Rahul Gandhi: ಪ್ರಧಾನಿ ಟೀಕಿಸಿದ್ದ 'ರಾಗಾ'ಗೆ ಚುನಾವಣಾ ಆಯೋಗ ಖಡಕ್ 'ಎಚ್ಚರಿಕೆ'
ಬೆಂಗಳೂರು, ಮಾರ್ಚ್ 07: ಲೋಕಸಭಾ ಚುನಾವಣೆ 2024 ಹೊತ್ತಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೆ ಮುಖಭಂಗವಾಗಿದೆ. ಪ್ರಧಾನಿ ಮೋದಿ ಟೀಕಿಸಿದ್ದ ರಾಹುಲ್ ಗಾಂಧಿ ಅವರಿಗೆ ಭಾರತೀಯ ಚುನಾವಣೆ ಆಯೋಗವು ಚಾಟಿ ಬೀಸಿದೆ.
ಕಾಂಗ್ರೆಸ್‌ನ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲಘುವಾಗಿ ಮಾತನಾಡಿ ಕೆಲವು ಬಾರಿ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಪ್ರಧಾನಿ ಮೋದಿ 'ಅಪಶಕುನ, ಪಿಕ್ ಪಾಕೇಟರ್' ಎಂದು ಟೀಕಿಸಿದ್ದ ರಾಹುಲ್ ಗಾಂಧಿಯವರಿಗೆ ಭಾರತೀಯ ಚುನಾವಣೆ ಆಯೋಗವು ಖಡಕ್ ಎಚ್ಚರಿಕೆ ಕೊಟ್ಟಿದೆ.

ಭವಿಷ್ಯದಲ್ಲಿ ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ವಹಿಸಿ. ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಯೋಗವು ರಾಹುಲ್ ಗಾಂಧಿಯವರಿಗೆ ಎಚ್ಚರಿಕೆ ನೀಡಿದೆ.
ಬಿಜೆಪಿ ನಾಯಕರಿಗೆ ಮುನ್ನಡೆ
2023ರ ನವೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅಪಶಕುನ, ಪಿಕ್ ಪಾಕೇಟರ್ ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ರಾಹುಲ್ ಗಾಂಧಿಯವರ ವಿರುದ್ಧ ದೂರು ನೀಡಿದ್ದರು ಆಯೋಗ ಕ್ರಮ ಕೈಗೊಂಡಿರಲಿಲ್ಲ.
ನಂತರ ಬಿಜೆಪಿ ನಾಯಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದರು. ಬಿಜೆಪಿ ನಾಯಕರ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಪ್ರಕರಣ ಸಂಬಂಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚುನಾವಣೆ ಆಯೋಗಕ್ಕೆ ನಿರ್ದೇಶಿಸಿತ್ತು.
ನೀತಿ ಸಂಹಿತೆ ಉಲ್ಲಂಘಿಸಿದರೆ ಕ್ರಮ
ನ್ಯಾಯಾಲಯದ ಸೂಚನೆ ಯಂತೆ ಕೇಂದ್ರ ಚುನಾವಣೆ ಆಯೋಗವರು ರಾಹುಲ್ ಗಾಂಧಿಯವರಿಗೆ ಚಾಟಿ ಬೀಸಿದೆ. ಸಾರ್ವಜನಿಕವಾಗಿ ಮಾತನಾಡುವಾಗಿ ಕಾಳಜಿ ವಹಿಸಿ. ಭವಿಷ್ಯದಲ್ಲಿ ಜಾಗರೂಕರಾಗಿ ಮಾತನಾಡಿ ಎಂದು ಸಲಹೆ ನೀಡಿದೆ.

ಚುನಾವಣೆ ಪ್ರಚಾರದ ವೇಳೆ ರಾಜಕೀಯ ಪಕ್ಷಗಳು, ಸ್ಟಾರ್ ಪ್ರಚಾರಕರು ಅಥವಾ ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದಲ್ಲಿ ಕಾನೂನಿನ ಮೂಲಕ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ. ಜೊತೆಗೆ ಆಯೋಗದಿಂದ ಮಾರ್ಚ್ 1ರಂದು ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರು ಗಮನದಲ್ಲಿಟ್ಟುಕೊಳ್ಳುವಂತೆ ಹೇಳಿದೆ.
'ಮೋದಿ' ಉಪನಾಮ ಟೀಕಿಸಿ ಶಿಕ್ಷೆಗೆ ಗುರಿಯಾಗಿದ್ದ 'ರಾಗಾ'
ಪ್ರಧಾನಿ ಮೋದಿಯವರ ಉಪನಾಮ 'ಮೋದಿ' ಹೆಸರು ಉಲ್ಲೇಖಿಸಿ ಈ ಹಿಂದೆ ರಾಹುಲ್ ಗಾಂಧಿ ಅವರು ತೀವ್ರ ಟೀಕೆ ಮಾಡಿದ್ದರು. ಈ ಸಂಬಂಧ ಗುಜರಾತ್ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿತ್ತು. ನಂತರ ಶಿಕ್ಷೆ ಮರುಪರಿಶೀಲಿಸುವಂತೆ ಕೋರಿದ್ದ ಅರ್ಜಿಯನ್ನು ಸಹ ಗುಜರಾತ್ ಹೈಕೋರ್ಟ್ ತಿರಸ್ಕರಿಸಿತ್ತು.
ನೀರವ್ ಮೋದಿ... ಲಲೀತ್ ಮೋದಿ.....ಪ್ರಧಾನಿ ಮೋದಿ...ಈ ಮೋದಿ ಹೆಸರಿನವರು ಕಳ್ಳರು ಎಂದು ರಾಹುಲ್ ಗಾಂಧಿ ಟೀಕಿಸಿ ಪೇಚಿಗೆ ಸಿಲುಕಿದ್ದರು. ಇದೀಗ ಪ್ರಧಾನಿಗೆ ಅಪಶಕುನ, ಪಿಕ್ ಪಾಕೆಟರ್ ಎನ್ನುವ ಮೂಲಕ ಆಯೋಗದಿಂದ ಬುದ್ಧಿ ಹೇಳಿಸಿಕೊಂಡಿದ್ದಾರೆ.












Click it and Unblock the Notifications