ಕರ್ನಾಟಕದ ಸೋಲಿನಿಂದ ಬಿಜೆಪಿ ಅವಧಿಗೂ ಮುನ್ನ ಸಂಸತ್ ಚುನಾವಣೆ ಘೋಷಿಸಬಹುದು?: MK ಸ್ಟಾಲಿನ್
ಚೆನ್ನೈ, ಜೂನ್ 11: ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಪತನವಾಗಿ ಕಾಂಗ್ರೆಸ್ ಸೇರಿದಂತೆ ಮೈತ್ರಿಪಕ್ಷಗಳ ಸರ್ಕಾರ ರಚನೆಯಾಗುತ್ತಿವೆ. ಇದಕ್ಕೆ ಕರ್ನಾಟಕ ಹೊರತಾಗಿಲ್ಲ, ಇಲ್ಲಿನ ಬಿಜೆಪಿ ಸೋಲು ಹಾಗೂ 2024ರ ಲೋಕಸಭಾ ಚುನಾವಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮಹತ್ವದ ಮಾಹಿತಿಗಳನ್ನು ಹೊರ ಹಾಕಿದ್ದಾರೆ.
ಭಾನುವಾರ ಸೇಲಂ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಕರ್ನಾಟಕದಲ್ಲಿ ಸೋತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವು ಅವಧಿಗೂ ಮುನ್ನವೇ 2024ರ ಸಂಸತ್ ಚುನಾವಣೆಯನ್ನು ಬೇಗನೇ ಘೋಷಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ಭಾರತಾದ್ಯಂತ ಬಿಜೆಪಿ ಪ್ರಭಾವ, ವರ್ಚಸ್ಸು ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಬಿಜೆಪಿ ನಾಯಕರು ಯಾವ ನಿರ್ಧಾರವನ್ನು ಕೈಗೊಳ್ಳಬಹುದು. ಕರ್ನಾಟಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಸಂಸತ್ತಿನ ಚುನಾವಣೆಯನ್ನು ಮೊದಲೇ ಘೋಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ತಮಿಳುನಾಡಿಗೆ ಏನು ಮಾಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳುತ್ತಿದ್ದೇನೆ. ತಮಿಳುನಾಡು ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮೀಸಲಿಟ್ಟಿರುವ ವಿಶೇಷ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯ ಸಾಧನೆ ಬಗ್ಗೆ ಅವರು ಸವಾಲೆಸೆದರು.
ಬಿಜೆಪಿಗೆ ಸ್ಟಾಲಿನ್ ಮನವಿ ಏನು?
ಇಲ್ಲಿನ ವೆಲ್ಲೂರಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚೆನ್ನೈಗೆ ಆಗಮಿಸಲಿದ್ದಾರೆ ಎಂಬ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಅವರು 2024ರ ಸಂಸತ್ ಚುನಾವಣೆಗೆ ಸಜ್ಜಾಗುತ್ತಿರುವುದು ಗೊತ್ತಾಗುತ್ತದೆ. ಅಮಿತ್ ಶಾ ಅವರು ತಮಿಳುನಾಡು ರಾಜ್ಯಕ್ಕೆ ಮೀಸಲಿಟ್ಟ ವಿಶೇಷ ಯೋಜನೆಗಳ ಪಟ್ಟಿ ಬಿಡುಗಡೆ ಮಾಡುವಂತೆ ನಾನು ಮನವಿ ಮಾಡುತ್ತೇನೆ ಎಂದರು.

ಮುಂದಿನ ವರ್ಷ 2024ರ ಏಪ್ರಿಲ್ ಇಲ್ಲವೇ ಮೇ ತಿಂಗಳ ಆಸುಪಾಸಿಗೆ ನಡೆಯಲಿರುವ ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಸಜ್ಜುಗೊಳಿಸಲು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಾನು ಸಹ ಭಾಗವಹಿಸಲಿದ್ದಾರೆ ಎಂದು ಸ್ಟಾಲಿನ್ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ದೇಶದ ವಿರೋಧ ಪಕ್ಷಗಳನ್ನು ಸಂಘಟಿಸುವ ಉದ್ದೇಶಕ್ಕೆ ಮೊದಲ ಅಡಿಪಾಯ ಬಿಹಾರ್ ಸಿಎಂ ನೇತೃತ್ವದ ಸಭೆಯಲ್ಲಿ ಬೀಳಲಿದೆ. ಈ ಮೂದಲು ಸಭೆಯನ್ನು ಜೂನ್ 12 ರಂದು ಕರೆಯಲಾಗಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿದೆ.
ದೆಹಲಿ ಸಿಎಂನಿಂದ ವಿಪಕ್ಷಗಳ ಒಗ್ಗೂಡಿಸುವಿಕೆ ಅಭಿಯಾನ
ಈಗಾಗಲೇ ಆಮ್ ಆದ್ಮಿ ಪಕ್ಷದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಮಾನ ಮನಸ್ಕ ವಿಪಕ್ಷಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಒಗ್ಗೂಡಿಸುವ ಅಭಿಯಾನವನ್ನೇ ಆರಂಭಿಸಿದ್ದಾರೆ. ಪಂಜಾಬ್ ಸಿಎಂ ಭಗವಂತ ಮಾನ್ ಅವರನ್ನು ಈಗಾಗಲೇ ಭೇಟಿ ಮಾಡಿದ್ದಾರೆ.
ಈ ವೇಳೆ ದೆಹಲಿ ಸಿಎಂ ಕೇಜ್ರಿವಾಲ್ ಅವರಿಗೆ ಸಭೆಯಲ್ಲಿದ್ದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸಹ ಬಿಜೆಪಿ ವಿರುದ್ಧ ಬೆಂಲಿಸುವುದಾಗಿ ಹಾಗೂ ಸದನದಲ್ಲಿ ದೆಹಲಿ ಆಡಳಿತ ಸೇವಾ ಕಾಯಿದೆ ಅನ್ನು ವಿರೋಧಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯನ್ನು ಮುಂಬರಲಿರುವ 2024ರ ಚುನಾವಣೆಯಲ್ಲಿ ಅಧಿಕಾರದಿಂದ ದೂರವಿಡಲು ಯೋಜಿಸಿದ್ದಾರೆ. ಆ ಉದ್ದೇಶದ ಭಾಗಾವಾಗೇ ವಿಪಕ್ಷಗಳು ಎಲ್ಲವೂ ಒಗ್ಗೂಡಿಸಿಕೊಂಡು ಚುನಾವಣಾ ತಂತ್ರ ರೂಪಿಸುತ್ತಿದ್ದಾರೆ.












Click it and Unblock the Notifications