Delhi Election 2025: ಕೇಜ್ರಿವಾಲ್‌ರನ್ನು ಜನ ಮನೆಗೆ ಕಳಿಸ್ತಾರೆ; ಅನುರಾಗ್ ಠಾಕೂರ್
ದೆಹಲಿ ವಿಧಾನಸಭಾ ಚುನಾವಣೆ ರಣಾಂಗಣ ರಂಗೇರಿದ್ದು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಪ್ರತಿ ದಿನ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಎರಡೂ ಪಕ್ಷಗಳು ದೆಹಲಿ ಮತದಾರರಿಗೆ ಭರ್ಜರಿ ಆಮಿಷ ಒಡ್ಡಿದ್ದು ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ. ಈ ಬಾರಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್‌ರನ್ನು ಜನ ಸ್ಟಂಪ್ ಮಾಡಿ ಕ್ಲೀನ್ ಬೌಲ್ಡ್ ಮಾಡುತ್ತಾರೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಭವಿಷ್ಯ ನುಡಿದಿದ್ದಾರೆ.
ಫೆಬ್ರವರಿ 5ರಂದು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುವುದು ಖಚಿತ ಎಂದಿರುವ ಅನುರಾಗ್ ಠಾಕೂರ್, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಗ್ಗೆ ದೆಹಲಿ ಜನತೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ.

"ದೆಹಲಿ ಜನರಿಗೆ ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ ಮತ್ತು ಶುದ್ಧ ಯಮುನೆ ನೀರು ಅಗತ್ಯವಿರುವುದರಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಮತದಾರರು ಸ್ಟಂಪ್ ಮಾಡಿ ಕ್ಲೀನ್ ಬೋಲ್ಡ್ ಮಾಡುತ್ತಾರೆ ಎಂದು ದೆಹಲಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಅನುರಾಗ್ ಠಾಕೂರ್ ಹೇಳಿದ್ದಾರೆ. ಅನುರಾಗ್ ಠಾಕೂರ್ ಮಾಜಿ ಕ್ರೀಡಾ ಸಚಿವರಾಗಿದ್ದು, ಹಿಮಾಚಲ ಪ್ರದೇಶ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ. ಬಿಸಿಸಿಐ ಮಾಜಿ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ.
ಎಎಪಿ ದೊಡ್ಡ ವಿಪತ್ತು ಎಂದ ಬಿಜೆಪಿ
ಬಿಜೆಪಿ ನಾಯಕರು ಎಎಪಿಯನ್ನು ವಿಪತ್ತು ಎಂದೂ ಕರೆಯುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರೇ ಈ ಮಾತನ್ನು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ ಜನರು ಮಹಿಳಾ ವಿರೋಧಿಗಳು, ಅವರು ದೆಹಲಿಯ ಮಹಿಳೆಯರಿಗೆ ದ್ರೋಹ ಮಾಡುತ್ತಾರೆ. ಹಾಲಿ ಸಿಎಂ ಅತಿಶಿಯವರಿಗೂ ಹೋರ್ಡಿಂಗ್‌ಗಳಿಗೆ ಸ್ಥಾನವಿಲ್ಲ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅತಿಶಿ ದೆಹಲಿಗೆ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿದ್ದರು.
ದೆಹಲಿಯ ಮಾಜಿ ಮುಖ್ಯಮಂತ್ರಿಯಾಗಿದ್ದ ಕೇಜ್ರಿವಾಲ್ ಪಂಜಾಬ್ ಪೊಲೀಸರ ರಕ್ಷಣೆಯಲ್ಲಿ ಹೇಗೆ ಇದ್ದರು ಎಂದು ಅನುರಾಗ್ ಠಾಕೂರ್ ಪ್ರಶ್ನೆ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಸಿಎಂ ಅಲ್ಲದೇ ಇದ್ದರೂ ಪಂಜಾಬ್‌ನಲ್ಲಿ ಯಾವುದೇ ಹುದ್ದೆ ಹೊಂದಿಲ್ಲದೇ ಇದ್ದರೂ ಅವರ ಹೆಸರು ಪಂಜಾಬ್‌ನ ಝಡ್+ ಭದ್ರತಾ ವಿಭಾಗದಲ್ಲಿ ಏಕಿದೆ? ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ಎರಡು ಬಾರಿ ಸರ್ಕಾರ ರಚನೆ ಮಾಡಿರುವ ಎಎಪಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.












Click it and Unblock the Notifications