ದೆಹಲಿ ವಿಧಾನಸಭಾ ಚುನಾವಣೆ: ‘ಕೈ’ನಾಯಕರಿಗೆ ಕೇಜ್ರಿವಾಲ್ ಬಿಸಿತುಪ್ಪ!

ನವದೆಹಲಿ, ಡಿಸೆಂಬರ್‌ 26: ಹೊಸವರ್ಷದ ಮೊದಲ ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆಯಿದ್ದು, ಈಗಾಗಲೇ ಆಡಳಿತರೂಢ ಎಎಪಿ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಮಾಡಿಕೊಂಡಿದೆ. ಅದು ಮತದಾರರನ್ನು ಸೆಳೆಯುವ ಸಲುವಾಗಿ ಚುನಾವಣಾ ಸಂಹಿತೆ ಜಾರಿಯಾಗುವ ಮುನ್ನವೇ ಗ್ಯಾರಂಟಿ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಿ, ವಿಶ್ವಾಸವನ್ನು ಗಟ್ಟಿಗೊಳಿಸುವುದರಲ್ಲಿ ನಿರತವಾಗಿದೆ.

ದೆಹಲಿಯಲ್ಲಿ ಎರಡು ಅವಧಿಯ ಅಧಿಕಾರವನ್ನು ಪೂರೈಸಿರುವ ಎಎಪಿ ಸರ್ಕಾರ ಮುಂದಿನ ಅವಧಿಗೂ ಅಧಿಕಾರವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದಿದ್ದು, ಕಳೆದೊಂದು ತಿಂಗಳ ಅವಧಿಯಲ್ಲಿ ಮುಂದಿನ ಚುನಾವಣೆಗೆ ಬೇಕಾದ ಸಿದ್ಧತೆಗಳಿಗೆ ಚಾಲನೆ ನೀಡಿ ಅನುಷ್ಠಾನಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಚುನಾವಣಾ ಸಂಹಿತೆ ಜಾರಿಯಾಗುವ ಮೊದಲು ಏನೆಲ್ಲ ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನು ಮಾಡಿಟ್ಟು ಬಳಿಕ ಚುನಾವಣೆಗೆ ಹೋಗುವುದು ಕೇಜ್ರಿವಾಲ್ ಅವರ ತಂತ್ರವಾಗಿದೆ.

Delhi Assembly Elections Arvind Kejriwal Strategic Preparation

ಮೊದಲ ಅವಧಿಯಲ್ಲಿದ್ದ ಕೇಜ್ರಿವಾಲ್ ಅವರ ಜನಪ್ರಿಯತೆ ಎರಡನೆ ಅವಧಿಗೆ ಸ್ವಲ್ಪ ಮಂಕಾಗಿತ್ತು. ಹೀಗಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಳ ನುಗ್ಗಲು ಅವಕಾಶ ದೊರಕಿತ್ತು. ಆದ್ದರಿಂದ ಬಿಜೆಪಿ ಅಲ್ಲಿ ಎಂಟು ಸ್ಥಾನಗಳನ್ನು ಗಳಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಕಳೆದೊಂದು ದಶಕದ ಅವಧಿಯಲ್ಲಿ ಕೇಜ್ರಿವಾಲ್ ಅವರ ಜನಪ್ರಿಯತೆ ಕುಗ್ಗುತ್ತಾ ಹೋಗಿದೆ. ಈ ಬಾರಿ ಕೇಜ್ರಿವಾಲ್ ಗೆ ಮೊದಲಿನಂತೆ ಚುನಾವಣೆಯಲ್ಲಿ ಸುಲಭ ಗೆಲುವು ಅಸಾಧ್ಯವಾಗಿದೆ.

ಕುಸಿತ ಕಂಡ ಎಎಪಿಯ ಜನಪ್ರಿಯತೆ

ಈ ಸಲದ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಪರ್ಧೆ ನೀಡಿದರೆ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಕೇಜ್ರಿವಾಲ್ ಸೇರಿದಂತೆ ಸಂಪುಟದ ಹಲವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅದರಲ್ಲೂ ಕೇಜ್ರಿವಾಲ್ ಸ್ವತಃ ಭ್ರಷ್ಟಾಚಾರದ ಆರೋಪ ಹೊತ್ತು ಜೈಲ್ ಗೆ ಹೋಗಿ ಬಂದಿದ್ದಲ್ಲದೆ, ತನ್ನ ಮುಖ್ಯಮಂತ್ರಿ ಪದವಿಯನ್ನೇ ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನು ಗಮನಿಸಿದರೆ ಎಎಪಿ ಸ್ವಲ್ಪ ಎಚ್ಚರ ತಪ್ಪಿದರೂ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿಯಂತು ಇದ್ದೇ ಇದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಎಎಪಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದು ದೆಹಲಿಯಲ್ಲಿ ಎಎಪಿಯ ಜನಪ್ರಿಯತೆ ಕಡಿಮೆಯಾಗಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಬಿಂಬಿಸಲಾಗುತ್ತಿರುವುದು ಎಎಪಿ ನಾಯಕರ ಸಣ್ಣಗಿನ ನಡುಕಕ್ಕೆ ಕಾರಣವಾಗಿದೆ. ಇದರಿಂದಲೇ ಅವರು ಚುನಾವಣೆಗೆ ಆರು ತಿಂಗಳು ಇರುವಾಗಲೇ ಸಿದ್ಧತೆಗಳನ್ನು ಮಾಡಿಕೊಳ್ಳಲು ಮುಂದಾಗಿರುವುದು ಎಂಬ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Delhi Assembly Elections Arvind Kejriwal Strategic Preparation

ಮೈತ್ರಿ ಧರ್ಮ ಪಾಲನೆ ಆಗುತ್ತಾ?

ಹಾಗೆನೋಡಿದರೆ ಇಂಡಿಯಾ ಒಕ್ಕೂಟ ಸ್ಥಾಪನೆಯಾದ ಬಳಿಕ ಎಎಪಿ ಪ್ರಾಬಲ್ಯದ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಇಲ್ಲಿ ಮೈತ್ರಿ ನಡೆಯುವುದು ಕಷ್ಟಸಾಧ್ಯವೇ... ಈಗಾಗಲೇ ಎಎಪಿ ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಬಹಿರಂಗವಾಗಿಯೇ ಘೋಷಿಸಿದೆ. ಹೀಗಿರುವಾಗ ಮೈತ್ರಿಧರ್ಮ ಪಾಲನೆ ಇಲ್ಲಿ ಅಸಾಧ್ಯವೇ.. ಸದ್ಯಕ್ಕೆ ಇಲ್ಲಿ ಇಕ್ಕಟ್ಟಿಗೆ ಸಿಕ್ಕಿರುವುದು ಕಾಂಗ್ರೆಸ್ ಪಕ್ಷವೇ.

ಎಎಪಿಯನ್ನು ಎದುರು ಹಾಕಿಕೊಳ್ಳಬೇಕಲ್ಲ ಎಂಬ ಕಾರಣಕ್ಕೆ ಕಣದಿಂದ ಹಿಂದಕ್ಕೆ ಸರಿದರೆ ರಾಷ್ಟ್ರೀಯ ಪಕ್ಷವಾಗಿ ನಗೆಪಾಟಲಿಗೀಡಾಗ ಬೇಕಾಗುತ್ತದೆ. ಸ್ಪರ್ಧೆ ಮಾಡಿದರೆ ಆಡಳಿತರೂಢ ಎಎಪಿ ವಿರುದ್ಧವೇ ಗುದ್ದಾಡಬೇಕಿದೆ. ಇಲ್ಲಿ ಮೋದಿಯನ್ನು ಜರೆಯುತ್ತಾ ಮತಕೇಳಲು ಸಾಧ್ಯವಿಲ್ಲ. ಹಾಗೆಂದು ಕೇಜ್ರಿವಾಲ್ ವಿರುದ್ಧ ಮಾತನಾಡುವಂತೆಯೂ ಇಲ್ಲ. ಇದೊಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಲಿದೆ.

ಖಾತೆ ತೆರೆಯುವ ಪ್ರಯತ್ನ ಮಾಡುತ್ತಾ?

ಕಳೆದ 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿದರೂ ಶೂನ್ಯ ಸಾಧನೆ ಮಾಡಿತ್ತು. ಬಿಜೆಪಿ ಎಂಟು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 62 ಸ್ಥಾನವನ್ನು ಪಡೆದುಕೊಂಡಿತ್ತು. ಧೀರ್ಘ ಕಾಲದವರೆಗೆ ದೆಹಲಿಯನ್ನು ಆಳಿದ್ದ ಕಾಂಗ್ರೆಸ್ ಕಳೆದ ಎರಡು ಅವಧಿಯಲ್ಲೂ ಶೂನ್ಯದಲ್ಲಿಯೇ ಇದ್ದು ಈ ಬಾರಿ ಖಾತೆ ತೆರೆಯಲು ಪ್ರಯತ್ನ ಪಡುತ್ತೋ ಅಥವಾ ಕೇಜ್ರಿವಾಲ್ ನ್ನು ಎದುರು ಹಾಕಿಕೊಳ್ಳುವುದು ಬೇಡವೆಂದು ಕಣದಿಂದ ಹಿಂದೆ ಸರಿಯುತ್ತಾರೋ ಗೊತ್ತಿಲ್ಲ.

Delhi Assembly Elections Arvind Kejriwal Strategic Preparation

ಪಂಜಾಬ್ ಮತ್ತು ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಇದೆರಡು ರಾಜ್ಯದಲ್ಲಿ ಅಧಿಕಾರವನ್ನು ಯಾರಿಗೂ ಬಿಟ್ಟುಕೊಡದೆ ಉಳಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದೆ. ಹಾಗಾಗಿ ಅದು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗೆ ಹೋಗಿದ್ದರೂ ಅದರಿಂದ ಎಎಪಿಗೆ ಲಾಭವೇನು ಆಗಿಲ್ಲ. ಹಾಗೆಯೇ ಪ್ರಾದೇಶಿಕ ಪಕ್ಷಗಳೊಂದಿಗೆ ಇಂಡಿಯಾ ಒಕ್ಕೂಟ ರಚಿಸಿಕೊಂಡು ಲೋಕಸಭಾ ಚುನಾವಣೆಗೆ ಹೋದ ಕಾಂಗ್ರೆಸ್ 2019ಕ್ಕೆ ಹೋಲಿಸಿದರೆ 2024ರಲ್ಲಿ ಒಂದಷ್ಟು ಹೆಚ್ಚಿಗೆ ಸ್ಥಾನಗೆಲ್ಲಲು ಸಾಧ್ಯವಾಗಿದೆ.

ಲೋಕಾಗೆ ಮಾತ್ರ ಸೀಮಿತವಾಗುತ್ತಾ ಮೈತ್ರಿ?

ಇದನ್ನು ಹೊರತು ಪಡಿಸಿದರೆ ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡ ಮುಲಾಜಿಗೆ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕ ಮಾತಿಗೆ ಮನ್ನಣೆ ನೀಡಲೇ ಬೇಕಾಗಿದೆ. ಇದರಿಂದ ಕಾಂಗ್ರೆಸ್ ಗೆ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಿದ್ದು, ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಮಾರ್ಗವೇ ಇಲ್ಲದಂತಹ ಸ್ಥಿತಿಯೂ ನಿರ್ಮಾಣವಾಗಿದೆ. ಸದ್ಯ ದೆಹಲಿಯಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್ ಗೆ ಅಲ್ಲಿ ಎಎಪಿ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗಲು ಸಾಧ್ಯವೇ ಇಲ್ಲದಾಗಿದೆ.

Delhi Assembly Elections Arvind Kejriwal Strategic Preparation

ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರು ಯಾವ ರೀತಿಯಲ್ಲಿ ಮುಂದಡಿಯಿಡುತ್ತಾರೆ ಎನ್ನುವುದೇ ಪ್ರಶ್ನೆಯಾಗಿ ಕಾಡುತ್ತಿದೆ. ಈ ಬೆಳವಣಿಗೆಯನ್ನು ನೋಡಲು ರಾಜಕೀಯ ನಾಯಕರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಇಲ್ಲಿ ಕಾಂಗ್ರೆಸ್ ನಿಲುವು ಹೇಗಿರುತ್ತದೆ? ಮೈತ್ರಿ ಕೇವಲ ಲೋಕಸಭಾ ಚುನಾವಣೆಗಷ್ಟೇ ಸೀಮಿತವಾಗುತ್ತಾ? ಕಾದುನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+