HD Deve Gowda: ಜ್ವರದಿಂದ ಬಳಲುತ್ತಿದ್ದರೂ ಅಧಿವೇಶನದಲ್ಲಿ ಭಾಗಿಯಾದ ದೇವೇಗೌಡ್ರು: ಸದನದಲ್ಲಿ ಹೇಳಿದ್ದೇನು?
ನವದೆಹಲಿ, ಫೆಬ್ರವರಿ 14: ಮಾಜಿ ಪ್ರಧಾನ ಮಂತ್ರಿ ಮತ್ತು ಹಿರಿಯ ಮುತ್ಸದ್ದಿ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡರು 92ರ ಇಳಿವಯಸ್ಸು ಮತ್ತು ಜ್ವರದಿಂದ ಬಳಲುತ್ತಿದ್ದರೂ ಇವತ್ತಿನ ಚರ್ಚೆಯಲ್ಲಿ ಭಾಗಿಯಾಗಿ ರಾಜ್ಯದ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದಿದ್ದಾರೆ. ಸದನಕ್ಕೆ ಗೈರಾಗಲು ತನ್ನ ಆತ್ಮಸಾಕ್ಷಿ ಒಪ್ಪಲಿಲ್ಲ ಎಂದು ಅವರು ಹೇಳುತ್ತಾರೆ. ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್ ಧನ್ಕರ್ ಅವರು, ಸರ್, ಆಯಾಸ ಮಾಡ್ಕೋಬೇಡಿ, ನಿಮ್ಮ ಪೇಪರ್ಗಳನ್ನು ಟೇಬಲ್ ಮೇಲಿಡಿ ಸಾಕು ಅನ್ನುತ್ತಾರೆ. ಅದರೂ ದೇವೇಗೌಡರು ತಮ್ಮ ಮಾತನ್ನು ಮಂಡಿಸುತ್ತಾರೆ.
ಅನಾರೋಗ್ಯದ ನಡುವೆಯೂ ರಾಜ್ಯಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಇಡೀ ರಾಷ್ಟ್ರದ ಎಲ್ಲಾ ವರ್ಗಗಳ ಜನರಿಗೆ ಶಕ್ತಿ ತುಂಬುವ ಆಯವ್ಯಯ ಮಂಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆ ಸಂದರ್ಭದಲ್ಲಿ ಸದನದಲ್ಲಿಯೇ ಹಾಜರಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು, ಎಲ್ಲರಿಗೂ ಅನುಕೂಲ ಆಗುವಂತಹ, ದೇಶದ ಅಭಿವೃದ್ಧಿಗೆ ದೂರದೃಷ್ಟಿಯ ಕೊಡುಗೆ ನೀಡುವಂತಹ ಬಜೆಟ್ ಮಂಡಿಸಿದ್ದೀರಿ ಎಂದರು.

ಜನರ ಹಿತಾಸಕ್ತಿಯನ್ನು ಕಾಪಾಡಲು ವಿತ್ತ ಸಚಿವರು ತಮ್ಮ ಕೈಲಾದ ಎಲ್ಲವನ್ನೂ ಮಾಡಿದ್ದಾರೆ. ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ದೇವೇಗೌಡರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಿಂದ ಯುವಜನರು ನಗರಗಳಿಗೆ ವಲಸೆ ಬರುವವರ ಪ್ರಮಾಣ ಹೆಚ್ಚುತ್ತಲೇ ಇದೆ ಎಂದು ದೇವೇಗೌಡರು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಿನ ಜನಸಂಖ್ಯೆ ಈಗ 1.4 ಕೋಟಿಗೆ ಮುಟ್ಟಿದೆ. ಎಲ್ಲಾ ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ತಕ್ಷಣ ಹಳ್ಳಿಗಳನ್ನು ತೊರೆದು ನಗರಗಳಿಗೆ ಬಂದು ಸೇರುತ್ತಿದ್ದಾರೆ. ಇದು ಜೀವನೋಪಾಯದ ಸಮತೋಲನವನ್ನು ತಪ್ಪಿಸುತ್ತಿದೆ. ಯುವಕರಿಗೆ ತಮ್ಮ ಪ್ರದೇಶಗಳಿಗಳಲ್ಲಿಯೇ ಹೆಚ್ಚೆಚ್ಚು ಉದ್ಯೋಗವಕಾಶ ಕಲ್ಪಿಸುವ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಸಲಹೆ ನೀಡಿದರು. ಸಮತೋಲಿತ ಜೀವನೋಪಾಯ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳನ್ನು (MSME) ಬೆಂಬಲಿಸಲು ಹೆಚ್ಚು ಸೂಕ್ತವಾದ ಉಪಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವನ್ನು ದೇವೇಗೌಡ್ರು ಒತ್ತಿ ಹೇಳಿದರು.
"ಹಣಕಾಸು ಬೆಂಬಲ ಪಡೆಯುವಲ್ಲಿ ಅತಿಸಣ್ಣ, ಸಣ್ಣ ಕೈಗಾರಿಕೆಗಳು ಮಧ್ಯಮ ಗಾತ್ರದ ಕೈಗಾರಿಕೆಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಉದ್ದೇಶಕ್ಕಾಗಿ ಪ್ರತ್ಯೇಕ ನೀತಿ, ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯ ತುಂಬಾ ಇದೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಹೇಳಿದರು. ಅತಿ ಸಣ್ಣ, ಸಣ್ಣ ಕೈಗಾರಿಕೆಗಳಿಗೆ ಸಾಲದ ಅನುಮೋದನೆ ನೀಡುವಾಗ ಸಿಬಿಲ್ (CIBIL) ಸ್ಕೋರ್ ಮಾನದಂಡವನ್ನು ಪರಿಗಣಿಸಬಾರದು. ಬಡ್ಡಿದರಗಳನ್ನು ಶೇ.7ರಿಂದ 8ಕ್ಕೆ ಇಳಿಸಬೇಕು ಮತ್ತು ಆರಂಭಿಕ ಸಾಲ ಮರುಪಾವತಿಗಾಗಿ ಸ್ವತ್ತುಗಳ ಮರುಸ್ವಾಧೀನ ದಂಡ ಪ್ರಯೋಗವನ್ನು ಕೈಬಿಡಬೇಕು ಎಂದು ದೇವೇಗೌಡರು ಸರಕಾರವನ್ನು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳಿಗೆ ನಾವು ಹೆಚ್ಚು ಬೆಂಬಲ ನೀಡುವುದನ್ನು ನಾವು ಮುಂದುವರಿಸಬೇಕು. ಬಿಹಾರದಲ್ಲಿ ಮಖಾನಾ ಮಂಡಳಿ ರಚನೆ ಮಾಡಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದ ದೇವೇಗೌಡರು, ಅದೇ ರೀತಿ ಹಲಸಿನ ಹಣ್ಣು, ನೇರಳೆ, ಹುಣಸೆಹಣ್ಣು ಮಂಡಳಿ ರಚಿಸಬೇಕು ಎಂದು ಒತ್ತಾಯ ಮಾಡಿದರು. ಅತಿ ಕಡಿಮೆ ಬಂಡವಾಳದಿಂದ ಮಖಾನಾ ಬೆಳೆಯಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲ ಆಗುತ್ತಿದೆ. ಮಂಡಳಿ ರಚನೆಯಿಂದ ಮತ್ತಷ್ಟು ಅನುಕೂಲ ಆಗುತ್ತದೆ. ಹೀಗಿದ್ದ ಮೇಲೆ ಕನಿಷ್ಠ ಬಂಡವಾಳದಿಂದ ನೈಸರ್ಗಿಕವಾಗಿ ಬೆಳೆಯಲಾಗುವ ಹಲಸಿನ ಹಣ್ಣು, ನೇರಳೆ ಹಾಗೂ ಹುಣಸೆಹಣ್ಣು ಮಂಡಳಿಯನ್ನು ರಚಿಸಬಾರದೇಕೆ ಎಂದು ಸಲಹೆ ನೀಡಿದರು.
ರಾಜ್ಯಸಭೆಯಲ್ಲಿ ಮತ್ತೊಮ್ಮೆ ಬೆಂಗಳೂರಿನ ಕುಡಿಯುವ ನೀರಿನ ಬವಣೆಯ ಬಗ್ಗೆ ಗಮನ ಸೆಳೆದರು. ಬೆಂಗಳೂರಿನಲ್ಲಿ ನೀರಿನ ಟ್ಯಾಂಕರ್‌ಗಳು ಬಡ ನಿವಾಸಿಗಳನ್ನು ಶೋಷಿಸುತ್ತಿವೆ ಎಂಬ ಅಂಶವನ್ನು ಸದನದ ಗಮನಕ್ಕೆ ತಂದ ಅವರು, ಹಣಕಾಸು ಸಚಿವರು ಕುಡಿಯುವ ನೀರಿನ ಯೋಜನೆಗಳಿಗೆ ₹1,400 ಕೋಟಿ ಮಂಜೂರು ಮಾಡಿದ್ದಾರೆ. ಆದರೆ ದೀರ್ಘಾವಧಿಯ ನೀರಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಗೋದಾವರಿ-ಕಾವೇರಿ ಜೋಡಣೆಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಿ ಹೇಳಿದರು.












Click it and Unblock the Notifications