Chandrayaan-3: ಚಂದ್ರನ ಮೇಲೆ ಮನುಷ್ಯರು: ಇಸ್ರೋ ಸಾಧನೆಗೆ ಸಲಾಂ!
ಚಂದ್ರನ ಮೇಲೆ ಮನೆ ಮಾಡಬೇಕು, ಚಂದ್ರನಲ್ಲಿ ಮನುಷ್ಯರು ಬಾಳಿ ಬದುಕಬೇಕು ಎಂಬ ಕನಸು ಹಲವು ಶತಮಾನಗಳದ್ದು. ಆದ್ರೆ ಈ ಆಸೆ ಈಡೇರಿಸಲು ಇಲ್ಲಿಯ ತನಕ ಮನುಷ್ಯ ಮಾಡಿದ ಪ್ರಯತ್ನಗಳು ವಿಫಲವಾಗಿ ಹೋದವು. ಈಗ ಭಾರತದ ಮೂಲಕ ಆ ಆಸೆ ಕೂಡ ಈಡೇರಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ನೆಲೆಯೂರಿದೆ. ಇಷ್ಟು ಮಾತ್ರವಲ್ಲದೆ, ಇದೇ ಜಾಗದಲ್ಲಿ ಮನುಷ್ಯರು ಬದುಕಿ ಉಳಿಯಲು ಬೇಕಾದ ಅತ್ಯಗತ್ಯ ವಸ್ತು ಸಿಕ್ಕಿಬಿಟ್ಟಿದೆ.
ಭೂಮಿ ತಾಯಿಗೆ ದೇವರ ಸ್ಥಾನ ನೀಡಿದ್ದಾನೆ ಮನುಷ್ಯ. ಹಿಂದೂ ಸಂಪ್ರದಾಯದ ಜೊತೆ ಬೇರೆ ಬೇರೆ ಧರ್ಮದಲ್ಲೂ ಭೂಮಿಗೆ ದೇವರ ಸ್ಥಾನವಿದೆ. ಏಕೆಂದ್ರೆ ಇಡೀ ಬ್ರಹ್ಮಾಂಡದಲ್ಲಿ ಮನುಷ್ಯರು ಬದುಕಿ ಉಳಿದಿರುವ ಏಕೈಕ ಗ್ರಹ ಭೂಮಿ. ಹೀಗಾಗಿಯೇ ಭೂಮಿ ತಾಯಿಯ ಬಗ್ಗೆ ಅಪಾರವಾದ ಗೌರವ. ಇಂತಿಪ್ಪ ಮನುಷ್ಯ ಬದುಕಿ ಉಳಿಯಲು ನೀರು ಗಾಳಿ ಮತ್ತು ಆಹಾರ ಪ್ರಮುಖ ಅಗತ್ಯತೆ ಪಟ್ಟಿಯಲ್ಲಿ ಇವೆ. ಗಾಳಿ ಅಂದ್ರೆ ಆಮ್ಲಜನಕ ಇಲ್ಲದೆ ಮನುಷ್ಯ ಕೆಲ ನಿಮಿಷದಲ್ಲಿ ಮೃತಪಡುತ್ತಾನೆ. ಹೀಗಿದ್ದಾಗಲೇ ಚಂದ್ರನ ಮೇಲೆ ಭಾರತ ಆಮ್ಲಜನಕ ಕಂಡುಹಿಡಿದಿದೆ. ಇದರ ಜೊತೆಗೆ ಇನ್ನೂ ಹಲವು ಧಾತುಗಳು ಸಿಕ್ಕಿವೆ.

ಭವಿಷ್ಯದಲ್ಲಿ ಚಂದ್ರನ ಮೇಲೆ ಮನುಷ್ಯ!
ಹೌದು ಭಾರತದ ಇಸ್ರೋ ಸಂಸ್ಥೆ ಇದೀಗ ಮಾಡಿರುವ ಸಾಧನೆಯ ಫಲವಾಗಿ ಭವಿಷ್ಯದಲ್ಲಿ ಮನುಷ್ಯ ಚಂದ್ರನ ಮೇಲೆ ವಾಸಿಸುವುದು ಪಕ್ಕಾ. ಯಾಕಂದ್ರೆ ಮನುಷ್ಯನ ಅಗತ್ಯ ವಸ್ತು ಎಂದು ಪರಿಗಣಿಸುವ ಆಮ್ಲಜನಕ ಅಥವಾ ಆಕ್ಸಿಜನ್ ಇದೀಗ ಚಂದ್ರನ ದಕ್ಷಿಣ ಧ್ರುವದಲ್ಲಿ ಸಿಕ್ಕಿದೆ. ಇದಷ್ಟೇ ಅಲ್ಲದೆ ಭೂಮಿ ಮೇಲೆ ಕಾಣಿಸುವ ಹಲವು ಧಾತುಗಳನ್ನ ಕೂಡ ಇದೇ ಇಸ್ರೋ ಪತ್ತೆ ಮಾಡಿದೆ. ತನ್ನ ಲ್ಯಾಂಡರ್ ವಿಕ್ರಮ್ ಹಾಗೂ ತನ್ನ ರೋವರ್ ಪ್ರಗ್ಯಾನ್‌ನ ಮೂಲಕ ಇಂಥ ಮಹತ್ವದ ಸಾಧನೆ ಮಾಡಿದೆ ಭಾರತ. ಹಾಗಾದ್ರೆ ಮುಂದಿನ ಗುರಿ ಏನು? ಬನ್ನಿ ತಿಳಿಯೋಣ.
ಚಂದ್ರನ ನೆಲದಲ್ಲಿ ಅಗೆದು ಅಧ್ಯಯನ
'ಚಂದ್ರಯಾನ-3' ಲ್ಯಾಂಡರ್‌ನ ಚಂದ್ರನ ಮೇಲೆ ಇಳಿಸಿದ್ದು, ಪ್ರಗ್ಯಾನ್ ರೋವರ್ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಅಧ್ಯಯನವನ್ನು ಆರಂಭಿಸಿದೆ. ವಿಕ್ರಮ್ ಲ್ಯಾಂಡರ್ & ಪ್ರಗ್ಯಾನ್ ರೋವರ್ ಒಟ್ಟಾಗಿ ಕೆಲಸ ಮಾಡುತ್ತಿವೆ. ಹೀಗೆ ಪ್ರಗ್ಯಾನ್ ರೋವರ್ ಸೂಕ್ಷ್ಮ ಅಧ್ಯಯನದಲ್ಲಿ ಮಹತ್ವದ ಮಾಹಿತಿಯನ್ನ ನೀಡಿದೆ. ಈ ಹಿಂದೆ ಕೂಡ ಭಾರತ ಚಂದ್ರನ ಮೇಲೆ ಏನೆಲ್ಲಾ ಇದೆ ಎಂಬುದನ್ನು ತಿಳಿಸಿತ್ತು. ಇದೀಗ ಇನ್ನೂ ಆಳಕ್ಕೆ ಇಳಿದು, ಚಂದ್ರನ ನೆಲವನ್ನೇ ಅಗೆದಿದೆ. ಹೀಗೆ ಚಂದ್ರನ ಒಳಗೆ ಏನೆಲ್ಲಾ ಇದೆ ಅನ್ನೋದು ಮನುಷ್ಯರಿಗೆ ಗೊತ್ತಾಗಿದೆ. ಅಲ್ಲದೆ ಇದೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಮನುಷ್ಯ ಬದುಕುವುದು ಪಕ್ಕಾ ಎಂಬುದನ್ನು ಭಾರತದ ರೋವರ್ ಖಚಿತಪಡಿಸಿದೆ.
ಅಂದಹಾಗೆ ಈಗ ಪ್ರಗ್ಯಾನ್ ರೋವರ್ ನೀಡಿರುವ ಮಾಹಿತಿ ಪ್ರಕಾರ, ಚಂದ್ರನ ದಕ್ಷಿಣದಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಟೈಟಾನಿಯಂ (Ti) ಇದೆ ಎಂದು ಇಸ್ರೋ ಸಂಸ್ಥೆಯ ರೋವರ್ ತಿಳಿಸಿದೆ. ಇದಲ್ಲದೆ ಮ್ಯಾಂಗನೀಸ್ (Mn), ಸಿಲಿಕಾನ್ (Si), ಆಮ್ಲಜನಕ (O) ಕೂಡ ಇರುವುದು ಗೊತ್ತಾಗಿದೆ. ಈ ಗೆಲುವು ಮನುಷ್ಯನ ಭವಿಷ್ಯ ರೂಪಿಸುವಲ್ಲಿ ಮಹತ್ವದ ಜವಬ್ದಾರಿ ವಹಿಸುವುದು ಪಕ್ಕ. ಹಾಗೇ ಹೈಡ್ರೋಜನ್ ಧಾತು ಹುಡುಕಲು ಇಸ್ರೋ ರೋವರ್‌ಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಅತ್ಯಾಧುನಿಕ ಉಪಕರಣ ಇರುವ ರೋವರ್
ಪ್ರಗ್ಯಾನ್ ರೋವರ್ ತನ್ನಲ್ಲಿ ಅತ್ಯಾಧುನಿಕ ಉಪಕರಣ ಹೊಂದಿದ್ದು, ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್(LIBS) ಉಪಕರಣ ದಕ್ಷಿಣ ಧ್ರುವದ ಸಮೀಪವಿರುವ ಚಂದ್ರನ ಮೇಲ್ಮೈಯಲ್ಲಿ ಸಲ್ಫರ್ (S) ಇರುವಿಕೆ ದೃಢಪಡಿಸಿದೆ ಎಂದು ಇಸ್ರೋ ತಿಳಿಸಿದೆ. ಇದರ ಜತೆ ಯಾವ ಯಾವ ಅದಿರು ಹಾಗೂ ಧಾತು ಚಂದ್ರನ ಮೇಲೆ ಇವೆ ಎಂಬುದನ್ನ ಕೂಡ ಇಸ್ರೋ ತಿಳಿಸಿದೆ. ಹೀಗೆ ಇಸ್ರೋ ಸಂಸ್ಥೆಯ ಅಧ್ಯಯನವು ದೊಡ್ಡ ಸಾಧನೆ ಮಾಡಿದೆ. ಚಂದ್ರನ ಈ ಭಾಗದ ಮೇಲೆ ಲ್ಯಾಂಡರ್ ಇಳಿಸುವುದೇ ಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತವು ಯಶಸ್ವಿಯಾಗಿ ಲ್ಯಾಂಡರ್ ಮತ್ತು ರೋವರ್ ಇಳಿಸಿ ಪ್ರಮುಖ ಅಧ್ಯಯನ ಕೈಗೊಂಡಿದೆ.
ಒಟ್ನಲ್ಲಿ ಭಾರತ ಈಗ ಕಂಡು ಹಿಡಿದಿರುವ ಧಾತುಗಳಿಂದ ಮನುಷ್ಯ ಮುಂದೆ ಚಂದ್ರನಲ್ಲಿ ಜೀವನ ಮಾಡಲು ಹೊಸ ನಿರೀಕ್ಷೆ ಮೂಡಿದೆ. ಚಂದ್ರನ ಮೇಲೆ ಮನುಷ್ಯನಿಗೆ ಬೇಕಿರುವ ಬಹುತೇಕ ಎಲ್ಲಾ ವಸ್ತುಗಳು ಸಿಕ್ಕಿವೆ. ಆದರೆ ಹೈಡ್ರೋಜನ್ ಎಲ್ಲಿದೆ? ಎಂಬ ಬಗ್ಗೆ ಇದೀಗ ಹುಡುಕಾಟ ನಡೆಯುತ್ತಿದೆ. ಆದರೆ ಚಂದ್ರನ ಮೇಲೆ ನೀರು ಇರುವುದು ಪಕ್ಕಾ, ಹೀಗಾಗಿ ಶೀಘ್ರದಲ್ಲೇ ಹೈಡ್ರೋಜನ್ ಮತ್ತು ಆಕ್ಸಿಜನ್ ಸಂಯೋಜಿತ H2O ಸಿಕ್ಕಿಬಿಟ್ಟರೆ ಭಾರತವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆ ಚಂದ್ರನಿಗೆ ಮನುಷ್ಯ ಹೋಗುವುದು ಕೂಡ ಗ್ಯಾರಂಟಿ. ಹೀಗಾಗಿಯೇ ಇಡೀ ಜಗತ್ತು ಭಾರತದ ಈ ಸಾಧನೆಗೆ ಸಲಾಂ ಹೊಡೆದು ಸ್ವಾಗತಿಸಿದೆ. ಜಗತ್ತಿನ ದೊಡ್ಡ ದೊಡ್ಡ ದೇಶಗಳೇ ಮಾಡಲಾಗದ ಸಾಧನೆ ಭಾರತದಿಂದ ಈಗ ಸಾಧ್ಯವಾಗಿದೆ.
ಚಂದ್ರನ ಬಳಿಕ ಸೂರ್ಯನೇ ಟಾರ್ಗೆಟ್
ಭಾರತ ಬಾಹ್ಯಾಕಾಶ ಲೋಕದಲ್ಲಿ ಮಿಂಚುತ್ತಿದ್ದು, ಚಂದ್ರಯಾನ ಯೋಜನೆ ಬಳಿಕ ಇದೀಗ 'ಇಸ್ರೋ' ಹೊಸ ಮಹತ್ವದ ಯೋಜನೆಗೆ ಸಿದ್ಧತೆ ಆರಂಭಿಸಿದೆ. ಸೌರ ಮಿಷನ್ ಆದಿತ್ಯ-ಎಲ್ 1 ಉಡಾವಣೆಗೆ ಸನ್ನದ್ಧವಾಗಿದೆ. ಸೆಪ್ಟೆಂಬರ್ 2ರಂದು ಬೆಳಗ್ಗೆ 11:50ಕ್ಕೆ ಆದಿತ್ಯ-ಎಲ್ 1 ಲಾಂಚ್ ಆಗಲಿದೆ. ಹಾಗೇ ಈ ಆದಿತ್ಯ ಎಲ್ 1 ಮಿಷನ್ ಮೂಲಕ ಸೂರ್ಯನ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುವುದು ಇಸ್ರೋ ಸಂಸ್ಥೆ ಗುರಿ. ಸೂರ್ಯನ ವಾತಾವರಣ ಅಂದರೆ ಕ್ರೋಮೋಸ್ಫಿಯರ್ & ಕರೋನಾ ಪ್ರದೇಶದ ಅಧ್ಯಯನ ಮಾಡಲು ಇಸ್ರೋ ಸಜ್ಜಾಗಿದೆ.

ಸೂರ್ಯನನ್ನು ಮುಟ್ಟಲು ಎಷ್ಟು ದಿನ?
ಭಾರತ ಚಂದ್ರಯಾನ ಯೋಜನೆಗೆ ನೌಕೆ ಹಾರಿಸಿ, ಲ್ಯಾಂಡರ್ ಇಳಿಸಲು ಸುಮಾರು 1 ತಿಂಗಳು & 11 ದಿನದ ಸಮಯ ತೆಗೆದುಕೊಂಡಿತ್ತು. ಅಂದರೆ 42 ದಿನದ ಅಂತರದಲ್ಲಿ ಚಂದ್ರನ ಅಂಗಳ ತಲುಪಿತ್ತು ಭಾರತದ ನೌಕೆ. ಇದೀಗ ಸೂರ್ಯನ ಮುಟ್ಟಲು ಭಾರತ ಕೇವಲ 120 ದಿನಗಳನ್ನು ತೆಗೆದುಕೊಳ್ಳಲಿದೆ. 1.5 ಮಿಲಿಯನ್ ಕಿಲೋ ಮೀಟರ್, ಅಂದರೆ 15 ಲಕ್ಷ ಕಿಲೋ ಮೀಟರ್ ತೆರಳಲಿದೆ. ಈ ಮೂಲಕ ಹೆಚ್ಚು ದೂರ ಪ್ರಯಾಣ ಮಾಡಲಿರುವ ಭಾರತದ ಮೊಟ್ಟ ಮೊದಲ ನೌಕೆ ಎಂಬ ಹೆಗ್ಗಳಿಕೆಯೂ ಆದಿತ್ಯ-ಎಲ್ 1 (Aditya-L1)ಗೆ ಸಿಗಲಿದೆ.












Click it and Unblock the Notifications