ಜೋಶಿಮಠ: ನಿರಾಶ್ರಿತರು ತಂಗಿರುವ ಹೋಟೆಲ್‌ಗಳು, ತಾತ್ಕಾಲಿಕ ಶಿಬಿರಗಳ ಗಡುವು ವಿಸ್ತರಿಸಿದ ಸರ್ಕಾರ
ಡೆಹರಾಡೂನ್, ಮೇ. 05: ಜನವರಿಯಲ್ಲಿ ನಡೆದ ಉತ್ತರಖಂಡಾದ ಜೋಶಿಮಠದ ಭೂಕುಸಿತ ಯಾರಿಗೆ ನೆನಪಿಲ್ಲ ಹೇಳಿ. ಈ ಭೂಕುಸಿತದಿಂದ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇವರು ತಂಗಿರುವ ಸ್ಥಳಕ್ಕೂ ಹೋಟೆಲ್ ಮಾಲೀಕರು ಸಂಕಷ್ಟ ತರಲು ಹೊರಟಿದ್ದರು. ಸದ್ಯಕ್ಕೆ ಹೋಟೆಲ್ ಮಾಲೀಕರ ಪ್ರಯತ್ನಕ್ಕೆ ಸರ್ಕಾರ ತಡೆ ನೀಡಿದೆ.
ಜೋಶಿಮಠದಲ್ಲಿ ಭೂ ಕುಸಿತದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಮೇ 31 ರವರೆಗೆ ಹೋಟೆಲ್‌ಗಳು ಅಥವಾ ತಾತ್ಕಾಲಿಕ ಶಿಬಿರಗಳಿಂದ ಹೋಗುವಂತೆ ಹೇಳುವುದಿಲ್ಲ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಯ ಪ್ರಕಾರ, ಚಮೋಲಿ ಜಿಲ್ಲಾಡಳಿತದ ಪ್ರಸ್ತಾವನೆಯ ಮೇರೆಗೆ ರಾಜ್ಯ ಸರ್ಕಾರವು ಏಪ್ರಿಲ್ 30 ರಿಂದ ಮೇ 31 ರವರೆಗೆ ಗಡುವನ್ನು ವಿಸ್ತರಿಸಿದೆ. ಜಿಲ್ಲಾಡಳಿತದ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ಅವರು ದೃಢಪಡಿಸಿದ್ದಾರೆ. ಇದರಿಂದಾಗಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಕುಟುಂಬಗಳು ಕೊಂಚ ಕಾಲ ನಿಟ್ಟುಸಿರು ಬಿಡುವಂತಾಗಿದೆ.
ಸ್ಥಳಾಂತರಗೊಂಡ ಕುಟುಂಬಗಳನ್ನು ಮೇ 31 ರವರೆಗೆ ಹೋಟೆಲ್‌ಗಳಲ್ಲಿ ಇರಿಸಲು ಅವಕಾಶ ನೀಡುವಂತೆ ಸ್ಥಳೀಯ ಆಡಳಿತ ಕಳುಹಿಸಿದ ಪ್ರಸ್ತಾವನೆಯನ್ನು ನಾವು ಸ್ವೀಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಗಡುವು ಮುಗಿದ ನಂತರ ಅವುಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ರಂಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಈ ಹಿಂದೆ, ಚಾರ್ ಧಾಮ್ ಯಾತ್ರೆಗಾಗಿ ಬರುವ ಭಕ್ತರಿಗಾಗಿ ಹೋಟೆಲ್ ರೂಮ್‌ಗಳ ಅವಶ್ಯಕತೆಯಿದ್ದು, ಯಾತ್ರೆಯ ಋತುವಿನ ದೃಷ್ಟಿಯಿಂದ ಸಂತ್ರಸ್ತ ಕುಟುಂಬಗಳಿಗೆ ತಮ್ಮ ಹೊಟೆಲ್‌ಗಳು ಮತ್ತು ತಾತ್ಕಾಲಿಕ ಶಿಬಿರದ ಸ್ಥಳಗಳನ್ನು ಖಾಲಿ ಮಾಡುವಂತೆ ಹೋಟೆಲ್ ಮಾಲೀಕರು ಸೂಚನೆ ನೀಡಿದ್ದರು. ಚಮೋಲಿ ಜಿಲ್ಲಾಡಳಿತದ ಪ್ರಕಾರ, 296 ಕುಟುಂಬಗಳ ಕನಿಷ್ಠ 995 ಸದಸ್ಯರು ಜೋಶಿಮಠ ನಗರ ಪಾಲಿಕೆ ಪರಿಷತ್ತಿನ ವಿವಿಧ ಪರಿಹಾರ ಶಿಬಿರಗಳಲ್ಲಿ, ಸಂಬಂಧಿಕರ ಮನೆಗಳಲ್ಲಿ ಮತ್ತು ಬಾಡಿಗೆಗೆ ನಿವಾಸಗಳಲ್ಲಿ ವಾಸಿಸುತ್ತಿದ್ದಾರೆ.
ಜನವರಿ ಮೊದಲ ವಾರದಿಂದ ಈ ವರಗೆ ಜೋಶಿಮಠದಲ್ಲಿ 868 ವಸತಿ ಕಟ್ಟಡಗಳು ಮತ್ತು ಇತರ ರಚನೆಗಳು ಬಿರುಕು ಬಿಟ್ಟಿವೆ. ಇದೇ ವೇಳೆ 181 ಕಟ್ಟಡಗಳನ್ನು ಅಸುರಕ್ಷಿತ ವಲಯಕ್ಕೆ ಸೇರಿಸಲಾಗಿದೆ. ಇತ್ತೀಚೆಗೆ, ಪಟ್ಟಣದ ಕೆಲವು ನಿವಾಸಿಗಳು ತಮ್ಮ ಮನೆಗಳಲ್ಲಿ ಹೊಸ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಹೇಳಿ ಮತ್ತೆ ತಮ್ಮ ನಿವಾಸಗಳ ಹೊಸ ಸಮೀಕ್ಷೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಜನವರಿ 25 ರಂದು, ಕುಸಿಯುತ್ತಿರುವ ಜೋಶಿಮಠ ಪಟ್ಟಣದ ಕುರಿತು ಅಧ್ಯಯನ ನಡೆಸಿದ ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ ಮತ್ತು ಐಐಟಿ ರೂರ್ಕಿಯಂತಹ ಎಂಟು ತಾಂತ್ರಿಕ ಸಂಸ್ಥೆಗಳು ತಮ್ಮ ವರದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (NDMA) ಸಲ್ಲಿಸಿದವು. ವರದಿ ಇನ್ನೂ ಬಹಿರಂಗಗೊಳ್ಳಬೇಕಿದೆ.
ಫೆಬ್ರವರಿಯಲ್ಲಿ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂತ್ರಸ್ತ ನಿವಾಸಿಗಳಿಗೆ ಪರಿಹಾರ ಮತ್ತು ಶಾಶ್ವತ ಪುನರ್ವಸತಿ ನೀತಿಯನ್ನು ಉತ್ತರಾಖಂಡಾ ಕ್ಯಾಬಿನೆಟ್ ಅನುಮೋದಿಸಿದೆ. ತಾಂತ್ರಿಕ ಸಂಸ್ಥೆಗಳಿಂದ ಬರುವ ಸಮೀಕ್ಷೆ ವರದಿಗಳ ಆಧಾರದ ಮೇಲೆ ಭೂಮಿಗೆ ಪರಿಹಾರದ ದರವನ್ನು ನಿರ್ಧರಿಸಲಾಗುವುದು ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.












Click it and Unblock the Notifications