ಛತ್ತೀಸ್‌ಗಢ ವಿಧಾನಸಭೆ ಚುನಾವಣೆ: ನಕ್ಸಲರ ದಾಳಿ, ಐಇಡಿ ಸ್ಫೋಟ, ಭದ್ರತಾ ಸಿಬ್ಬಂದಿಗೆ ಗಾಯ
ಛತ್ತೀಸ್‌ಗಢದಲ್ಲಿ ಮಂಗಳವಾರ ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯ ಮತದಾನದ ಸಂದರ್ಭದಲ್ಲಿ ನಕ್ಸಲೀಯರು ಐಇಡಿ ಸ್ಫೋಟಿಸಿದ್ದು ಮತ್ತು ಭದ್ರತಾ ಪಡೆಗಳ ನಡುವೆ ಎಂಟು ಎನ್‌ಕೌಂಟರ್‌ಗಳು ನಡೆದಿವೆ ಅಧಿಕಾರಿಗಳು ತಿಳಿಸಿದ್ದಾರೆ.
ಸುಕ್ಮಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆ, ಅದೇ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಪ್ರಮುಖ ಘಟಕವಾದ ಕೋಬ್ರಾ ಕಮಾಂಡೋ ಗಾಯಗೊಂಡಿದ್ದಾರೆ.

ಚುನಾವಣಾ ಕರ್ತವ್ಯದ ವೇಳೆ ಕಂಕೇರ್ ಜಿಲ್ಲೆಯಲ್ಲಿ ಸೋಮವಾರ ನಡೆದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಗಡಿ ಭದ್ರತಾ ಪಡೆಯ ಯೋಧ ಮಂಗಳವಾರ ರಾಯ್‌ಪುರದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಭದ್ರತಾಪಡೆಗಳು- ನಕ್ಸಲರ ಮುಖಾಮುಖಿ
ಸುಕ್ಮಾ ಜಿಲ್ಲೆಯಲ್ಲಿ ಮಂಗಳವಾರ ಬಂದಾ, ಮಿಂಪಾ ಮತ್ತು ಲಕಾಹಪಾಲ್ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಂಪಾ ಎನ್‌ಕೌಂಟರ್‌ನಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಕಂಕೇರ್ ಜಿಲ್ಲೆಯಲ್ಲಿ, ಛೋಟೆ ಪಖಂಜೂರ್ ಮತ್ತು ಛೋಟೆಬೆಥಿಯಾ ಪ್ರದೇಶಗಳಲ್ಲಿ ಎನ್‌ಕೌಂಟರ್‌ಗಳು ನಡೆದಿವೆ ಎಂದು ಮಾಹಿತಿ ನೀಡಿದ್ದಾರೆ.
ಬಿಎಸ್‌ಎಫ್‌ನ ಜಂಟಿ ತಂಡ ಮತ್ತು ರಾಜ್ಯ ಪೊಲೀಸ್‌ನ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಮತ್ತು ನಕ್ಸಲೀಯರ ನಡುವಿನ ಘರ್ಷಣೆಯ ನಂತರ ಎಕೆ-47 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ಎನ್‌ಕೌಂಟರ್‌ನಲ್ಲಿ ಕೆಲವು ನಕ್ಸಲೀಯರು ಸಾವನ್ನಪ್ಪಿರಬಹುದು ಅಥವಾ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿ ಹೇಳಿದ್ದಾರೆ.
ಬಿಜಾಪುರ ಜಿಲ್ಲೆಯ ಪಡೇದ ಗ್ರಾಮದ ಬಳಿ ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಪಡೆಡಾ ಎನ್‌ಕೌಂಟರ್‌ನಲ್ಲಿ ಕನಿಷ್ಠ ಮೂವರು ನಕ್ಸಲೀಯರು ಸಾವನ್ನಪ್ಪಿದ್ದಾರೆ, ಮೃತದೇಹಗಳ ಜೊತೆ ನಕ್ಸಲೀಯರು ತಪ್ಪಿಸಿಕೊಂಡು ಹೋಗುವುದನ್ನು ಡ್ರೋನ್ ಕ್ಯಾಮೆರಾಗಳು ಸೆರೆ ಹಿಡಿದಿವೆ ಎಂದು ಹೇಳಿದ್ದಾರೆ.
ನಕ್ಸಲೀಯರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಾರಾಯಣಪುರ ಜಿಲ್ಲೆಯ ಗುಡಾಡಿ ಗ್ರಾಮದ ಬಳಿ ಮತ್ತು ದಾಂತೇವಾಡ ಜಿಲ್ಲೆಯ ಮಂಗ್ನಾರ್ ಗ್ರಾಮದ ಬಳಿ ಮತ್ತೊಂದು ಗುಂಡಿನ ಚಕಮಕಿ ನಡೆದಿದ್ದು, ಭದ್ರತಾ ಸಿಬ್ಬಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ.
90 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ ಎರಡು ಹಂತದ ಚುನಾವಣೆಯ ಮೊದಲ ಹಂತದಲ್ಲಿ ಮಂಗಳವಾರ 20 ಕ್ಷೇತ್ರಗಳಲ್ಲಿ ಮತದಾನ ನಡೆಯಿತು, ಅವುಗಳಲ್ಲಿ 12 ನಕ್ಸಲೈಟ್ ಪೀಡಿತ ಬಸ್ತಾರ್ ವಿಭಾಗದಲ್ಲಿದೆ. ನಕ್ಸಲೀಯರ ಹಿಂಸಾಚಾರ ಮತ್ತು ಬಹಿಷ್ಕಾರದ ಕರೆ ಮಧ್ಯೆ ಶೇ.71.48ರಷ್ಟು ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications