ಅಯೋಧ್ಯೆಯಲ್ಲಿ 'ಹನುಮನ ಮನೆ': ಹನುಮಾನ್ ಗರ್ಹಿ ನಿರ್ಮಾಣದ ಹಿಂದಿದೆ ಆ ಒಂದು ಪವಾಡ
ಎಲ್ಲಿ ರಾಮನೋ ಅಲ್ಲಿ ಹನುಮನು.... ಶ್ರೀರಾಮನನ್ನು ಭಕ್ತಿಯಿಂದ ಪೂಜಿಸಿದರೆ ಅಲ್ಲಿ ಹನುಮನು ನೆಲೆಸಿರುತ್ತಾನೆ ಎನ್ನುವ ಧಾರ್ಮಿಕ ನಂಬಿಕೆ ಇದೆ. ಹೀಗಾಗಿ ಅಯೋಧ್ಯೆಯಲ್ಲಿ ಹನುಮಾನ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈ ದೇಗುಲ ಈ ಹಿಂದೆ ಕೂಡ ಇತ್ತು. ಇದರ ನಿರ್ಮಾಣದ ಹಿಂದೆ ಪವಾಡದ ಕಥಯೇ ಹೆಣದುಕೊಂಡಿದೆ. ಹಾಗಾದರೆ ಆ ದೇಗುಲ ನಿರ್ಮಾಣ ಮಾಡಿದವರು ಯಾರು? ಯಾಕೆ ನಿರ್ಮಾಣ ಮಾಡಿದರು ಎನ್ನುವುದನ್ನು ತಿಳಿಯುತ್ತಾ ಹೋಗೋಣ.
ರಾಮ ಮಂದಿರ ನಿರ್ಮಾಣಕ್ಕೂ ಮುನ್ನ ಈ ಸ್ಥಳದಲ್ಲಿ ಹನುಮಾನ್ ಗರ್ಹಿ (Hanuman Garhi) ಎಂಬ ದೇಗುಲವಿತ್ತು. ಅಯೋಧ್ಯೆಯಲ್ಲಿ ಹನುಮಂತನಿಗೆ ಸಮರ್ಪಿತವಾದ ಮೊದಲ ದೇವಾಲಯವನ್ನು ಮಹಾರಾಜ ವಿಕ್ರಮಾದಿತ್ಯ (Maharaja Vikramaditya) ನಿರ್ಮಿಸಿದರು. ಮಹಾರಾಜ್ ವಿಕ್ರಮಾದಿತ್ಯ ನಿರ್ಮಿಸಿದ ಹನುಮನ ಪುರಾತನ ದೇವಾಲಯವು ನಾಶವಾದಾಗ, ಜನರು ಆ ಸ್ಥಳವನ್ನು ಹನುಮಾನ್ ತಿಲ (Hanuman Tila) ಎಂದು ಕರೆಯಲು ಪ್ರಾರಂಭಿಸಿದರು.

ಹನುಮಾನ್ ಗರ್ಹಿ ದೇಗುಲ ನಿರ್ಮಾಣ:
ಬಳಿಕ ಈ ದೇಗುಲ ನಿರ್ಮಾಣ ಮಾಡಿದವರು ಒಬ್ಬ ಮುಸ್ಲಿಂ ಭಕ್ತ. ಹೌದು... ಫೈಜಾಬಾದ್‌ನ ಡಾ. ರಾಮ್ ಮನೋಹರ್ ಲೋಹಿಯಾ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ, ಪುರಾತತ್ವ ಮತ್ತು ಸಂಸ್ಕೃತಿ ವಿಭಾಗದ ಡಾ. ಶಿವ ಕುಮಾರ್ ಸಿಂಗ್ ಅವರು 2002 ರಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಈ ಹಿಂದೆ ಅಯೋಧ್ಯೆಯಲ್ಲಿ ಹನುಮಾನ್ ಗರ್ಹಿ ದೇಗುಲವನ್ನು ನಿರ್ಮಿಸಿದವರು ಒಬ್ಬ ಮುಸ್ಲಿಂ ಭಕ್ತ. ಇವರು ಯಾರು? ಯಾಕಾಗಿ ಹನುಮಾನ್ ಗರ್ಹಿ ದೇಗುಲವನ್ನು ನಿರ್ಮಾಣ ಮಾಡಿದರು? ಎಂದು ನೋಡೋಣ.
ನವಾಬ್ ಮಸೂರ್ ಅಲಿ ಖಾನ್ ಸಫ್ದರ್ ಜಂಗ್ ಸಾಹೇಬ (Nawab Masoor Ali Khan Safdar Jang Saheb) ಲಕ್ನೋದಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ, ಬಾಬಾ ಅಭಯ್ ರಾಮದಾಸ್ ತ್ಯಾಗಿ (Baba Abhay Ramdas Tyagi) ಎಂಬ ಮಹಾತ್ಮರು ಈ ಸ್ಥಳದಲ್ಲಿ ಗುಡಿಸಲನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದರು.
ಜೀವ ಉಳಿಸಿ ಪವಾಡ ಮಾಡಿದ ಹನುಮ:
ಅಭಯ್ ರಾಮದಾಸ್ ಅವರು ಬಹಳ ಸಾಧನೆ ಮಾಡಿದ ಸಂತರು. ಸಾಕ್ಷಾತ್ ಹನುಮಂತನೇ ಅವರಿಗೆ ವೈಯಕ್ತಿಕ ದರ್ಶನ ನೀಡಿದ್ದರು ಎಂದು ಕೂಡ ಹೇಳಲಾಗುತ್ತದೆ. ಇತಿಹಾಸದ ಪ್ರಕಾರ, ಒಮ್ಮೆ 17ನೇ ಶತಮಾನದಲ್ಲಿ ನವಾಬ್ ಮಸೂರ್ ಅಲಿ ಸಾಹೇಬರು ತೀವ್ರ ಅನಾರೋಗ್ಯಕ್ಕೆ ಒಳಗಾದರು. ಅವರಿಗೆ ಅನೇಕ ಹಿರಿಯ ವೈದ್ಯರು ಚಿಕಿತ್ಸೆ ನೀಡಿದರು. ಆತನ ಆರೋಗ್ಯಕ್ಕಾಗಿ ನೂರಾರು ಮುಸ್ಲಿಂ ಫಕೀರರು ಪ್ರಾರ್ಥನೆ ಮಾಡಿದರು. ತಾಯತಗಳನ್ನು ಸಹ ಕಟ್ಟಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.

ಆಗ ನವಾಬ್ ಸಾಹೇಬರ ಅನಾರೋಗ್ಯದ ಬಗ್ಗೆ ತಿಳಿದ ಮಹಾರಾಜ್ ಟಿಕೈತ್ ರಾಯ್ (Maharaj Tikait Rai) ಅವರು ಮನ್ಸೂರ್ ಖಾನ್ ಅವರ ಆರೋಗ್ಯ ಸ್ಥಿತಿಯನ್ನು ವಿಚಾರಿಸಲು ಬಂದರು. ಯಾರಿಂದಲೂ ನವಾಬ್ ಆರೋಗ್ಯ ಸುಧಾರಿಸದ ಕಾರಣ ಅವರು ಅಭಯ್ ರಾಮದಾಸ್ ಅವರನ್ನು ಕರೆಸಿದರು. ಅಭಯ್ ರಾಮದಾಸ್ ಜ್ಞಾನಿ, ವೈದ್ಯ ಹಾಗೂ ಅಯೋಧ್ಯೆಯ ಪುರೋಹಿತರಾಗಿದ್ದರು. ಆಗ ಅಭಯ್ ರಾಮದಾಸ್ ಅವರು ನವಾಬ್ ಮಸೂರ್ ಅವರಿಗೆ ಹನುಮನ ಹೆಸರಿನಲ್ಲಿ ಔಷಧವನ್ನು ನೀಡಿದರು.
ಔಷಧವು ನವಾಬ್ ಸಾಹೇಬರ ಬಹಳ ಬೇಗನೆ ಪರಿಣಾಮ ಬೀರಿತು ಮತ್ತು ನವಾಬ್ ಸಾಹೇಬರು ಚೇತರಿಸಿಕೊಂಡರು. ದೇವಾಲಯದ ಈ ಪವಾಡವನ್ನು ನೋಡಿದ ನವಾಬ್ ಮಸೂರ್ ಅಲಿ ಅವರು ಹನುಮನ ದೇವಾಲಯವನ್ನು ನಿರ್ಮಿಸಿದರು. ಇದನ್ನು ಹನುಮಾನ್ ಗರ್ಹಿ ಅಥವಾ ಹನುಮನ ಮನೆ ಎಂದು ಕರೆಯಲಾಯಿತು. ಅಂದರೆ ಇದು ಹನುಮನ ಮನೆ, ಹನುಮಂತ ಇರುವ ಮನೆ ಎಂದು ನಂಬಲಾಯಿತು. ಮಹಾರಾಜ್ ಟಿಕೈತರಾಯ್ ಅವರ ಅಧ್ಯಕ್ಷತೆಯಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು. ಆದರೀಗ ಆ ದೇಗುಲ ನಾಶವಾಗಿದೆ ಎಂದು ಸಂಶೋಧನೆಗಳು ಹೇಳುತ್ತವೆ.
ಅಯೋಧ್ಯೆಯಲ್ಲಿ ರಾಮ ಮಂದಿರ:
2024 ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿ ಶ್ರೀರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಆಗಿದೆ. ಉದ್ಘಾಟನೆಯಾಗಿ ಕೇವಲ 11 ದಿನಗಳಲ್ಲಿ 25 ಲಕ್ಷಕ್ಕೂ ಅಧಿಕ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ, 11 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಸಂಗ್ರಹವಾಗಿದೆ.
ಅಯೋಧ್ಯೆ ಶ್ರೀರಾಮ ಹುಟ್ಟಿದ ಸ್ಥಳ. ರಾಮನ ಪಾದ ಸ್ಪರ್ಶವಾದ ಈ ನೆಲದಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ಭಾರತದ ಕೋಟ್ಯಾಂತರ ಜನರ ಕನಸು ಈಗ ನನಸಾಗಿದೆ. ಹೀಗಾಗಿ ಅಯೋಧ್ಯೆ ಹೆಚ್ಚು ಸುದ್ದಿಯಲ್ಲಿದೆ. ಈ ನಡುವೆ ಅಯೋಧ್ಯೆಗೆ ಸಂಬಂಧಿಸಿದ ಅನೇಕ ಧಾರ್ಮಿಕ ವಿಷಯಗಳು ಹೊರಹೊಮ್ಮುತ್ತಿವೆ.












Click it and Unblock the Notifications