ಟಿಕೆಟ್ ಬುಕ್ ಮಾಡಿದ್ರೂ 2.7 ಕೋಟಿ ಜನರಿಗೆ ಪ್ರಯಾಣ ಮಿಸ್!
ನವದೆಹಲಿ: ಭಾರತ ರೈಲ್ವೆ ಸಂಪರ್ಕದ ವಿಚಾರದಲ್ಲಿ ಜಗತ್ತಿನಲ್ಲೇ ದೊಡ್ಡ ಹೆಸರನ್ನು ಪಡೆದಿದೆ. ಅದರಲ್ಲೂ Indian Railway ಹೆಸರು ಕೇಳಿದರೆ ಭಾರತೀಯರಿಗೂ ಹೆಮ್ಮೆ. ಇಂತಿಪ್ಪ Indian Railwayಯಲ್ಲಿ ಟಿಕೆಟ್ ಬುಕ್ ಮಾಡಿ, ಪ್ರಯಾಣ ಮಿಸ್ ಮಾಡಿಕೊಂಡವರ ಸಂಖ್ಯೆ ಬರೋಬ್ಬರಿ 2.7 ಕೋಟಿಯಂತೆ! ಅರೆರೆ ಇದು ಯಾರ ತಪ್ಪು ಅಂದ್ರಾ? ಮುಂದೆ ಓದಿ.
ಭಾರತದಲ್ಲಿ ರೈಲ್ವೆ ಪ್ರಯಾಣ ಅಗ್ಗ ಮತ್ತು ಸುರಕ್ಷಿತ. ವಿಮಾನ ಪ್ರಯಾಣ ಹೊರತುಪಡಿಸಿ ಬೇಗ ತಲುಪಲು ರೈಲು ಭಾರತೀಯರಿಗೆ ಆಧಾರ. ಹೀಗಾಗಿ ಕೋಟಿ ಕುಳದಿಂದ ಹಿಡಿದು, ರೂಪಾಯಿಗೂ ಲೆಕ್ಕ ಹಾಕಿ ಬದುಕುವ ಮಧ್ಯಮವರ್ಗ, ಬಡವರ್ಗದ ಜನ ರೈಲು ಪ್ರಯಾಣಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಏನ್ ಮಾಡೋದು ಟಿಕೆಟ್ ಬುಕ್ ಮಾಡಿದ್ರೂ ಕಳೆದ ವರ್ಷ ಬರೋಬ್ಬರಿ 2.7 ಕೋಟಿ ಜನ ಪ್ರಯಾಣ ಮಿಸ್ ಮಾಡಿದ್ದಾರಂತೆ. ಸ್ವತಃ ರೈಲ್ವೇ ಇಲಾಖೆಯೇ ಮಾಹಿತಿ ನೀಡಿದೆ. ಹೇಗೆ ಎಂಬುದರ ಮಾಹಿತಿ ಇಲ್ಲಿ ತಿಳಿಯೋಣ.

ಸೀಟ್ ಸಿಗದೆ ಪ್ರಯಾಣ ಮಿಸ್!
ಅಂದಹಾಗೆ ರೈಲುಗಳ ಕೊರತೆ ಪರಿಣಾಮ ದೇಶದಲ್ಲಿ ತೀವ್ರವಾಗಿ ಜನರ ಓಡಾಟ ಇರುವ ಮಾರ್ಗದಲ್ಲಿ ರೈಲು ಸಂಚಾರ ವಿರಳಗೊಂಡ ಕಾರಣ 2022-23ನೇ ಸಾಲಿನಲ್ಲಿ 2.7 ಕೋಟಿ ಜನ ಪ್ರಯಾಣ ಮಿಸ್ ಮಾಡಿದ್ದಾರಂತೆ. ಈ ಮಾಹಿತಿಯನ್ನ RTI ಆರ್ಜಿಗೆ ಉತ್ತರಿಸುವಾಗ ರೈಲ್ವೆ ಸಚಿವಾಲಯ ನೀಡಿದೆ. ಈ ಹಿಂದಿನ ವರ್ಷದಲ್ಲಿ ಹೀಗೆ ಟಿಕೆಟ್ ಬುಕ್ ಮಾಡಿ ವೆಯ್ಟಿಂಗ್ ಲಿಸ್ಟ್‌ನಲ್ಲಿದ್ದು ರೈಲು ಪ್ರಯಾಣ ಸಾಧ್ಯವಾಗದ ಪ್ರಯಾಣಿಕರ ಸಂಖ್ಯೆ 1.65 ಕೋಟಿಯಾಗಿತ್ತು. ಈಗ ಅದು 2.7 ಕೋಟಿಗೆ ಏರಿಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ.
ರೈಲು ಸಮಸ್ಯೆಗೆ ಪರಿಹಾರ ಏನು?
ಮತ್ತೊಂದ್ಕಡೆ ರೈಲಿನ ಸೀಟುಗಳ ಸಂಖ್ಯೆಯನ್ನು ಹೆಚ್ಚು ಮಾಡುವ ಕುರಿತು ಇಲಾಖೆ ಪ್ರಯತ್ನ ನಡೆಸುತ್ತಿದೆ. ಬಳಿಕ ಪ್ರಯಾಣಿಕರು ವೇಟಿಂಗ್‌ಲಿಸ್ಟ್‌ನಲ್ಲಿ ಕಾಯುವುದು ತಪ್ಪುತ್ತೆ. ಕೊರೊನಾ ಅಪ್ಪಳಿಸುವುದಕ್ಕೂ ಮೊದ್ಲು ದೇಶದಲ್ಲಿ 10,186 ರೈಲುಗಳು ಸಂಚರಿಸುತ್ತಿದ್ದವು. ಈಗ ಅದು 10,678ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿ ಕೂಡ ಇದೇ ಅರ್ಜಿಯಲ್ಲಿ ಸಿಕ್ಕಿದೆ. ಹಾಗಾದರೆ ಈ ಆರ್‌ಟಿಐ ಅರ್ಜಿ ಹಾಕಿದ ವ್ಯಕ್ತಿಯ ಹೆಸರನ್ನ ರೈಲು ಪ್ರಯಾಣ ಮಿಸ್ ಮಾಡಿಕೊಂಡವರು ತಿಳಿಯಲೇಬೇಕು ಅಲ್ವಾ? ಮುಂದೆ ಓದಿ.
ಅರ್ಜಿ ಹಾಕಿದ್ದು ಯಾರು ಗೊತ್ತಾ?
ಮಧ್ಯಪ್ರದೇಶದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಗೌರ್ ರೈಲ್ವೆ ಇಲಾಖೆಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಉತ್ತರ ನೀಡಿರುವ ರೈಲ್ವೆ ಇಲಾಖೆಗೆ ಮಹತ್ವದ ವಿಚಾರ ತಿಳಿಸಿದೆ. 2022-23ನೇ ಸಾಲಿನಲ್ಲಿ 2.7 ಕೋಟಿ ಜನ ಟಿಕೆಟ್ ಬುಕ್ ಮಾಡಿಯೂ, ವೆಯ್ಟಿಂಗ್ ಲಿಸ್ಟ್‌ನಲ್ಲಿ ಉಳಿದು ಪ್ರಯಾಣ ಮಿಸ್ ಮಾಡಿಕೊಂಡ ಮಾಹಿತಿ ಜೊತೆಗೆ ಇನ್ನುಮುಂದೆ ಹೆಚ್ಚುವರಿ ಸೀಟ್ ಅಳವಡಿಸುವ ಬಗ್ಗೆ ಆಶ್ವಾಸನೆ ನೀಡಲಾಗಿದೆ. ಮುಂದೆ ಇದು ದೂರದ ಊರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಭಾರಿ ಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.

ಸರಕು ಸಾಗಣೆ ಪ್ರಮಾಣದಲ್ಲಿ ದಾಖಲೆ
ಹಾಗೇ ಇನ್ನೊಂದು ಕಡೆ ಏಪ್ರಿಲ್ ತಿಂಗಳಿನಲ್ಲಿ ಸರಕು ಸಾಗಣೆ ರೈಲುಗಳ ಸಂಚಾರ ಹೊಸ ದಾಖಲೆ ಬರೆದಿದೆ. ಒಟ್ಟು 126.46 ದಶಲಕ್ಷ ಟನ್ ಸರಕು ಸಾಗಣೆ ಮಾಡಿರುವುದಾಗಿ ರೈಲ್ವೆ ಸಚಿವಾಲಯ ಮಾಹಿತಿಯನ್ನ ನೀಡಿದೆ. 2022ರ ಏಪ್ರಿಲ್ ತಿಂಗಳಿಗೆ ಇದನ್ನ ಹೋಲಿಕೆ ಮಾಡಿದ್ರೆ, ಶೇಕಡಾ 3.5ರಷ್ಟು ಹೆಚ್ಚು ಸರಕನ್ನು 2023ರ ಏಪ್ರಿಲ್ ತಿಂಗಳಲ್ಲಿ ಸಾಗಣೆ ಮಾಡಲಾಗಿದೆ. ಭಾರತದಲ್ಲಿ ರೈಲು ಪ್ರಯಾಣಿಕರು ಮಾತ್ರವಲ್ಲ, ಸರಕು ಸಾಗಾಣಿಕೆಯಲ್ಲಿ ಕೂಡ ರೈಲುಗಳನ್ನ ಜನ ನಂಬಿಕೊಂಡಿದ್ದಾರೆ.
ಒಟ್ನಲ್ಲಿ ರೈಲು ಪ್ರಯಾಣ ಮಾಡುವವರಿಗೆ ವೆಯ್ಟಿಂಗ್ ಲಿಸ್ಟ್ ಬಿದ್ದರೆ ತಲೆನೋವು ಹೆಚ್ಚಾಗ್ತಿತ್ತು. ಅಕಸ್ಮಾತ್ ಟಿಕೆಟ್ ಕನ್ಫರ್ಮ್ ಆಗದೇ ಇದ್ದರೆ ಸಮಸ್ಯೆ ಅನ್ನೋದು ಈ ಭಯಕ್ಕೆ ಕಾರಣವಾಗಿತ್ತು. ಆದರೆ ಶೀಘ್ರದಲ್ಲೇ ರೈಲುಗಳಲ್ಲಿ ಹೆಚ್ಚುವರಿ ಸೀಟ್ ಅಳವಡಿಸುವ ಆಶ್ವಾಸನೆ ಸಿಕ್ಕಿದೆ, ಆದಷ್ಟು ಬೇಗ ಇದು ಜಾರಿಗೆ ಬರುವ ನಿರೀಕ್ಷೆ ಪ್ರಯಾಣಿಕರದ್ದು.












Click it and Unblock the Notifications