ರೈಲು ನಿಲ್ದಾಣದಲ್ಲೇ ಆಫೀಸ್ ಕೆಲಸ: ದೇಶದ ಮೊದಲ 'ಡಿಜಿಟಲ್ ಲೌಂಜ್' ಆರಂಭ, ಏನಿದು?
ನವದೆಹಲಿ: ಕೇಂದ್ರ ಸರ್ಕಾರವು ಅಮೃತ್ ರೈಲ್ವೆ ಸ್ಟೇಷನ್ ಯೋಜನೆಯಡಿ ದೇಶದ ಹಲವಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಮಾಡಿತ್ತು. ಇದೀಗ ಮುಂದುವರಿದು ರೈಲು ನಿಲ್ದಾಣದಲ್ಲಿ 'ಭಾರತದ ಮೊದಲ ಡಿಜಿಟಲ್ ಲೌಂಜ್ ಮತ್ತು ಕೋ-ವರ್ಕಿಂಗ್ ಸ್ಪೇಸ್' ಅನ್ನು ಆರಂಭಿಸಲಾಗಿದೆ. ವೃತ್ತಿಪರ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ. ಏನಿದು? ಇದರ ಬಳಕೆ, ಉದ್ದೇಶ ಮತ್ತು ವಿಶೇಷತೆಗಳು ಏನೆಂದು ಇಲ್ಲಿ ತಿಳಿಯಿರಿ.
ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಭಾರತದ ಮೊದಲ 'ಡಿಜಿಟಲ್ ಲೌಂಜ್ ಮತ್ತು ಕೋ-ವರ್ಕಿಂಗ್ ಸ್ಪೇಸ್' ಆರಂಭವಾಗಿದೆ. ಇದು ಪಶ್ಚಿಮ ರೈಲ್ವೆ ವಿಭಾಗದಿಂದ ಬಹುಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ವ್ಯಾಪಾರಿ ಪ್ರಯಾಣಿಕರು, ವೃತ್ತಿಪರರು ಮತ್ತು ರಿಮೋಟ್ ಕೆಲಸಗಾರರಿಗೆ ತಮ್ಮ ಪ್ರಯಾಣದ ವೇಳೆ ರೈಲು ನಿಲ್ದಾಣದೊಳಗೆಯೇ ಕೆಲಸ ಮಾಡಬಹುದಾದ ವಾತಾವರಣ ಈ ಲಾಂಜ್‌ನಲ್ಲಿದೆ.

ಈ ಡಿಜಿಟಲ್ ಲಾಂಜ್ ಕೋ-ವರ್ಕಿಂಗ್ ಸ್ಪೇಸ್ ಸೌಲಭ್ಯವನ್ನು ರೈಲ್ವೆ ಅಧಿಕಾರಿಗಳು 2025ರ ಅಂತ್ಯದಲ್ಲಿ ನಿರ್ದಿಷ್ಟ ಪ್ರಯಾಣಿಕರಿಗೆ ಮುಕ್ತಗೊಳಿಸಿದ್ದಾರೆ. ಇದೀಗ ರೈಲ್ವೆ ಸಚಿವಾಲಯ ಇದರ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ರೈಲು ನಿಲ್ದಾಣದಲ್ಲಿ ಸುಮಾರು 1,712 ಚದರ ಅಡಿ ಪ್ರದೇಶಲ್ಲಿ ನಿರ್ಮಿಸಲಾಗಿದೆ. ಹೈ-ಸ್ಪೀಡ್ ವೈ-ಫೈ ಸೇರಿದಂತೆ ಹಲವು ಸೌಲಭ್ಯಗಳು ಇದರಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೃತ್ತಿಪರರು ಇಲ್ಲಿ ತಮ್ಮ ರೈಲು ಬರುವವರೆಗೂ ಕಾಯುವ ಪ್ರಯಾಣಿಕರುತಮ್ಮ ವೃತ್ತಿ ಸಂಬಂಧಿ ಕೆಲಸ, ಕಾರ್ಯಗಳನ್ನು ಇಲ್ಲಿ ಮಾಡಲು ಅವಕಾಶ ನೀಡಲಾಗುತ್ತದೆ.
ವಿಶೇಷತೆಗಳು ಏನೇನು?
ಈ ಡಿಜಿಟಲ್ ಲಾಂಜ್‌ನಲ್ಲಿ ಹೈ-ಸ್ಪೀಡ್ ವೈ-ಫೈ, ಮಾಡ್ಯುಲರ್ ವರ್ಕ್‌ಸ್ಟೇಷನ್‌ಗಳು (ವಿವಿಧ ರೀತಿಯ ಕೆಲಸದ ಮೇಜುಗಳು), ಆರಾಮದಾಯಕ ಸೀಟುಗಳು ಮತ್ತು ರಿಕ್ಲೈನರ್‌ಗಳು (ಒಟ್ಟು 58 ಸೀಟುಗಳು, ಅದರಲ್ಲಿ 6 ರಿಕ್ಲೈನರ್‌ಗಳು), ಅಗತ್ಯದಷ್ಟು ಚಾರ್ಜಿಂಗ್ ಪಾಯಿಂಟ್‌ಗಳು/ಪವರ್ ಸಾಕೆಟ್‌ಗಳು, ಪ್ರಿಂಟರ್‌ಗಳು ಮತ್ತು ಸ್ಕ್ಯಾನರ್‌ಗಳು
ಡೆಡಿಕೇಟೆಡ್ ಮೀಟಿಂಗ್/ಕಾನ್ಫರೆನ್ಸ್ ರೂಮ್‌ಗಳು ಇವೆ. ಜೊತೆಗೆ ಏರ್-ಕಂಡಿಷನ್ ವ್ಯವಸ್ಥೆ ಸೇರಿ ಕೆಲವೊಂದಿಷ್ಟು ವಿಶೇಷತೆಗಳನ್ನು ಒಳಗೊಂಡಿದೆ.
ಯೋಜನೆ ಉದ್ದೇಶವೇನು, ಬಳಕೆ ಹೇಗೆ
ರೈಲು ಪ್ರಯಾಣಿಕರ ಅನುಭವವನ್ನು ಸುಧಾರಿಸುವುದು ಹಾಗೂ ಟಿಕೆಟೇತರ ಆದಾಯ ಹೆಚ್ಚಿಸುವ ಉದ್ದೇಶದಿಂದ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೊದಲ ಬಾರಿಗೆ ಸ್ಥಾಪಿಸಲಾಗಿದೆ. ಸದ್ಯಕ್ಕೆ ಖಾಸಗಿ ಸಂಸ್ಥೆಗೆ 5 ವರ್ಷಗಳಿಗೆ ಗುತ್ತಿಗೆ ನೀಡಲಾಗಿದೆ. ಇದರಿಂದ ಒಟ್ಟು 3.2 ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಈ ಸೌಲಭ್ಯ ಬಳಸುವವರು ಪ್ರತಿ ಗಂಟೆಗೆ 200 ರೂಪಾಯಿ ಪಾವತಿಸಬೇಕಾಗುತ್ತದೆ. ದೀರ್ಘಾವಧಿಯ ಪ್ಯಾಕೇಜ್‌ಗಳು ಲಭ್ಯ ಇವೆ ಎನ್ನಲಾಗಿದೆ.
ಮುಂಬೈ ಸೆಂಟ್ರಲ್ ಸ್ಟೇಷನ್ ದಿನಕ್ಕೆ 4 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಬಂದು ಹೋಗುತ್ತಾರೆ. ಈ ನಿಲ್ದಾಣ ಹೆಚ್ಚು ಜನ ದಟ್ಟಣೆಯ ಸ್ಥಳವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ 'ಡಿಜಿಟಲ್ ಲೌಂಜ್ ಮತ್ತು ಕೋ-ವರ್ಕಿಂಗ್ ಸ್ಪೇಸ್' ಉಪಯೋಗ ಆಗಲಿದೆ. ಪ್ರಯಾಣಿಕರು ರೈಲಿಗೆ ಕಾಯುವ ದೀರ್ಘ ಸಮಯದಲ್ಲೇ ತಮ್ಮ ಕೆಲಸವನ್ನು ಮಾಡಿ ಮುಗಿಸಬಹುದಾಗಿದೆ. ಇದರ ಪ್ರಯೋಜನ ಪಡೆಯಲು ಮುಂಬೈ ಸೆಂಟ್ರಲ್ ಸ್ಟೇಷನ್‌ನಲ್ಲಿ ವಿಚಾರಿಸಿ ಅಥವಾ ವೆಸ್ಟರ್ನ್ ರೈಲ್ವೇಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕಿದೆ.
ದೇಶದ ಇತರ ರೈಲು ನಿಲ್ದಾಣಗಳಿಗೆ ಸೌಲಭ್ಯ ವಿಸ್ತರಣೆ
ಮೊದಲ ಬಾರಿಗೆ ಮುಂಬೈ ರೈಲು ನಿಲ್ದಾಣದಲ್ಲಿ ಈ ಸೇವೆ ಆರಂಭಿಸಲಾಗಿದೆ. ಅದಕ್ಕೆ ಸಿಗುವ ಸ್ಪಂದನೆ, ಆದಾಯ ನೋಡಿಕೊಂಡು ಮುಂದಿನ ದಿನಗಳಲ್ಲಿ ಬೆಂಗಳೂರು, ದೆಹಲಿ, ಹೈದರಾಬಾದ್ ಹಾಗೂ ಹೆಚ್ಚು ಜನದಟ್ಟಣೆಯ ರೈಲು ನಿಲ್ದಾಣಗಳಲ್ಲಿ ಆರಂಭಿಸುವ ಚಿಂತನೆಯಲ್ಲಿ ರೈಲ್ವೆ ಇಲಾಖೆ ಇದೆ. ಇಂತಹ ಸೌಲಭ್ಯ ದೇಶಾದ್ಯಂತ ಲಭ್ಯಾಗಬೇಕೆಂದು ಬೇರೆ ಬೇರೆ ಭಾಗದ ರೈಲು ಪ್ರಯಾಣಿಕರು ಇಂಗಿತ ವ್ಯಕ್ತಪಡಿಸಿದ್ದಾರೆ.












Click it and Unblock the Notifications