ಎಂಕೆ ಗಣಪತಿ ಸಾವಿನ ಪ್ರಕರಣ ಸಿಬಿಐಗೆ, ಜಾರ್ಜ್ ಗೆ ನಡುಕ
Recommended Video

ನವದೆಹಲಿ, ಸೆ. 05: ಡಿವೈಎಸ್ಪಿ ಎಂ.ಕೆ ಗಣಪತಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆ ಒಪ್ಪಿಸಿ ಮಂಗಳವಾರ ಮಧ್ಯಾಹ್ನದ ವೇಳೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಎಂ.ಕೆ ಗಣಪತಿ ಅವರ ತಂದೆ ಕುಶಾಲಪ್ಪ ಹಾಗೂ ಸೋದರ ಮಾಚಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ಅದೇಶ ಹೊರಡಿಸಿದೆ. ಈ ಹಿಂದೆ ಸಿಬಿಐ ತನಿಖೆಗೆ ಒಪ್ಪಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು.

ಸಿಬಿಐ ತನಿಖೆ ಜತೆಗೆ ಮಾಜಿ ಗೃಹ ಸಚಿವ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್ ಹಾಗೂ ಪ್ರಣಬ್ ಮೊಹಂತಿ ಅವರ ವಿಚಾರಣೆ ನಡೆಸಿ ಮೂರು ತಿಂಗಳಿನೊಳಗೆ ವರದಿ ಸಲ್ಲಿಸುವಂತೆ ನ್ಯಾ. ಯು ಲಲಿತ್ ನ್ಯಾ ಗೊಯೆಲ್ ಅವರಿದ್ದ ನ್ಯಾಯಪೀಠ ನಿರ್ದೇಶಿಸಿದೆ.
ಮಡಿಕೇರಿಯ ಲಾಡ್ಜ್ ನಲ್ಲಿ(ರೂಮ್ ನಂಬರ್ 315) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ಗಣಪತಿ ತಮ್ಮ ಜೀವಕ್ಕೆ ಯಾವುದೇ ರೀತಿಯ ತೊಂದರೆಯಾದರೆ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಎ.ಎಂ.ಪ್ರಸಾದ್ ಅವರೇ ಕಾರಣವೆಂದು ಆರೋಪ ಮಾಡಿದ್ದರು.
ವಿಡಿಯೋ ಸಾಕ್ಷ್ಯವಿದ್ದರೂ ಯಾವುದೇ ಕ್ರಮ ಜರುಗಿಸುವಲ್ಲಿ ಕರ್ನಾಟಕ ಸರ್ಕಾರ, ತನಿಖಾ ತಂಡ ವಿಫಲವಾಗಿದೆ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಎಂಕೆ ಗಣಪತಿ ಅವರ ತಂದೆ ಎಂಕೆ ಗಣಪತಿ ತಂದೆ ಕುಶಾಲಪ್ಪ ಹಾಗೂ ಸಹೋದರ ಎಂ.ಕೆ. ಮಾಚಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.
ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಜಾರ್ಜ್, ಪ್ರಣವ್ ಮೊಹಾಂತಿ ಹಾಗೂ ಎ.ಎಂ ಪ್ರಸಾದ್ ಮೂವರಿಗೂ ಕ್ಲೀನ್ ಚಿಟ್ ನೀಡಿ, ಬಿ ರಿಪೋರ್ಟ್ ಸಲ್ಲಿಸಿದೆ. ಸಿಬಿಐ ತನಿಖೆಗೆ ಕೋರಿ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡ ಬಳಿಕ, ಗಣಪತಿ ಅವರ ಸೋದರ ಮಾಚಯ್ಯ, ಸೋದರಿ ಬಬಿತಾ, ತಂದೆ ಕುಶಾಲಪ್ಪ ಎಲ್ಲರೂ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿದ್ದರು.
ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾದ ಲೋಪಗಳಾಗಿದ್ದು, ಸಿಐಡಿ ತನಿಖೆಯಲ್ಲಿ ಹಲವಾರು ಅಂಶಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಗಣಪತಿ ಬಳಸುತ್ತಿದ್ದ ಪೆನ್ ಡ್ರೈವ್, ಮೊಬೈಲ್ ಫೋನ್ ಗಳ ಮಾಹಿತಿ ಅಳಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ರಾಜ್ಯದ ಪ್ರಭಾವಿ ನಾಯಕರಿಗೆ ಕರೆ ಮಾಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.












Click it and Unblock the Notifications