Delhi Assembly Election 2025: ಚುನಾವಣಾ ಪ್ರಚಾರ, ಎಎಪಿಯಿಂದ ಹೊಸ ಹಾಡು
ನವದೆಹಲಿ, ಜನವರಿ 13: ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. 2015, 2020ರಲ್ಲಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷ 2025ರ ಚುನಾವಣೆಯಲ್ಲಿಯೂ ಗೆದ್ದು, ಹ್ಯಾಟ್ರಿಕ್ ಸಾಧಿಸುವ ಉತ್ಸಾಹದಲ್ಲಿದೆ. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.
ದೆಹಲಿ ಚುನಾವಣೆಗೆ ಎಎಪಿ, ಬಿಜೆಪಿ, ಕಾಂಗ್ರೆಸ್ ಪ್ರಚಾರವನ್ನು ಆರಂಭಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ದೆಹಲಿಯ ಮಾಜಿ ಸಿಎಂ, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷ ಮತ್ತೊಮ್ಮೆ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.

ಎಎಪಿ ಚುನಾವಣಾ ಪ್ರಚಾರದ ಹಾಡು: ಆಮ್ ಆದ್ಮಿ ಪಕ್ಷ ಅರವಿಂದ ಕೇಜ್ರಿವಾಲ್ ಮತ್ತೆ ಆರಿಸಿ (Choose Kejriwal Again) ಎಂಬ ಚುನಾವಣಾ ಪ್ರಚಾರದ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಎಎಪಿ ಸರ್ಕಾರ ಜಾರಿಗೆ ತಂದ ಉಚಿತ ನೀರು, ವಿದ್ಯುತ್ ಮುಂತಾದ ಯೋಜನೆಗಳನ್ನು ವೈಭವೀಕರಿಸಲಾಗಿದೆ.
ಈ ಹಾಡಿನಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು 'ದೆಹಲಿಯ ಪುತ್ರ' ಎಂದು ಬಣ್ಣಿಸಲಾಗಿದೆ. ಈ ಪ್ರಚಾರದ ಹಾಡು 1.33 ನಿಮಿಷವಿದೆ. ಹಾಡಿನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಪಕ್ಷ ಮಾಡಿದ ಕೆಲಸಗಳನ್ನು ಸಹ ವಿವರಿಸಲಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ ದೆಹಲಿಯಲ್ಲಿರುವ ಪಂಜಾಬಿ ಸಮುದಾಯದ ಜನರನ್ನು ಸೆಳೆಯುವಂತೆ ಈ ಹಾಡನ್ನು ರಚನೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯ ಜನರಿಗೆ ಪಕ್ಷ 10 ವರ್ಷಗಳಲ್ಲಿ ಜಾರಿಗೊಳಿಸಿದ ಯೋಜನೆಗಳನ್ನು ಹಾಡಿನಲ್ಲಿ ಸೇರಿಸಲಾಗಿದೆ.
ದೆಹಲಿಯಲ್ಲಿ ಪಂಜಾಬಿ ಸಮುದಾಯ ಬಹಳ ಪ್ರಭಾವ ಹೊಂದಿದೆ. ಚುನಾವಣಾ ಫಲಿತಾಂಶದಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೆಹಲಿಯಲ್ಲಿರುವ ಒಟ್ಟು ಕ್ಷೇತ್ರಗಳು 70. 25-28 ಕ್ಷೇತ್ರಗಳಲ್ಲಿ ಪಂಜಾಬಿ ಸಮುದಾಯ ಬಹಳ ಪ್ರಭಾವವನ್ನು ಹೊಂದಿದೆ.
ಈಗಾಗಲೇ ಎಎಪಿ ದೆಹಲಿ ಚುನಾವಣಾ ಪ್ರಚಾರಕ್ಕೆ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. 'ಫಿರ್ ಲಾಯೇಂಗೇ ಕೇಜ್ರಿವಾಲ್' ಪಕ್ಷದ ಮೊದಲ ಹಾಡಾಗಿದೆ. ಬಿಜೆಪಿ ಸಹ ಪ್ರಚಾರಕ್ಕೆ ಹಾಡನ್ನು ಬಿಡುಗಡೆ ಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಕೈಗೊಳ್ಳುವ ಯೋಜನೆಗಳ ಮಾಹಿತಿಯನ್ನು ನೀಡಲಾಗಿದೆ.
ಎಎಪಿ ಪಕ್ಷ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗುತ್ತಿದೆ. ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಸಿಬಿಐನಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದರು. ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ಹೊರಬಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಬಳಿಕ ಅತಿಶಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. 2025ರ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಜಯಗಳಿಸಿದರೆ ಅರವಿಂದ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈಗಾಗಲೇ ಅವರು ಘೋಷಣೆ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ, ನಾಯಕರ ಜೈಲುವಾಸದ ಹಿನ್ನಲೆಯಲ್ಲಿ ಎಎಪಿ ಈ ಬಾರಿಯ ಚುನಾವಣೆಯಲ್ಲಿ ಹಲವು ಸವಾಲು ಎದುರಿಸುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟದಲ್ಲಿದ್ದ ಎಎಪಿ, ದೆಹಲಿ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತಿದೆ. ಬಿಜೆಪಿ, ಕಾಂಗ್ರೆಸ್ ಚುನಾವಣೆಯಲ್ಲಿ ಎಎಪಿಗೆ ಪ್ರಬಲ ಎದುರಾಳಿಗಳು. ಎರಡು ಬಾರಿ ಗೆದ್ದಿರುವ ಪಕ್ಷ ಈ ಬಾರಿಯೂ ಗೆದ್ದು, ಹ್ಯಾಟ್ರಿಕ್ ಸಾಧಿಸುವ ಉತ್ಸಾಹದಲ್ಲಿದೆ.












Click it and Unblock the Notifications