Delhi Election: ದೆಹಲಿ ಚುನಾವಣೆಯಲ್ಲಿ ಎಎಪಿಗೆ ಶಾಕ್! ಫಲೋಡಿ ಸಟ್ಟಾ ಬಜಾರ್ ಕೊಟ್ಟ ಮುನ್ಸೂಚನೆ ಏನು
ದೆಹಲಿ ವಿಧಾನಸಭಾ ಚುನಾವಣೆಗೆ ಮೂರು ಪಕ್ಷಗಳು ಸಜ್ಜಾಗಿದ್ದು ಬಿರುಸಿನ ಪ್ರಚಾರ ನಡೆಸುತ್ತಿವೆ. 2025ರ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ್ ಸ್ಪರ್ಧೆ ಏರ್ಪಟ್ಟಿದ್ದು, ಕಳೆದ ಎರಡು ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎಎಪಿ, ಮೂರನೇ ಬಾರಿ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ.
27 ವರ್ಷಗಳ ಬಳಿಕ ದೆಹಲಿಯಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, 2013ರಲ್ಲಿ ಎಎಪಿ ಅಧಿಕಾರಕ್ಕೆ ಬರುವ ಮುನ್ನ ಸತತವಾಗಿ 15 ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಶತ ಪ್ರಯತ್ನ ನಡೆಸುತ್ತಿದೆ.

ಎಎಪಿಗೆ ಶಾಕ್ ಕೊಟ್ಟ ಸಟ್ಟಾ ಬಜಾರ್
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಚುನಾವಣೆಯಲ್ಲಿ ಸೋಲು ಗೆಲುವಿನ ಬಗ್ಗೆ ಕೂಡ ಬೆಟ್ಟಿಂಗ್ ನಡೆಯುತ್ತದೆ. ದೆಹಲಿ ಚುನಾವಣೆಗೆ ಸಂಬಂಧಪಟ್ಟಂತೆ ರಾಜಸ್ಥಾನ ಮೂಲದ ಫಲೋಡಿ ಸಟ್ಟಾ ಬಜಾರ್ ವಿಧಾನಸಭಾ ಚುನಾವಣೆ ಫಲಿತಾಂಶ ಏನು ಬರಬಹುದು ಎನ್ನುವ ಬಗ್ಗೆ ಮುನ್ಸೂಚನೆ ನೀಡಿದೆ.
ಫಲೋಡಿ ಸಟ್ಟಾ ಬಜಾರ್ ನ್ಯಾಯಯುತವಾಗಿಲ್ಲದೇ ಇದ್ದರೂ ಚುನಾವಣಾ ಫಲಿತಾಂಶಗಳ ಬಗ್ಗೆ ನಿಖರ ಮುನ್ಸೂಚನೆ ನೀಡುವಲ್ಲಿ ಹೆಸರಾಗಿದೆ. ಜೋಧ್‌ಪುರದಿಂದ 142 ಕಿಮೀ ದೂರದಲ್ಲಿರುವ ಥಾರ್ ಮರುಭೂಮಿಯ ಬಫರ್ ವಲಯದಲ್ಲಿರುವ ಫಲೋಡಿ ಸಟ್ಟಾ ಬಜಾರ್ ಯಾವುದೇ ಚುನಾವಣೆಗಳಾದರೂ ಅದರ ಬಗ್ಗೆ ಸೋಲು ಗೆಲುವಿನ ಅಂಕಿ ಅಂಶಗಳನ್ನು ನೀಡುತ್ತದೆ. ಭಾರತದಲ್ಲಿ ಚುನಾವಣಾ ಸಂಬಂಧಿತ ಬೆಟ್ಟಿಂಗ್‌ನ ಕೇಂದ್ರವೆಂದು ಪ್ರಸಿದ್ಧವಾಗಿದೆ.
ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಫಲೋಡಿ ಸಟ್ಟಾ ಬಜಾರ್ ಈ ಬಾರಿ ದೆಹಲಿಯಲ್ಲಿ ರಾಜಕೀಯ ಬದಲಾವಣೆಯ ಮುನ್ಸೂಚನೆ ನೀಡಿದೆ. ಫಲೋಡಿ ಸಟ್ಟಾ ಬಜಾರ್ ಪ್ರಕಾರ, ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಹೇಳಿದೆ. ಆದರೆ ಕಳೆದ ಚುನಾವಣೆಯಂತೆ ಆಮ್ ಅದ್ಮಿ ಪಕ್ಷ ಹೆಚ್ಚಿನ ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಮುನ್ಸೂಚನೆ ನೀಡಿದೆ.
ಸಟ್ಟಾ ಬಜಾರ್ ಪ್ರಕಾರ 2025ರ ಚುನಾವಣೆಯಲ್ಲಿ ಎಎಪಿ 37 ರಿಂದ 39 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ. 2020ರ ಚುನಾವಣೆಯಲ್ಲಿ ಎಎಪಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಸ್ಥಾನಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಾಣಲಿದೆ ಎಂದು ಹೇಳಿದೆ.
ಫಲೋಡಿ ಸಟ್ಟಾ ಬಜಾರ್ ಚುನಾವಣಾ ಮುನ್ಸೂಚನೆ
ಆಮ್ ಆದ್ಮಿ ಪಕ್ಷ - 37-39 ಸ್ಥಾನಗಳು
ಬಿಜೆಪಿ - 25-35 ಸ್ಥಾನಗಳು
ಕಾಂಗ್ರೆಸ್ - 3 ಸ್ಥಾನಗಳು
ಫಲೋಡಿ ಸಟ್ಟಾ ಬಜಾರ್ ಮುನ್ಸೂಚನೆ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶವಿದ್ದು ಕಾಂಗ್ರೆಸ್ ಹೀನಾಯ ಪ್ರದರ್ಶನ ನೀಡಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications