ಖಾಸಗಿ ವಿಮಾನಯಾನ ಸಂಸ್ಥೆಗೆ ₹30 ಲಕ್ಷ ದಂಡ! ಕಾರಣ ತಿಳಿಯಿರಿ
ಮುಂಬೈ: ವಿಮಾನದಲ್ಲಿ ಪ್ರಯಾಣ ಮಾಡುವುದು ಅಂದ್ರೆ ದುಬಾರಿ. ಅದ್ರಲ್ಲೂ ವಿಮಾನ ಸಂಚಾರ ವ್ಯವಸ್ಥೆ ಕಲ್ಪಿಸುವ ಸಂಸ್ಥೆಗಳು ತಪ್ಪನ್ನು ಮಾಡಿದ್ರೆ ಭಾರಿ ದಂಡ ಕಟ್ಟಲೇಬೇಕು. ಈಗ ಯಾಕೆ ಈ ಮಾತು ಅಂದ್ರೆ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೊ ಏರ್‌ಲೈನ್ಸ್‌ಗೆ ₹30 ಲಕ್ಷ ದಂಡ ವಿಧಿಸಲಾಗಿದೆ. ಅರೆರೆ ಇಷ್ಟು ದೊಡ್ಡ ಮೊತ್ತದ ಫೈನ್ ಬಿದ್ದಿದ್ದು ಯಾಕೆ? ದಂಡ ವಿಧಿಸಿದ್ದು ಯಾರು? ಬನ್ನಿ ತಿಳಿಯೋಣ.
ಅಂದಹಾಗೆ ಇಂಡಿಗೊ ಏರ್‌ಲೈನ್ಸ್‌ಗೆ ದೇಶದಲ್ಲಿ ದೊಡ್ಡ ಹೆಸರು ಇದೆ. ಆದರೆ ಇದೀಗ ಈ ಸಂಸ್ಥೆ ವಿರುದ್ಧ ಭಾರಿ ದಂಡ ವಿಧಿಸಿದೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ). ಅಷ್ಟಕ್ಕೂ ಹೀಗೆ ಡಿಜಿಸಿಎ ಭಾರಿ ಪ್ರಮಾಣದ ದಂಡ ವಿಧಿಸಲು ಕಾರಣವನ್ನು ತಿಳಿಸಲಾಗಿದೆ. ವೈಮಾನಿಕ ಕಾರ್ಯಾಚರಣೆ, ತರಬೇತಿ & ಎಂಜಿನಿಯರಿಂಗ್ ಕಾರ್ಯವಿಧಾನ ಸಂಬಂಧಿತ ದಾಖಲಾತಿಗಳ ನ್ಯೂನತೆಗಳ ಹಿನ್ನೆಲೆ ಡಿಜಿಸಿಎ ಇಂಡಿಗೊ ಏರ್‌ಲೈನ್ಸ್‌ಗೆ ₹30 ಲಕ್ಷ ದಂಡ ವಿಧಿಸಿದೆ. ಹಾಗಾದರೆ ಕ್ರಮಕ್ಕೆ ಪ್ರಮುಖ ಕಾರಣ ಏನು? ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಕಠಿಣ ಕ್ರಮ ಕೈಗೊಂಡಿದ್ದು ಏಕೆ? ಮುಂದೆ ಓದಿ.

ನಿರ್ದೇಶನಾಲಯ ಪರಿಶೀಲನೆಯಲ್ಲಿ ಘಟನೆ ಬೆಳಕಿಗೆ
ಅಷ್ಟಕ್ಕೂ ಕಳೆದ 6 ತಿಂಗಳ ಅವಧಿಯಲ್ಲಿ 4 ಬಾರಿ A321 ವಿಮಾನದ ಟೇಲ್ ಸ್ಟ್ರೈಕ್ ಅಂದ್ರೆ ವಿಮಾನ ಲ್ಯಾಂಡಿಂಗ್ ವೇಳೆ ಹಿಂಬದಿ ಭಾಗ ರನ್‌ವೇಗೆ ತಾಗುವ ಘಟನೆ ಸಂಭವಿಸಿತ್ತು ಅಂತಾ ಹೇಳಲಾಗಿದೆ. ಈ ಬಗ್ಗೆ ನಿರ್ದೇಶನಾಲಯ ಪರಿಶೀಲಿಸಿತ್ತು. ಹಾಗೆ ಲೆಕ್ಕಪರಿಶೋಧನೆಯ ವೇಳೆ ವೈಮಾನಿಕ ಸಂಸ್ಥೆ ಕಾರ್ಯಾಚರಣೆ, ತರಬೇತಿ, ಎಂಜಿನಿಯರಿಂಗ್ & ವಿಮಾನದ ದತ್ತಾಂಶ ಮೇಲ್ವಿಚಾರಣೆ ಕಾರ್ಯಕ್ರಮ ಪರಿಶೀಲನೆ ನಡೆಸಲಾಗಿದೆ ಎಂದು ಡಿಜಿಸಿಎ ಹೇಳಿತ್ತು. ವಿಶೇಷ ಲೆಕ್ಕಪರಿಶೋಧನೆ ಸಮಯದಲ್ಲಿ, ಇಂಡಿಗೊ ಕಾರ್ಯಾಚರಣೆ/ತರಬೇತಿ ಕಾರ್ಯವಿಧಾನಗಳು ಸೇರಿದಂತೆ ಎಂಜಿನಿಯರಿಂಗ್ ಕಾರ್ಯವಿಧಾನ ಸಂಬಂಧಿತ ದಾಖಲಾತಿಗಳಲ್ಲಿ ಕೆಲವು ವ್ಯವಸ್ಥಿತ ನ್ಯೂನತೆ ಗಮನಿಸಲಾಗಿದೆ ಎಂದು ತಿಳಿಸಲಾಗಿತ್ತು.
ಅಂದಹಾಗೆ ಈ ಬಗ್ಗೆ ವೈಮಾನಿಕ ಸಂಸ್ಥೆಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿತ್ತು. ಇನ್ನು ಶೋಕಾಸ್ ನೋಟಿಸ್‌ಗೆ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಅದು ತೃಪ್ತಿಕರವಾಗಿರದ ಹಿನ್ನೆಲೆಯಲ್ಲಿ ₹30 ಲಕ್ಷ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಬರೋಬ್ಬರಿ ₹30 ಲಕ್ಷ ರೂಪಾಯಿ ದಂಡ ವಿಧಿಸುವ ಜೊತೆಗೆ, ಡಿಜಿಸಿಎ ಮಾನದಂಡಕ್ಕೆ ಅನುಗುಣವಾಗಿ ಕೆಲ ತಿದ್ದುಪಡಿ ಮಾಡಿಕೊಳ್ಳಲು ಸೂಚಿಸಲಾಗಿದೆಯಂತೆ. ಒಟ್ನಲ್ಲಿ ಹೀಗೆ ವಿಮಾನಯಾನ ಸಂಸ್ಥೆಗೆ ಭಾರಿ ಪ್ರಮಾಣದ ದಂಡ ವಿಧಿಸಿರುವುದು ಈಗ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.












Click it and Unblock the Notifications