India VS Canada: ಭಾರತದ ಬಗ್ಗೆ ಕೆನಡಾ ಪಂಜಾಬಿ ಸಿಂಗರ್ ಹೇಳಿದ್ದೇನು?
ಭಾರತ & ಕೆನಡಾ ನಡುವೆ ಕಿತ್ತಾಟ ಶುರುವಾಗಿರುವ ಸಂದರ್ಭದಲ್ಲೇ ಆತಂಕ ಆವರಿಸಿದ್ದು, ಕೆನಡಾ ಮೂಲದ ಪಂಜಾಬಿ ಹಾಡುಗಾರನ ಶೋ ಕೂಡ ರದ್ದಾಗಿತ್ತು. ಈ ಬೆಳವಣಿಗೆ ಬಗ್ಗೆ ಈಗ ಪ್ರತಿಕ್ರಿಯೆ ನೀಡಿದ ಶುಭನೀತ್ ಸಿಂಗ್ ಅಲಿಯಾಸ್ ಶುಭ್, ಏನ್ ಹೇಳಿದ್ದಾನೆ ಗೊತ್ತಾ? ಖಲಿಸ್ತಾನಿಗಳ ಪರವಾಗಿ ಮೃದು ದೋರಣೆ ತೋರಿದ್ದ ಶುಭನೀತ್ ಸಿಂಗ್ ವಿರುದ್ಧ ಮೊಳಗಿದ ಆಕ್ರೋಶ ಎಂತಹದ್ದು ಗೊತ್ತಾ?
ಹೌದು, ಶುಭ್ ವಿರುದ್ಧ ಭಾರತೀಯರು ರೊಚ್ಚಿಗೇಳಲು ಕಾರಣ ಇದೆ. ಅದೇನೆಂದರೆ ಈತ ಭಾರತದ ವಿವಾದಾತ್ಮಕ ನಕ್ಷೆ ಶೇರ್ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಹೀಗೆ ಕೆನಡಾದ ಪಂಜಾಬಿ ಗಾಯಕ ಶುಭ್ ಶೇರ್ ಮಾಡಿದ್ದ ಮ್ಯಾಪ್‌ನಲ್ಲಿ ಜಮ್ಮು & ಕಾಶ್ಮೀರ ಸೇರಿ ಈಶಾನ್ಯ ರಾಜ್ಯಗಳು ಇರಲಿಲ್ಲ. ಪಂಜಾಬ್ ರಾಜ್ಯದ ಭೂಭಾಗವನ್ನೂ ಕಪ್ಪು ಬಣ್ಣದಲ್ಲಿ ಚಿತ್ರಿಸಲಾಗಿದ್ದ ಮ್ಯಾಪ್ ಅನ್ನ ಸಿಂಗರ್ ಶುಭ್ ಶೇರ್ ಮಾಡಿದ್ದರು ಎನ್ನಲಾಗಿದೆ. ಇದೇ ಕಿಚ್ಚಿಗೆ ಭಾರತೀಯರು ಕೂಡ ರೊಚ್ಚಿಗೆದ್ದು, ಶುಭ್ ಭಾರತಕ್ಕೆ ಬರುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದರು.

ಪಂಜಾಬಿ ಸಿಂಗರ್ ಶುಭ್ ಹೇಳಿದ್ದೇನು?
ಹೀಗೆ ಎಲ್ಲಾ ಘಟನೆ ಬಗ್ಗೆ ಇದೀಗ ಕೊನೆಗೂ ಕೆನಡಾ ಗಾಯಕ ಶುಭ್‌ನೀತ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಶುಭ್‌ನೀತ್, ಯುವ ಹಾಡುಗಾರನಾಗಿ ಅದರಲ್ಲೂ ಭಾರತ ಮೂಲದ ಹಾಡುಗಾರನಾಗಿ ನನ್ನ ಹಾಡನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಬೇಕು ಎಂಬ ಹಂಬಲ ನನಗಿತ್ತು. ಆದರೆ ಇತ್ತೀಚೆಗೆ ನಡೆದ ಬೆಳವಣಿಗೆಗಳು ನನ್ನ ಕಠಿಣ ಪರಿಶ್ರಮಕ್ಕೆ ಅಡ್ಡಿಯಾಗಿವೆ ಎಂದಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾರ್ಯಕ್ರಮ ಕೂಡ ಕ್ಯಾನ್ಸಲ್
ಕೆನಡಾದಲ್ಲಿ ಪಂಜಾಬಿ ಹಾಡುಗಳ ಮೂಲಕವೆ ಹೆಸರು ಮಾಡಿರುವ ಸಿಂಗರ್ ಶುಭನೀತ್ ಸಿಂಗ್ ಭಾರತದಲ್ಲಿ ಶೋ ಮಾಡಲು ಸಿದ್ಧವಾಗಿದ್ದ. ಆದರೆ ಭಾರತೀಯರು ಶುಭನೀತ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ವಿರೋಧ ವ್ಯಕ್ತಪಡಿಸಿದ್ರು. ಶುಭನೀತ್ ಖಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಹೀಗಾಗಿ ದಿಢೀರ್ ಶೋ ಕೂಡ ರದ್ದಾಗಿದೆ. ಅಲ್ಲದೆ ಈ ಬಗ್ಗೆ ಶುಭ್ ಈಗ ಬೇಸರ ಹೊರಹಾಕಿದ್ದಾರೆ.
ಖಲಿಸ್ತಾನಿಗಳ ವಿಚಾರಕ್ಕೆ ಕಿರಿಕ್ ಶುರು
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವು ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಇಷ್ಟೆಲ್ಲದರ ನಡುವೆ ಕೆನಡಾ ಹಾಗೂ ಭಾರತ ಸಂಬಂಧ ಸಂಪೂರ್ಣ ಹಳಸಿ ಹೋಗುತ್ತಿದೆ.

ಒಟ್ನಲ್ಲಿ ಕೆನಡಾ ಮತ್ತು ಭಾರತದ ನಡುವೆ ನಡೆಯುತ್ತಿರುವ ತಿಕ್ಕಾಟ ಎಲ್ಲೆಲ್ಲಿಗೋ ಹೋಗಿ ಮುಟ್ಟುತ್ತಿದೆ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹಾಗೇ ಭಾರತದ ವಿರುದ್ಧ ಜಿ20 ಶೃಂಗಸಭೆ ಬಳಿಕ ಇಂಥ ಕುತಂತ್ರ ನಡೆಯುತ್ತಿರುವ ಆರೋಪ ಕೂಡ ಇದೆ. ಹೀಗಾಗಿ ಸದ್ಯ ಈ ವಿವಾದ ಬಗೆಹರಿದು, ಎರಡೂ ದೇಶಗಳ ಸಂಬಂಧ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ.
ಅದರಲ್ಲೂ ಅಮೆರಿಕ, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಪರೋಕ್ಷವಾಗಿ ಕೆನಡಾ ಪರವಾಗಿ ನಿಂತಿರುವುದು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. ಭಾರತ ಕೂಡ ಈ ಬೆಳವಣಿಗೆ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ನಡೆಸುತ್ತಿದೆ. ಅಲ್ಲದೆ ಅಗತ್ಯವಿರುವ ಎಲ್ಲಾ ರೀತಿ ಕ್ರಮ ಕೈಗೊಳ್ಳುತ್ತಿದೆ. ಆದರೆ ಖಲಿಸ್ತಾನಿ ಉಗ್ರರ ವಿಚಾರಕ್ಕೆ ಈ ರೀತಿ ಕೆನಡಾ ಮತ್ತು ಭಾರತದ ಸಂಬಂಧ ಹಳಸಿದ್ದು ಮಾತ್ರ ದುರಂತವೇ ಸರಿ ಅಂತಿದ್ದಾರೆ ನೆಟ್ಟಿಗರು.












Click it and Unblock the Notifications