ಭೀಮಾ ಕೋರೆಗಾಂವ್ ಪ್ರಕರಣ: ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾಗೆ ಸುಪ್ರೀಂ ಜಾಮೀನು
ಬೆಂಗಳೂರು, ಜುಲೈ. 28: ಭೀಮಾ ಕೋರೆಗಾಂವ್ ಹಿಂಸಾಚಾರ (ಎಲ್ಗಾರ್ ಪರಿಷತ್ - ಮಾವೋವಾದಿ ಸಂಪರ್ಕ) ಪ್ರಕರಣದಲ್ಲಿ ಹೋರಾಟಗಾರರಾದ ವರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದ್ದಾರೆ. ಇಬ್ಬರು ಕಳೆದ ಐದು ವರ್ಷಗಳಿಂದ ಬಂಧನದಲ್ಲಿದ್ದರು.
ಭೀಮಾ ಕೋರೆಗಾಂವ್ - ಎಲ್ಗಾರ್ ಪರಿಷದ್ ಆರೋಪಿಗಳಾದ ವರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರು ಆಗಸ್ಟ್ 2018 ರಿಂದ ಸುದೀರ್ಘ ಸೆರೆವಾಸವನ್ನು ಅನುಭವಿಸಿದ್ದಾರೆ. ಇದನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಇಬ್ಬರ ವಿರುದ್ಧ ಮಾವೋವಾದಿ ಸಂಪರ್ಕಕ್ಕಾಗಿ ಕಠಿಣ ಯುಎಪಿಎ ಅಡಿಯಲ್ಲಿ ಆರೋಪಗಳನ್ನು ಎದುರಿಸಿದ್ದಾರೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಜಾಮೀನಿನ ಕಟ್ಟುನಿಟ್ಟಾದ ಷರತ್ತುಗಳನ್ನು ವಿಧಿಸಿದೆ. ತಲಾ ಒಂದು ಮೊಬೈಲ್ ಅನ್ನು ಬಳಸಬೇಕಾಗುತ್ತದೆ. ಅವರ ಸ್ಥಳಕ್ಕೆ ತನಿಖಾಧಿಕಾರಿಗಳು 24X7 ಪ್ರವೇಶಿಸಬಹುದು ಮತ್ತು ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅನುಮತಿಯಿಲ್ಲದೆ ಮಹಾರಾಷ್ಟ್ರವನ್ನು ತೊರೆಯಲು ಅವರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ತಮ್ಮ ಪಾಸ್‌ಪೋರ್ಟ್‌ಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇಬ್ಬರ ಜಾಮೀನನ್ನು ಈ ಹಿಂದೆ ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ಕಾರ್ಯಕರ್ತರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವು ಪುಣೆಯಲ್ಲಿ ಡಿಸೆಂಬರ್ 31, 2017 ರಂದು ನಡೆದ ಎಲ್ಗಾರ್ ಪರಿಷತ್ ಸಮಾವೇಶಕ್ಕೆ ಸಂಬಂಧಿಸಿದೆ, ಪುಣೆ ಪೊಲೀಸರ ಪ್ರಕಾರ ಈ ಸಮಾವೇಶಕ್ಕೆ ಮಾವೋವಾದಿಗಳಿಂದ ಹಣ ಪಡೆದಿದೆ ಎಂದು ಆರೋಪಿಸಲಾಗಿದೆ.
ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣಗಳು ಮರುದಿನ ಪುಣೆಯ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.












Click it and Unblock the Notifications