಣದ ಕುರಿತು ಸಿಬಿಐಗೆ ದೂರು ನೀಡಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದ ಕಾರಣಕ್ಕೆ ಜಾರಿ ನಿರ್ದೇಶನಾಲಯ ಸಹ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿತ್ತು.
4 ಸಾವಿರ ಕೋಟಿ ರೂ. ವಂಚನೆ: ಸುಮಾರು 4 ಸಾವಿರ ಕೋಟಿ ರೂ. ಮೊತ್ತದ ಬ್ಯಾಂಕ್ ವಂಚನೆ ಪ್ರಕರಣವಿದು ಎಂದು ಅಂದಾಜಿಸಲಾಗಿದೆ. ಜಾರಿ ನಿರ್ದೇಶನಾಲಯ ಕಾರ್ಪೊರೇಟ್ ಪವರ್ ಲಿಮಿಟೆಡ್‌ನ ಕುರಿತು ತನಿಖೆಯನ್ನು ಕೈಗೊಂಡಿತ್ತು. ಆಗಸ್ಟ್‌ನಲ್ಲಿ ಆರೋಪಿಗಳ ಮನೆಗಳ ಮೇಲೆ ಇಡಿ ದಾಳಿ ನಡೆಸಿತ್ತು. 223 ಕೋಟಿ ರೂ. ಮೌಲ್ಯದ ಶೇರು, ಬಾಂಡ್‌ಗಳನ್ನು ವಶಕ್ಕೆ ಪಡೆದುಕೊಂಡಿತ್ತು.
ದಾಳಿಯ ವೇಳೆ 56 ಲಕ್ಷ ರೂ. ನಗದು ಹಣ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ದೂರು ನೀಡಿದ್ದ ಯೂನಿಯನ್ ಬ್ಯಾಂಕ್ ಆರೋಪಿಗಳಿಂದ ಬ್ಯಾಂಕ್‌ಗೆ 11,000 ಕೋಟಿ ರೂ. ಬಾಕಿ ಬರಬೇಕಿದೆ ಎಂದು ಹೇಳಿತ್ತು. ಆಸ್ತಿಗಳನ್ನು ಅಡವಿಟ್ಟು ಆರೋಪಿಗಳು ಬ್ಯಾಂಕ್‌ನಿಂದ ಸಾಲವನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಆಸ್ತಿಯಲ್ಲಿ ಬ್ಯಾಂಕ್ ಠೇವಣಿಗಳು, ಮ್ಯೂಚುವಲ್ ಫಂಡ್ ಹೂಡಿಕೆಗಳು, ಷೇರುಗಳು, ವಾಣಿಜ್ಯ ಸಂಕೀರ್ಣಗಳ ಆಸ್ತಿ, ಹಲವು ಭೂಮಿಯ ದಾಖಲೆಗಳು ಸೇರಿವೆ. ಈ ಎಲ್ಲಾ ಹೂಡಿಕೆಗಳು ಮನೋಜ್ ಜೈಸ್ವಾಲ್ ಮತ್ತು ಅವರ ಕುಟುಂಬಕ್ಕೆ ಸೇರಿದವು.
ಸಿಬಿಐ ಕಾರ್ಪೊರೇಟ್ ಪವರ್ ಲಿಮಿಟೆಡ್ ಮತ್ತು ಅದರ ಪ್ರಮೋಟರ್ಸ್ ನಿರ್ದೇಶಕರು ಒಳಸಂಚು ನಡೆಸಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲು ಮಾಡಿತ್ತು. ಸಹಿಯನ್ನು ನಕಲಿ ಮಾಡುವುದು ಮತ್ತು ವಂಚನೆಯನ್ನು ಮಾಡಲಾಗಿದೆ ಎಂದು ತನಿಖೆ ವೇಳೆ ಪತ್ತೆಯಾಗಿತ್ತು.
ಯೂನಿಯನ್ ಬ್ಯಾಂಕ್‌ನಲ್ಲಿ ಸಾಲವನ್ನು ಪಡೆಯುವಾಗ ಪೋರ್ಜರಿ ಮಾಡಿದ ದಾಖಲೆಗಳನ್ನು ನೀಡಲಾಗಿದೆ. ಸುಮಾರು 4037 ಕೋಟಿ ಸಾಲವನ್ನು ಪಡೆಯಲಾಗಿದ್ದು, ಅದು ಬಡ್ಡಿ ಎಲ್ಲಾ ಸೇರಿ ಈಗ 11,379 ಕೋಟಿ ರೂ. ಆಗಿದೆ ಎಂದು ದೂರಿನಲ್ಲಿ ಬ್ಯಾಂಕ್ ವಿವರಣೆ ನೀಡಿತ್ತು.
ವಂಚನೆ ಮಾಡುವ ಉದ್ದೇಶಕ್ಕಾಗಿಯೇ ಸುಮಾರು 250 ಶೆಲ್ ಕಂಪನಿಗಳು, 20ಕ್ಕೂ ಅಧಿಕ ಚಾರಿಟಬಲ್ ಟ್ರಸ್ಟ್‌ಗಳನ್ನು ತೋರಿಸಲಾಗಿತ್ತು. ಈ ಎಲ್ಲಾ ಕಂಪನಿಗಳು ಬೋಗಸ್ ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು. ಹೊಸ ಸಾಲಕ್ಕಾಗಿ ಪದೇ ಪದೇ ಅರ್ಜಿ ಸಲ್ಲಿಸುತ್ತಿದ್ದರಿಂದ ಬ್ಯಾಂಕ್ ಅನುಮಾನಗೊಂಡು ಸಿಬಿಐಗೆ ದೂರು ಕೊಟ್ಟಿತ್ತು.












Click it and Unblock the Notifications