ಕೆಲಸದ ಅವಧಿಯಲ್ಲಿ ಉದ್ಯೋಗಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮಾಸ್ಟರ್‌ಪ್ಲ್ಯಾನ್
ಐಟಿ ಮಂದಿ ಕೆಲಸ ಅಂದ್ರೆ ಕೆಲವರು ಆರಾಮ್ ಬಿಡಪ್ಪ, ಕೈತುಂಬಾ ಸಂಬಳ, ನೆಮ್ದಿ ಕೆಲಸ ಅಂತಾರೆ. ಇನ್ನು ಕೆಲವರು ಕೆಲಸದ ಅವಧಿಯಲ್ಲಿ ಕಳ್ಳಾಟ ಆಡುವುದೂ ಉಂಟು. ಸುಮ್ಮನೆ ಲ್ಯಾಪ್‌ಟಾಪ್ ಎದುರು ಕುಳಿತು ಕೆಲಸ ಮಾಡುವಂತೆ ನಟಿಸುತ್ತಾ ತಮ್ಮ ಕಂಪನಿಗಳಿಗೆ ಬಕ್ರಾ ಮಾಡುವ ಚಾಲಾಕಿ ಉದ್ಯೋಗಿಗಳೂ ಇದ್ದಾರೆ. ಆದರೆ ಈ ತಂತ್ರಜ್ಞಾನದ ಯುಗದಲ್ಲಿ ಇಂತಹ ಕಳ್ಳಾಟಗಳು ಹೆಚ್ಚು ದಿನ ನಡೆಯಲ್ಲ. ಯಾಕಂದ್ರೆ ಈಗ ಉದ್ಯೋಗಿಗಳ ಕಳ್ಳಾಟ ಪತ್ತೆ ಹಚ್ಚಲೆಂದೇ ದೈತ್ಯ ಐಟಿ ಕಂಪನಿಗಳು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಇದರಿಂದ ಉದ್ಯೋಗಿಗಳಿಗೆ ಢವಢವ ಶುರುವಾಗಿದೆ.
ಹೌದು ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಕಂಪನಿಯು ಇಂತಹ ವಿಭಿನ್ನ ಹೆಜ್ಜೆ ಇಟ್ಟಿದೆ. ಇಲ್ಲಿವರೆಗೆ ಉದ್ಯೋಗಿಗಳ ಲಾಗಿನ್ ಹಾಗೂ ಲಾಗೌಟ್ ಮಾತ್ರವೇ ಗಣನೆಗೆ ತೆಗೆದುಕೊಂಡು, ಅವರ ಕೆಲಸವನ್ನು ಅಳೆಯಲಾಗುತ್ತಿತ್ತು. ಇನ್ನು ಮುಂದೆ ಕೆಲಸದ ಅವಧಿಯಲ್ಲಿ ಕಳ್ಳಾಟ ಆಡುವ ಉದ್ಯೋಗಿಗಳನ್ನು ಸುಲಭವಾಗಿ ಪತ್ತೆ ಹಚ್ಚಲು ಕಂಪನಿ ಮುಂದಾಗಿದೆಯಂತೆ. ಉದ್ಯೋಗಿಗಳು ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಎಷ್ಟು ಸಮಯ ಸಕ್ರಿಯವಾಗಿರುತ್ತಾರೆ? ಮತ್ತು ಕೆಲಸದ ಸಮಯದಲ್ಲಿ ಅವರು ಯಾವ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ಬಳಸುತ್ತಾರೆ ಎಂಬುದನ್ನು ಸಹ ಪತ್ತೆಹಚ್ಚಲು ವಿವಿಧ ಟೂಲ್‌ಗಳನ್ನು ಬಳಸಲು ಮುಂದಾಗಿದ್ದು, ಈಗಾಗಲೇ ಈ ನಿರ್ವಹಣಾ ಸಾಧನಗಳ ಕುರಿತು ತರಬೇತಿ ನೀಡಲು ಸಹ ಪ್ರಾರಂಭಿಸಿದೆ.

ಈ ಟೂಲ್‌ಗಳು ಉದ್ಯೋಗಿಗಳ ಮೌಸ್ ಮತ್ತು ಕೀಬೋರ್ಡ್ ಚಟುವಟಿಕೆಯನ್ನು ದಾಖಲಿಸುತ್ತದೆ. ಉದ್ಯೋಗಿಗಳು ಎಷ್ಟು ಸಮಯದವರೆಗೆ ಕೆಲಸ ಮಾಡುತ್ತಾರೆ ಎನ್ನುವುದು ಕೂಡ ಸುಲಭವಾಗಿ ತಿಳಿಯುತ್ತೆ. ಒಂದು ವೇಳೆ 300 ಸೆಕೆಂಡುಗಳಿಗಿಂತ ಹೆಚ್ಚು ಕಾಲ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಯಾವುದೇ ಚಟುವಟಿಕೆ ಇಲ್ಲದಿದ್ದರೆ ಆ ಉದ್ಯೋಗಿಯನ್ನು ಟ್ಯಾಗ್ ಮಾಡಬಹುದು. ಲ್ಯಾಪ್‌ಟಾಪ್ 15 ನಿಮಿಷಕ್ಕಿಂತ ಹೆಚ್ಚಿನ ಸಮಯ ನಿಷ್ಕ್ರಿಯವಾಗಿದ್ದರೆ ಆ ಉದ್ಯೋಗಿ ಲ್ಯಾಪ್‌ಟಾಪ್‌ನಿಂದ ದೂರ ಎಂದು ಗುರುತಿಸಬಹುದು. ಈ ಬಗ್ಗೆ ನಿಖರವಾದ ಮಾಹಿತಿಯನ್ನು ಮೇಲ್ವರ್ಗದ ಸಿಬ್ಬಂದಿಗೆ ತಲುಪಿಸುತ್ತವೆ ಎನ್ನಲಾಗಿದೆ.
ಸಾಮಾನ್ಯವಾಗಿ ಪ್ರೋಹ್ಯಾನ್ಸ್ ಶೈಲಿಯ ಡ್ಯಾಶ್‌ಬೋರ್ಡ್‌ಗಳು ಬಳಕೆದಾರರು ಲಾಗಿನ್ ಆಗಿರುವಾಗ ಯಾವ ಅಪ್ಲಿಕೇಶನ್‌ಗಳು ತೆರೆದಿರುತ್ತವೆ ಮತ್ತು ವಿಭಿನ್ನ ಕಾರ್ಯಗಳಿಗೆ ಎಷ್ಟು ಸಮಯವನ್ನು ವ್ಯಯ ಮಾಡುತ್ತಾರೆ ಎಂಬುದನ್ನು ದಾಖಲಿಸುತ್ತದೆ. ಇದರಿಂದ ಉದ್ಯೋಗಿ ಎಷ್ಟು ಗಂಟೆ ಕೆಲಸ ಮಾಡುತ್ತಾನೆ? ಎಷ್ಟು ಗಂಟೆ ಮಾಡಲ್ಲ ಎಂಬುದು ಸುಲಭವಾಗಿ ಪತ್ತೆ ಹಚ್ಚುತ್ತದೆ. ವರದಿಗಳ ಪ್ರಕಾರ ಕಾಗ್ನಿಜೆಂಟ್ ತನ್ನ ಕಂಪನಿಯಾದ್ಯಂತ ಈ ತಂತ್ರಜ್ಞಾನ ಪರಿಚಯಿಸಲು ಮುಂದಾಗಿದೆ.

ವರ್ಕ್ ಫ್ರಂ ಹೋಂ, ಹೈಬ್ರಿಡ್ ಉದ್ಯೋಗಿಗಳಿಂದ ವಿರೋಧ
ಅಲ್ಲದೆ ಈ ಹಂತದಲ್ಲಿ, ಪ್ರೊಹ್ಯಾನ್ಸ್ ಡೇಟಾವನ್ನು ವೈಯಕ್ತಿಕ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕಾಗಿ ಬಳಸಲಾಗುವುದಿಲ್ಲ ಎಂದು ಕಾಗ್ನಿಜೆಂಟ್ ಸ್ಪಷ್ಟಪಡಿಸಿದೆ. ಬದಲಿದೆ ಉದ್ಯೋಗಿಗಳನ್ನ ಮೇಲ್ವಿಚಾರಣೆ ಮಾಡುವ ಬದಲು ಯೋಜನಾ ಮಟ್ಟದ ದಕ್ಷತೆ ಸುಧಾರಿಸುವುದು ನಮ್ಮ ಗುರಿ ಎಂದು ಹೇಳಿದೆ. ಕೆಲ ಉದ್ಯೋಗಿಗಳು ಹೈಬ್ರಿಡ್ ಮತ್ತು ರಿಮೋಟ್ ಕೆಲಸದ ಮಾದರಿಗಳನ್ನು ಅನುಸರಿಸುತ್ತಿರುವ ಕಾರಣ ಕೆಲಸದ ಸ್ಥಳಗಳ ಈ ರೀತಿಯ ಕಣ್ಗಾವಲು ಸರಿಯಲ್ಲ ಎಂದು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಈ ಸ್ಪಷ್ಟನೆ ನೀಡಿರುವುದಾಗಿ ತಿಳಿದುಬಂದಿದೆ.
ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ಕೆಲಸದ ಹರಿವಿನ ವಿನ್ಯಾಸದಲ್ಲಿ ಗೋಚರತೆಯನ್ನು ಹೆಚ್ಚಿಸಲು, ಐಟಿ ಸಂಸ್ಥೆಗಳು ಮತ್ತು ರಿಯಲ್ ಎಸ್ಟೇಟ್ ಸೇವಾ ಪೂರೈಕೆದಾರರು ಸೇರಿದಂತೆ ಜಾಗತಿಕ ಕಂಪನಿಗಳಲ್ಲಿ ಪ್ರೊಹ್ಯಾನ್ಸ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದೀಗ ಉದ್ಯೋಗಿಗಳ ಕಾರ್ಯಕ್ಷಮತೆ ಕಂಡುಹಿಡಿಯಲು ಈ ತಂತ್ರಜ್ಞಾನದ ಮೊರೆ ಹೋಗಿರುವುದು ಉದ್ಯೋಗಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.












Click it and Unblock the Notifications