ಟಾಟಾ ಸಂಸ್ಥೆಗೆ ಭರ್ಜರಿ ಗೆಲುವು, ಮಮತಾ ಸರ್ಕಾರಕ್ಕೆ ಮುಖಭಂಗ!
ವಾಹನ ಉದ್ಯಮ ವಲಯದಲ್ಲಿ ಇಡೀ ಜಗತ್ತಿನಾದ್ಯಂತ ದೊಡ್ಡ ಸದ್ದು ಮಾಡಿದ್ದ ಘಟನೆಗೆ ಇಂದು ತಾರ್ಕಿಕ ಅಂತ್ಯ ಸಿಕ್ಕಿದೆ. ಪಶ್ಚಿಮ ಬಂಗಾಳ ಸರ್ಕಾರ ವಿರುದ್ಧ ತೊಡೆತಟ್ಟಿ ನಿಂತಿದ್ದ ಟಾಟಾ ಮೋಟಾರ್ಸ್ ಕಂಪನಿಗೆ ದೊಡ್ಡ ಗೆಲುವು ಸಿಕ್ಕಿದೆ. ಹಾಗಾದರೆ ಕೋರ್ಟ್ ನೀಡಿರುವ ತೀರ್ಪು ಏನು? ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಈ ಮೂಲಕ ಮುಖಭಂಗವಾಗಿದ್ದು ಹೇಗೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ, ಬನ್ನಿ ತಿಳಿಯೋಣ.
ಪಶ್ಚಿಮ ಬಂಗಾಳ ರಾಜ್ಯದ ಸಿಂಗೂರ್‌ನಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಲು, ಟಾಟಾ ಸಂಸ್ಥೆ ಮುಂದಾಗಿತ್ತು. ಹೀಗೆ ಸಿಂಗೂರ್‌ನಲ್ಲಿ ನ್ಯಾನೊ ಕಾರು ಫ್ಯಾಕ್ಟರಿ ಸ್ಥಾಪನೆಗಾಗಿ ಟಾಟಾ ಮೋಟಾರ್ಸ್ ದೊಡ್ಡ ಹೂಡಿಕೆ ಮಾಡಿತ್ತು. ಕಾರುಗಳ ಉತ್ಪಾದನೆಗೆ ಸಿಂಗೂರ್ ಪ್ಲ್ಯಾಂಟ್‌ನಲ್ಲಿ ಟಾಟಾ ಮೋಟಾರ್ಸ್ ಅಂದು 766 ಕೋಟಿ ರೂಪಾಯಿಯ ಹೂಡಿಕೆ ಮಾಡಿತ್ತು. ಆಗಲೆ ಸ್ವತಃ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಭಾರೀ ವಿರೋಧ ವ್ಯಕ್ತವಾಗಿ, ಹೋರಾಟ ಕೂಡ ಶುರು ಆಗಿತ್ತು. ನಂತರ ಅನಿವಾರ್ಯವಾಗಿ ಟಾಟಾ ಮೋಟಾರ್ಸ್ ಪ್ಲ್ಯಾಂಟ್‌ನ, ಗುಜರಾತ್‌ಗೆ ಶಿಫ್ಟ್ ಮಾಡಲಾಗಿತ್ತು.

ಘಟನೆ ನಡೆದಿದ್ದು ಯಾವಾಗ?
ಅಂದಹಾಗೆ, ಸಿಂಗೂರಿನ ಟಾಟಾ ಕಾರು ಉತ್ಪಾದನಾ ಘಟಕದಲ್ಲಿ ಉಂಟಾದ ನಷ್ಟ ಸಂಬಂಧ ಟಾಟಾ ಮೋಟಾರ್ಸ್‌ಗೆ, 766 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳದ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಮಧ್ಯಸ್ಥಿಕೆ ನ್ಯಾಯಾಧಿಕರಣ ಮಹತ್ವದ ನಿರ್ದೇಶನ ನೀಡಿದೆ. ಭೂ ವಿವಾದ ಹಿನ್ನೆಲೆ ಪಶ್ಚಿಮ ಬಂಗಾಳ ರಾಜ್ಯದ, ಸಿಂಗೂರಿನಲ್ಲಿದ್ದ ಟಾಟಾ ನ್ಯಾನೊ ಕಾರು ಉತ್ಪಾದನಾ ಘಟಕ ಸ್ಥಳಾಂತರ ಮಾಡಿತ್ತು ಟಾಟಾ ಸಂಸ್ಥೆ. 2008ರ ಅಕ್ಟೋಬರ್ ತಿಂಗಳಲ್ಲಿ ಗುಜರಾತ್‌ನ ಸನಂದ್‌ಗೆ ಟಾಟಾ ಮೋಟಾರ್ಸ್ ಸ್ಥಳಾಂತರ ಮಾಡಿತ್ತು. ಆದರೆ ಅಷ್ಟೊತ್ತಿಗೆಲ್ಲಾ ಟಾಟಾ ಕಂಪನಿ ಸಿಂಗೂರಿನ ಘಟಕಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿತ್ತು.
ಟಾಟಾ ಸಂಸ್ಥೆಯ ಕಾನೂನು ಹೋರಾಟ
ತನಗೆ ಆಗಿರುವ ನಷ್ಟಕ್ಕೆ ಪರಿಹಾರ ದೊರಕಿಸುವಂತೆ ಕೋರಿ, ಟಾಟಾ ಮೋಟಾರ್ಸ್ ಮಧ್ಯಸ್ಥಿಕೆ ನ್ಯಾಯಾಧೀಕರಣದ ಮೊರೆ ಹೊಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಮೂವರು ಸದಸ್ಯರ ಮಧ್ಯಸ್ಥಿಕೆ ನ್ಯಾಯಾಧೀಕರಣ 2016ರ ಸೆ. 1ರಿಂದ ವಾರ್ಷಿಕ ಶೇ. 11ರ ಬಡ್ಡಿ ಜೊತೆ 765.75 ಕೋಟಿ ರೂಪಾಯಿ ಪರಿಹಾರವನ್ನು ಟಾಟಾ ಮೋಟಾರ್ಸ್‌ಗೆ ನೀಡುವಂತೆ ಸೂಚಿಸಿದೆ. ಇನ್ನು ಹೀಗೆ ಪರಿಹಾರ ನೀಡುವ ಬಗ್ಗೆ ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸೂಚನೆ ನೀಡಿದ್ದು, ದೇಶಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ.
ಒಟ್ನಲ್ಲಿ ಟಾಟಾ ಮೋಟಾರ್ಸ್ ಹಾಗೂ ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ದಶಕಗಳ ಕಾನೂನು ಹೋರಾಟಕ್ಕೆ ಇಂದು ತಾರ್ಕಿಕ ಅಂತ್ಯವೂ ಸಿಕ್ಕಿದೆ. ಆದರೆ ಈ ತೀರ್ಪಿಗೆ ಪಶ್ಚಿಮ ಬಂಗಾಳದ ಸರ್ಕಾರ ಅಂದರೆ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ತಲೆಬಾಗುತ್ತದಾ? ಅಥವಾ ತೀರ್ಪು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಕೆ ಮಾಡುತ್ತಾ? ಅನ್ನೋದನ್ನ ಈಗ ಕಾದು ನೋಡಬೇಕಿದೆ.












Click it and Unblock the Notifications