Delhi Assembly Election: ಬಿಜೆಪಿ ನಾಯಕನ ಹೇಳಿಕೆ; ಕಣ್ಣೀರು ಹಾಕಿದ ದೆಹಲಿ ಸಿಎಂ ಅತಿಶಿ
ದೆಹಲಿ ವಿಧಾನಸಭಾ ಚುನಾವಣೆ ಪ್ರಚಾರ ರಂಗೇರಿದ ಬೆನ್ನಲ್ಲೇ ಬಿಜೆಪಿ ನಾಯಕ ರಮೇಶ್ ಬಿಧುರಿ, ದೆಹಲಿ ಸಿಎಂ ಅತಿಶಿ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ತಮ್ಮ ವಿರುದ್ಧದ ಹೇಳಿಕೆಗೆ ಇಂದು ಅತಿಶಿ ಪ್ರತಿಕ್ರಿಯೆ ನೀಡಿದ್ದು ಮಾತನಾಡುವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ. ತಮ್ಮ ಚುನಾವಣಾ ಲಾಭಕ್ಕಾಗಿ ಬಿಜೆಪಿ ನಾಯಕ ರಮೇಶ್ ಬಿಧುರಿ ವಯಸ್ಸಾದ ವ್ಯಕ್ತಿಯನ್ನು ಕೂಡ ನಿಂದಿಸಲು ಮುಂದಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಜೀವನದಲ್ಲಿ ಶಿಕ್ಷಕರಾಗಿದ್ದಾರೆ. ಅವರು ಸಹಾಯವಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದು, ಅಳುವನ್ನು ತಡೆದುಕೊಳ್ಳಲು ಕಷ್ಟಪಟ್ಟರು.

"ಚುನಾವಣೆಯಲ್ಲಿ ಗೆಲ್ಲಲು ಅವರು ತುಂಬಾ ಕೀಳುಮಟ್ಟಕ್ಕೆ ಇಳಿದಿದ್ದಾರೆ. ವಯಸ್ಸಾದ ವ್ಯಕ್ತಿಯನ್ನು ಕೂಡ ನಿಂದಿಸುತ್ತಾರೆ. ಈ ದೇಶದ ರಾಜಕೀಯ ಇಷ್ಟು ಕೀಳು ಮಟ್ಟಕ್ಕೆ ಇಳಿಯಬಹುದು ಎನ್ನುವುದನ್ನು ನಂಬಲು ಆಗುತ್ತಿಲ್ಲ, ನನ್ನ ವಯಸ್ಸಾದ ತಂದೆಯನ್ನು ನಿಂದಿಸಿ ಜನರ ಬಳಿ ಮತ ಕೇಳುತ್ತಿದ್ದಾರೆ" ಎಂದು ಬೇಸರ ವ್ಯಕ್ತಪಡಿಸಿದರು.
ರಮೇಶ್ ಬಿಧುರಿ ಹೇಳಿದ್ದೇನು?
ದೆಹಲಿಯ ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಬಿಧುರಿ ಸ್ಪರ್ಧಿಸಿದ್ದು, ಎಎಪಿಯಿಂದ ಅತಿಶಿ ಸ್ಪರ್ಧಿಸಿದ್ದಾರೆ. ಭಾನುವಾರ ದೆಹಲಿಯಲ್ಲಿ ನಡೆದ ರ್‍ಯಾಲಿ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಬಿದುರಿ, ತಮ್ಮ ಎದುರಾಳಿ ಅತಿಶಿಯನ್ನು ಗುರಿಯಾಗಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. "ಅತಿಶಿ ತನ್ನ ತಂದೆಯನ್ನು ಬದಲಾಯಿಸಿದ್ದಾರೆ, ಅವರು ಮೊದಲು ಅತಿಶಿ ಮರ್ಲೆನಾ ಆಗಿದ್ದರು, ಈಗ ಆಕೆಯ ಉಪನಾಮ ಅತಿಶಿ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ. ಉಗ್ರ ಅಫ್ಜಲ್ ಗುರುವಿಗೆ ಕ್ಷಮಾದಾನ ಕೋರಿ ಆಕೆಯ ಪೋಷಕರು ಅರ್ಜಿ ಸಲ್ಲಿಸಿದ್ದರು" ಎಂದು ಹೇಳಿದ್ದರು.
ಈ ಕಾಮೆಂಟ್‌ಗಳು ಎಎಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದವು.
ವ್ಯಾಪಕ ಟೀಕೆ
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರಮೇಶ್ ಬಿಧುರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕ ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಅತಿಶಿ ವಿರುದ್ಧ ಕೆಟ್ಟ ಭಾಷೆ ಬಳಸುತ್ತಿದ್ದಾರೆ. ಮಹಿಳಾ ಮಖ್ಯಮಂತ್ರಿಗೆ ಅವಮಾನ ಮಾಡಿರುವುದನ್ನು ದೆಹಲಿ ಜನ ಸಹಿಸುವುದಿಲ್ಲ, ದೆಹಲಿಯ ಮಹಿಳೆಯರು ಬಿಜೆಪಿಗೆ ಬುದ್ದಿ ಕಲಿಸುತ್ತಾರೆ ಎಂದು ಹೇಳಿದ್ದಾರೆ.
ಎಎಪಿ ಮುಖಂಡೆ ಪ್ರಿಯಾಂಕಾ ಕಕ್ಕರ್ ಕೂಡ ಬಿಜೆಪಿ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಮುಖ್ಯಮಂತ್ರಿಗೆ ಹೀಗೆ ಮಾತನಾಡುವ ರಮೇಶ್ ಬಿಧುರಿ ಸಾಮಾನ್ಯ ಮಹಿಳೆಯರ ಬಳಿ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಬಿಜೆಪಿಗೆ ಮಹಿಳೆಯರನ್ನು ಅವಮಾನಿಸುವುದು ಸಾಮಾನ್ಯವಾಗಿದೆ. ಅವರಿಗೆ ಕ್ಷೇತ್ರದ ಮತದಾರರು ಪಾಠ ಕಲಿಸುತ್ತಾರೆ ಎಂದು ಹೇಳಿದರು.
ರಮೇಶ್ ಬಿಧುರಿ ಅತಿಶಿ ಬಗ್ಗೆ ಮಾತ್ರವಲ್ಲದೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ಕೂಡ ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಾನು ಗೆದ್ದರೆ ಕಲ್ಕಾಜಿಯಲ್ಲಿ ಪ್ರಿಯಾಂಕಾ ಗಾಂಧಿ ಕೆನ್ನೆಯಂತೆ ನುಣುಪಾದ ರಸ್ತೆ ಮಾಡಿಸುತ್ತೇನೆ ಎಂದಿದ್ದರು. ಅವರ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಕ್ಷಮೆ ಕೇಳಿದ್ದರು.












Click it and Unblock the Notifications