ಶ್ವಾಸಕೋಶದಿಂದ ಇಲ್ಲಿಗೂ ಬಂತು ಕೊರೊನಾ ವೈರಸ್!
ನವದೆಹಲಿ, ಆಗಸ್ಟ್ 28: ಕೊರೊನಾ ವೈರಸ್ ಹಾವಳಿ ಶುರುವಾಗಿ ಎಂಟು ತಿಂಗಳು ಕಳೆದಿದೆ. ಆದರೆ ದೇಹದ ವಿವಿಧ ಅಂಗಗಳ ಮೇಲೆ ಅದು ಯಾವ ರೀತಿ ಪರಿಣಾಮ ಬೀರಬಲ್ಲದು ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಕೋವಿಡ್ 19 ದೇಹದ ಅಂಗಗಳ ಮೇಲೆ ಉಂಟುಮಾಡುವ ಹಾನಿಯ ಬಗ್ಗೆ ವಿಜ್ಞಾನಿಗಳು ನಿರಂತರ ಸಂಶೋಧನೆ ನಡೆಸುತ್ತಲೇ ಇದ್ದಾರೆ.
Recommended Video
ಆರಂಭದಲ್ಲಿ ಕೊರೊನಾ ವೈರಸ್ ಮೇಲ್ಭಾಗ ಮತ್ತು ಕೆಳಭಾಗದ ಉಸಿರಾಟದ ವ್ಯವಸ್ಥೆಗೆ ಮುಖ್ಯವಾಗಿ ಹಾನಿ ಮಾಡಲಿದೆ ಎಂದೇ ಭಾವಿಸಲಾಗಿತ್ತು. ಬಳಿಕ ಹೃದಯ ಮತ್ತು ಮೆದುಳಿನ ರೋಗಗಳಿಗೂ ಅದು ಕಾರಣವಾಗಬಲ್ಲದು ಎನ್ನುವುದಕ್ಕೆ ಪುರಾವೆಗಳು ಸಿಕ್ಕಿದ್ದವು.
ಈಗ ಹೊಟ್ಟೆಯ ಕೆಳಭಾಗದಲ್ಲಿರುವ ಅಂಗವಾದ ಮೇದೋಜ್ಜೀರಕ ಗ್ರಂಥಿಗೂ ಕೊರೊನಾ ವೈರಸ್ ಹಾನಿ ಮಾಡಬಲ್ಲದು ಎನ್ನುವುದು ಗೊತ್ತಾಗಿದೆ. ಮೇದೋಜ್ಜೀರಕ ಗ್ರಂಥಿಯಲ್ಲಿನ ಗುಪ್ತ ಕಿಣ್ವಗಳು ಜೀರ್ಣಕ್ರಿಯೆಗೆ ಸಹಕಾರ ನೀಡುತ್ತವೆ. ಇವುಗಳ ಮೇಲೆಯೂ ಕೊರೊನಾ ವೈರಸ್ ದಾಳಿ ಮಾಡುತ್ತವೆ. ಇದು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಇದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಮುಂದೆ ಓದಿ.

ಐವರು ರೋಗಿಗಳಲ್ಲಿ ಸಮಸ್ಯೆ
ಕಳೆದ ಒಂದು ತಿಂಗಳಲ್ಲಿ ಮೇದೋಜ್ಜೀರಕ ಗ್ರಂಥಿಯಲ್ಲಿ ಸಮಸ್ಯೆಯುಳ್ಳ ಕನಿಷ್ಠ ಐವರು ಕೋವಿಡ್ ರೋಗಿಗಳನ್ನು ಪರೀಕ್ಷಿಸಿರುವುದಾಗಿ ಸರ್ ಗಂಗಾ ರಾಮ್ ಆಸ್ಪತ್ರೆಯ ಆಂತರಿಕ ಔಷಧಗಳ ವಿಭಾಗದ ಉಪಾಧ್ಯಕ್ಷ ಡಾ. ಅತುಲ್ ಕಾಕರ್ ಹೇಳಿದ್ದಾರೆ.

ಸಮಸ್ಯೆಗೆ ಬೇರೆ ಕಾರಣಗಳಿಲ್ಲ
ಸಾಮಾನ್ಯವಾಗಿ ಪ್ಯಾಂಕ್ರಿಯಾಟೈಟಿಸ್ ಪಿತ್ತಗಲ್ಲು ಅಥವಾ ಅತಿಯಾದ ಮತ್ತು ಸುದೀರ್ಘ ಸಮಯದ ಮದ್ಯಸೇವನೆಯಿಂದ ಉಂಟಾಗುತ್ತದೆ. ಹೀಗಾಗಿ ಅವರ ಸಮಸ್ಯೆಗಳಿಗೆ ಕೊಲೆಸ್ಟ್ರಾಲ್ ಹೆಚ್ಚಳದ ಕಾರಣ ಸೇರಿದಂತೆ ವಿವಿಧ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಿದ್ದೆವು. ಆದರೆ ಆ ರೋಗಿಗಳಿಗೆ ಇದ್ಯಾವ ಸಮಸ್ಯೆಗಳೂ ಇರಲಿಲ್ಲ. ಹೀಗಾಗಿ ಕೋವಿಡ್ 19ನಿಂದಲೇ ಅವರಲ್ಲಿ ಪ್ಯಾಂಕ್ರಿಯಾಟೈಟಿಸ್ ಉಂಟಾಗಿದೆ ಎಂದು ತೀರ್ಮಾನಕ್ಕೆ ಬಂದೆವು ಎಂದು ಹೇಳಿದ್ದಾರೆ.

ಬೇಗನೆ ಚೇತರಿಕೆ
ಕೋವಿಡ್-19 ಪಾಸಿಟಿವ್ ಇದ್ದು, ಪ್ಯಾಂಕ್ರಿಯಾಟೈಟಿಸ್ ಹೊಂದಿದ್ದ ಎಲ್ಲ ರೋಗಿಗಳೂ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಅವರು ಅತಿಸಾರ ಮತ್ತು ಕಿಬ್ಬೊಟ್ಟೆ ನೋವಿನ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಸಾಮಾನ್ಯವಾಗಿ ಪ್ಯಾಂಕ್ರಿಯಾಸ್‌ನಲ್ಲಿನ ಉರಿ ಶಮನವಾಗಲು ಹಲವು ವಾರಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸಮಾಧಾನಕರ ಸಂಗತಿಯೆಂದರೆ ಕೋವಿಡ್ ಮತ್ತು ಪ್ಯಾಂಕ್ರಿಯಾಟೈಟಿಸ್ ಸಮಸ್ಯೆಯುಳ್ಳ ರೋಗಿಗಳು ಇನ್ನೂ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ಇನ್ನೂ ನಿಗೂಢ ವೈರಸ್
ಚೀನಾದ ವೈದ್ಯಕೀಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಅಧ್ಯಯನ ವರದಿ ಕೂಡ ಕೋವಿಡ್ 19 ರೋಗಿಗಳಲ್ಲಿ ಮೇದೋಜ್ಜೀರಕ ಗ್ರಂಥಿಗಳಲ್ಲಿ ಸಮಸ್ಯೆ ಉಂಟಾಗಿರುವುದನ್ನು ಉಲ್ಲೇಖಿಸಲಾಗಿದೆ. ಎಂಟು ತಿಂಗಳು ಕಳೆದ ಬಳಿಕವೂ ಕೋವಿಡ್-19 ನಿಗೂಢವಾಗಿದೆಯೇ ಇದೆ. ವೈರಲ್ ನ್ಯುಮೋನಿಯಾದಿಂದ ಆರಂಭಿಸಿ ನಾವೀಗ ಬಹು ವ್ಯವಸ್ಥೆಯ ರೋಗದವರೆಗೆ ಸಾಗಿದ್ದೇವೆ ಎಂದು ಏಮ್ಸ್‌ನ ಔಷಧೀಯ ವಿಭಾಗದ ಡಾ. ನೀರಜ್ ನಿಶ್ಚಲ್ ಹೇಳಿದ್ದಾರೆ.












Click it and Unblock the Notifications