ದೆಹಲಿ ಚುನಾವಣೆ ಹೊತ್ತಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಲಾಭ ತರುತ್ತಾ?
ಬೆಂಗಳೂರು, ಜನವರಿ 29: ದೆಹಲಿ ಚುನಾವಣೆ ಹತ್ತಿರದಲ್ಲಿರುವಾಗಲೇ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಭಾರೀ ಟೀಕೆಗೆ ಒಳಗಾಗುತ್ತಿದೆ. ಬಿಜೆಪಿ ನಾಯಕರು ಸೇರಿದಂತೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹೇಳಿಕೆಯನ್ನು ದೆಹಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅನ್ಯ ಧರ್ಮದವರನ್ನು ಮೆಚ್ಚಿಸುವ ಸಲುವಾಗಿ ಹೇಳಿದ್ರಾ ಎಂಬ ಪ್ರಶ್ನೆಗಳು ಜನವಲಯದಲ್ಲಿ ವ್ಯಕ್ತವಾಗುತ್ತಿವೆ.
ನಮ್ಮ ಸಂವಿಧಾನದಲ್ಲಿಯೇ ಧಾರ್ಮಿಕ ನಂಬಿಕೆಗಳಿಗೆ ಸ್ಥಾನ ನೀಡಲಾಗಿದೆ. ಹೀಗಿರುವಾಗ ನಂಬಿಕೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲವಾಗಿದೆ. ಸದಾ ಸಂವಿಧಾನದ ಬಗ್ಗೆ ಮಾತನಾಡುವ ಹಿರಿಯ ನಾಯಕರೂ ರಾಜಕೀಯದಲ್ಲಿ ಅನುಭವವಿರುವ ಮಲ್ಲಿಕಾರ್ಜುನ ಖರ್ಗೆಯವರು ಇಂತಹದೊಂದು ಹೇಳಿಕೆಯನ್ನೇಕೆ ನೀಡಿದರು? ಅದರಿಂದ ಅವರಿಗೆ ಆಗುವ ಲಾಭವಾದರೂ ಏನಾಗಿತ್ತು? ಕುಂಭಮೇಳಕ್ಕೆ ಸುಮಾರು 40ಕೋಟಿಗಿಂತಲೂ ಹೆಚ್ಚಿನ ಜನರು ಭಾಗವಹಿಸುತ್ತಿದ್ದಾರೆ ಎಂದರೆ ಅದು ಅವರ ನಂಬಿಕೆ ಅಲ್ಲವೆ? ಅದನ್ನು ಪ್ರಶ್ನಿಸುವ ಮತ್ತು ಹಗುರವಾಗಿ ಮಾತನಾಡುವುದಕ್ಕೆ ಅವರೇಕೆ ಮುಂದಾದರು? ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ.

ಕೇವಲ ವಿರೋಧಿಸಬೇಕು ಎನ್ನುವ ಕಾರಣಕ್ಕೆ ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ. ಅದರಲ್ಲೂ ಹಿಂದೂ ಧರ್ಮದ ನಂಬಿಕೆಯನ್ನೇ ಏಕೆ ಟೀಕಿಸುತ್ತಾರೆ ಎಂಬುದು ಈಗ ಜನ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಚಾರವಾಗಿದೆ. ಇಷ್ಟಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಇರುವ ಎಲ್ಲರೂ ನಾಸ್ತಿಕರೇ? ಅಥವಾ ಎಡಪಂಥೀಯವರೇ? ಈಗಾಗಲೇ ಕಾಂಗ್ರೆಸ್ ನ ಹಲವು ನಾಯಕರು ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ಕರ್ನಾಟಕದ ಸ್ಪೀಕರ್ ಯು.ಟಿ.ಖಾದರ್ ಜಾತಿ, ಧರ್ಮವನ್ನು ಬದಿಗಿಟ್ಟು ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ಹೀಗಿರುವಾಗ ಅದರಲ್ಲೂ ಇಡೀ ಜಗತ್ತು ಭಾರತದತ್ತ ನೋಡುತ್ತಿರುವಾಗ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.
ಹಿಂದೂಗಳ ನಂಬಿಕೆಗೆ ದ್ರೋಹವಲ್ಲದೆ ಮತ್ತೇನು?
ಜಾತ್ಯಾತೀತ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ನಾಯಕರು ಹಿಂದೂ ಧರ್ಮದ ವಿಚಾರದಲ್ಲಿ ಏಕೆ ಇಂತಹ ಧೋರಣೆ ತಳೆಯುತ್ತಿದ್ದಾರೋ ಗೊತ್ತಿಲ್ಲ. ರಾಜಕೀಯವಾಗಿ ಏನೇ ಹೇಳಿಕೆಗಳನ್ನು ನೀಡಿದರೆ ಅದನ್ನು ರಾಜಕೀಯ ಪ್ರೇರಿತ ಎಂದು ಬದಿಗೆ ತಳ್ಳಿಬಿಡಬಹುದು ಆದರೆ ಸನಾತನ ಧರ್ಮವನ್ನು ವಿರೋಧಿಸುವುದೇ ಅಜೆಂಡಾ ಆಗಬಾರದಲ್ಲವೆ? ಒಂದು ವೇಳೆ ಎಲ್ಲರೂ ಸನಾತನಿಗಳನ್ನು ವಿರೋಧಿಸುವವರೇ ಆಗಿದ್ದರೆ ಕುಂಭಮೇಳಕ್ಕೆ ಈ ಮಟ್ಟಿಗೆ ಪ್ರವಾಹದಂತೆ ಜನ ಹರಿದು ಬರುತಿದ್ದರೇ ಎಂಬ ಪ್ರಶ್ನೆಯನ್ನೊಮ್ಮೆ ಕೇಳಬೇಕಲ್ಲವೆ?

ರಾಜಕೀಯವಾಗಿ ಎದುರಾಳಿಗಳು ಯಾರಿದ್ದರೋ ಅವರನ್ನು ಹೇಗೆ ಬೇಕಾದರೂ ಹಳಿಯಲಿ ಅದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಎದುರಾಳಿಗಳನ್ನು ವಿರೋಧಿಸುವ ಭರದಲ್ಲಿ ಹಿಂದೂ ಧರ್ಮದ ಜನರ ಭಾವನೆಗೆ, ನಂಬಿಕೆಗೆ ಧಕ್ಕೆಯಾಗುತ್ತದೆ ಎಂಬುದನ್ನು ಮುತ್ಸದ್ಧಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರು ಅರಿಯಬೇಕಾಗಿತ್ತು. ಆದರೆ ದೆಹಲಿ ಚುನಾವಣೆ ಹತ್ತಿರ ಇರುವ ಕಾರಣ ಎದುರಾಳಿಗಳಾಗಿರುವ ಅಮಿತ್ ಶಾ ಮತ್ತು ನರೇಂದ್ರಮೋದಿಯನ್ನು ಟೀಕಿಸುವ ಉದ್ದೇಶದಿಂದ ಕುಂಭಮೇಳದ ಬಗ್ಗೆ ಮಾತನಾಡಿದ್ದಾರೆ. ಇದು ರಾಜಕೀಯವಾಗಿ ಟೀಕೆಯೇ ಆಗಿರಬಹುದು ಆದರೆ ಕುಂಭಮೇಳದಲ್ಲಿ ಸ್ನಾನ ಮಾಡುವ ಕೋಟ್ಯಂತರ ಜನರ ನಂಬಿಕೆ ಮೇಲೆ ಪರಿಣಾಮ ಬೀರಿದೆ ಎನ್ನುವುದು ಕೂಡ ಅಷ್ಟೇ ಸತ್ಯ.
ಹೇಳಿಕೆಗಳು ಜನರ ನಂಬಿಕೆಗೆ ಚ್ಯುತಿ ತರದಿರಲಿ
ದೆಹಲಿ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಖರ್ಗೆ ಅವರ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ. ಮತ್ತು ಅದನ್ನು ಬಿಜೆಪಿ ತುಂಬಾ ಚೆನ್ನಾಗಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಅಮಿತ್ ಶಾ ವಿರುದ್ಧ ಹೇಳಿಕೆಯಾಗಿ ಬಿಂಬಿತವಾಗದೆ ಹಿಂದೂ ಧರ್ಮದ ವಿರೋಧಿ ಹೇಳಿಕೆಯಾಗಿ ದೇಶದಾದ್ಯಂತ ಸದ್ದು ಮಾಡುತ್ತಿದೆ. ಹೀಗಿರುವಾಗ ಇದು ದೆಹಲಿ ವಿಧಾನಸಭಾ ಚುನಾವಣೆ ಪರಿಣಾಮ ಬೀರಲ್ಲವೆ? ಬೀರಿಯೇ ಬೀರುತ್ತದೆ. ಬೀರಲೇ ಬೇಕೆಂದು ಖರ್ಗೆ ಈ ಮಾತುಗಳನ್ನಾಡಿದ್ದಾರೆ ಎಂದರೂ ತಪ್ಪಾಗಲಾರದು. ದೆಹಲಿ ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಗಮನಸೆಳೆಯಬೇಕಾದರೆ ಈ ಹೇಳಿಕೆ ಅಗತ್ಯವಿತ್ತು ಎನ್ನುವುದು ಹಲವರ ಅಭಿಪ್ರಾಯವಾಗಿದೆ.

ಅದು ಏನೇ ಇರಲಿ ಫೆ.5ರಂದು ದೆಹಲಿ ಚುನಾವಣೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ? ಕಾಂಗ್ರೆಸ್ ಲಾಭ ತರುತ್ತಾ? ಎಲ್ಲವೂ ಗೊತ್ತಾಗಲಿದೆ. ಆದರೆ ನಮ್ಮ ನಾಯಕರಿಗೆ ಅನ್ಯ ಧರ್ಮದ ಬಗ್ಗೆ ಮಾತನಾಡುವಾಗ ಇರುವ ಭಯಭಕ್ತಿ ಹಿಂದೂ ಧರ್ಮದ ಬಗ್ಗೆ ಮಾತನಾಡುವಾಗ ಏಕೆ ಇರಲ್ಲ? ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇನ್ನಾದರೂ ಯಾವುದೇ ಪಕ್ಷದ ನಾಯಕರಾಗಿರಲಿ ಹೇಳಿಕೆ ಕೊಡುವಾಗ ಜನರ ನಂಬಿಕೆಗೆ ಚ್ಯುತಿ ಬರದಂತೆ ಎಚ್ಚರಿಕೆ ವಹಿಸುತ್ತಾರಾ? ಕಾದು ನೋಡೋಣ.












Click it and Unblock the Notifications