Tigers Day: 7 ತಿಂಗಳಲ್ಲಿ ಕೊಲೆಯಾದ ಹುಲಿಗಳ ಸಂಖ್ಯೆ ಎಷ್ಟು ಗೊತ್ತಾ?
ನಿನ್ನೆಯಷ್ಟೇ ಅಂತರರಾಷ್ಟ್ರೀಯ ಹುಲಿಗಳ ದಿನಾಚರಣೆ ಅದ್ಧೂರಿಯಾಗಿ ನಡೆದಿದ್ದು, ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಹುಲಿಗಳ ಸಂರಕ್ಷಣೆಗೆ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಇದೇ ಹೊತ್ತಲ್ಲಿ ಬೆಚ್ಚಿಬೀಳಿಸುವ ಅಂಶವೊಂದು ಹೊರಬಿದ್ದಿದ್ದು, ಕಳೆದ 7 ತಿಂಗಳಲ್ಲಿ ಬೇಟೆಗಾಗಿ ಕೊಲೆಯಾದ ಹುಲಿಗಳ ಸಂಖ್ಯೆ ಆಘಾತ ಮೂಡಿಸಿದೆ. ಹಾಗಾದರೆ ದೇಶದಲ್ಲಿ 7 ತಿಂಗಳಲ್ಲಿ ಕೊಲೆಯಾದ ಹುಲಿಗಳ ಸಂಖ್ಯೆ ಎಷ್ಟು ಗೊತ್ತಾ? ಬನ್ನಿ ತಿಳಿಯೋಣ.
ಭಾರತ ಹುಲಿಗಳ ದೇಶ, ಭಾರತದಲ್ಲಿ ಇರುವಷ್ಟು ಹುಲಿಗಳ ಸಂಖ್ಯೆ ಜಗತ್ತಿನ ಬೇರಾವುದೇ ದೇಶಲದಲ್ಲೂ ಇಲ್ಲ. ನಿನ್ನೆ ವಿಶ್ವ ಹುಲಿಗಳ ದಿನಾಚರಣೆಯಾಗಿದ್ದು, ಇದೇ ಸಂದರ್ಭದಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ ವೃದ್ಧಿಸಿರುವ ಸುದ್ದಿ ಹೊರಬಿದ್ದಿತ್ತು. ಅಂದಹಾಗೆ ಮಧ್ಯಪ್ರದೇಶ ರಾಜ್ಯದಲ್ಲಿ 2018ರಲ್ಲಿ 526 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 785ಕ್ಕೆ ಏರಿದೆ. ಕರ್ನಾಟಕದಲ್ಲಿ 563 ಮತ್ತು ಉತ್ತರಾಖಂಡ 560 ಹುಲಿ ಇದ್ದು, ಎರಡೂ ರಾಜ್ಯಗಳು ಮಧ್ಯಪ್ರದೇಶ ನಂತರದ ಸ್ಥಾನ ಪಡೆದುಕೊಂಡಿವೆ. ಆದರೆ ಅಸಲಿ ವಿಚಾರ ಇದಲ್ಲ, ಕಳೆದ ಜನವರಿಯಿಂದ ಜುಲೈ ತನಕ ಕೇವಲ ಏಳು ತಿಂಗಳ ಅವಧಿಯಲ್ಲಿ 112 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿವೆ ಎಂಬ ಸುದ್ದಿ ಶಾಕ್ ಕೊಟ್ಟಿದೆ.

ವ್ಯಾಘ್ರನ ಹಂತಕರು ಯಾರು?
ಹೌದು, ಹುಲಿಗಳ ತವರು ಭಾರತದಲ್ಲಿ ಹುಲಿಗಳ ಬೇಟೆ ಮತ್ತು ಹತ್ಯೆ ಎಗ್ಗಿಲ್ಲದೆ ನಡೆದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಂದರೆ ಎನ್‌ಟಿಸಿಎ ಅಂಕಿ-ಅಂಶ ಆಧರಿಸಿರುವ ವರದಿ ಭಯ ಹುಟ್ಟಿಸಿದೆ. ವನ್ಯಜೀವಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಯಾದ ವೈಲ್ಡ್‌ಲೈಫ್ ಟ್ರಸ್ಟ್ ಆಫ್ ಇಂಡಿಯಾ ಮಾಹಿತಿ ಪ್ರಕಾರ ದೇಶದಲ್ಲಿ ಹುಲಿ ಹತ್ಯೆ ಜೋರಾಗಿ ನಡೆದಿದೆ. ಅದು ಕೇವಲ 7 ತಿಂಗಳ ಅವಧಿಯಲ್ಲಿ ಬರೋಬ್ಬರಿ 112 ಹುಲಿಗಳು ಕಳ್ಳಬೇಟೆಗೆ ಬಲಿಯಾಗಿವೆ ಎಂದರೆ ಇದು ನಿಜಕ್ಕೂ ಆಘಾತಕಾರಿ ವಿಚಾರ. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯ ಕೇಳಿಬಂದಿದೆ. ಜೊತೆಗೆ ಕಳೆದ ಐದು ವರ್ಷಗಳಲ್ಲಿ ಅಕ್ರಮ ವನ್ಯಜೀವಿ ವ್ಯಾಪಾರಕ್ಕೆ ಭಾರತದಲ್ಲಿ 114 ಹುಲಿ ಬಲಿಯಾಗಿವೆ ಎಂದು ಡಬ್ಲ್ಯುಟಿಐ ವರದಿ ತಿಳಿಸಿದೆ.
ಹುಲಿ ಚರ್ಮಕ್ಕೆ ಭಾರಿ ಡಿಮ್ಯಾಂಡ್!
ಇನ್ನು ಅಮಾಯಕ ಹುಲಿಗಳ ಹತ್ಯೆಗೆ ಮತ್ತೊಂದು ಪ್ರಮುಖ ಕಾರಣ ಅವುಗಳ ಉತ್ಪನ್ನಕ್ಕೆ ಇರುವ ಭಾರಿ ಬೇಡಿಕೆ. ಜಗತ್ತಿನಲ್ಲಿ ಹುಲಿ ದೇಹದ ಭಾಗಗಳು ಮತ್ತು ಅದರಿಂದ ತಯಾರಿಸುವ ಉತ್ಪನ್ನಕ್ಕೆ ಡಿಮ್ಯಾಂಡ್ ಇದೆ. ಹೀಗಾಗಿಯೇ ಹುಲಿ ಕಳ್ಳಬೇಟೆ ಅವ್ಯಾಹತವಾಗಿದೆ. ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗ ದೇಶದಾದ್ಯಂತ ಹರಡಿರುವ ವ್ಯವಸ್ಥಿತ ಮಾರಾಟ ಜಾಲವನ್ನು ಪತ್ತೆಹಚ್ಚಿ ನಿಯಂತ್ರಣಕ್ಕೆ ಕ್ರಮವಹಿಸಿದೆ. ಅಲ್ಲದೆ ವ್ಯಾಪಾರದಲ್ಲಿ ಸಂಘಟಿತ ಜಾಲಗಳ ಜೊತೆ ಇನ್ನೂ ಹಲವರ ಕೈವಾಡವಿದೆ ಎಂಬ ಆರೋಪವಿದೆ. ಜತೆಗೆ ಕಾಡುಹಂದಿಗೆ ಅಳವಡಿಸುವ ಉರುಳನ್ನೇ ಬಳಸಿ ಹುಲಿ ಬೇಟೆ ಆಡುತ್ತಿರುವ ಆರೋಪ ಕೇಳಿಬಂದಿದೆ.

ಮಧ್ಯಪ್ರದೇಶ ನಂಬರ್ 1 ರಾಜ್ಯ
ಅಂದಹಾಗೆ ನಿನ್ನೆ ಬಿಡುಗಡೆಯಾಗಿರುವ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ಹುಲಿ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದ ಅರಣ್ಯಗಳಲ್ಲಿ 4 ವರ್ಷ ಅವಧಿಯಲ್ಲಿ 259 ಹುಲಿ ಸಂಖ್ಯೆ ಹೆಚ್ಚಾಗಿದೆ. 4 ವರ್ಷದಲ್ಲಿ ಹುಲಿಗಳ ಸಂಖ್ಯೆ 526 ರಿಂದ 785 ಏರಿಕೆ ಕಂಡಿದೆ. ಅತಿಹೆಚ್ಚು ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಕನ್ಹಾ, ಬಾಂಧವಗಢ, ಪನ್ನಾ, ಪೆಂಚ್, ಸಾತ್ಪುರ ಸೇರಿದಂತೆ ಸಂಜಯ್-ದುಬ್ರಿ ಸೇರಿ ಒಟ್ಟು ಆರು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಧ್ಯಪ್ರದೇಶದಲ್ಲಿ 2006 ರಲ್ಲಿ ಹುಲಿಗಳ ಸಂಖ್ಯೆ 300 ಆಗಿತ್ತು. ಆದರೆ 2010 ರ ವೇಳೆಗೆ ಹುಲಿಗಳ ಸಂಖ್ಯೆ 257ಕ್ಕೆ ಕುಸಿಯಿತು. ಈಗ ಮತ್ತೆ ಹುಲಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.












Click it and Unblock the Notifications