Delhi Assembly Election 2025: ದೆಹಲಿಯಲ್ಲಿ ಮತ್ತೆ ಎಎಪಿ ಸರ್ಕಾರ, ಕಾಂಗ್ರೆಸ್‌ಗೆ ಮುಖಭಂಗ
ನವದೆಹಲಿ, ಜನವರಿ 19: ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ಯಾರಿಗೆ ಬಹುಮತ? ಎಂಬ ಚರ್ಚೆಗಳು ಜೋರಾಗಿವೆ. ಈಗಾಗಲೇ 2015, 2020ರಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದಿರುವ ಆಮ್ ಆದ್ಮಿ ಪಕ್ಷ ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಪ್ರಚಾರ ಜೋರಾಗಿದೆ.
ದೆಹಲಿ ವಿಧಾನಸಭೆ ಚುನಾವಣೆ ಮತ ಎಣಿಕೆ ಫೆಬ್ರವರಿ 8ರಂದು ನಡೆಯಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ಕಣದಲ್ಲಿರುವ ಪ್ರಮುಖ ಪಕ್ಷಗಳು. ಮೂರು ಪಕ್ಷಗಳು ಯಾವುದೇ ಮೈತ್ರಿಕೂಟ ಮಾಡಿಕೊಳ್ಳದೇ ಏಕಾಂಗಿಯಾಗಿ ಜನರ ಮುಂದೆ ಹೋಗಿವೆ.

ರಾಷ್ಟ್ರ ರಾಜಧಾನಿಯಲ್ಲಿ ಯಾರ ಅಧಿಕಾರ? ಎಂಬ ಕುರಿತು ಸಮೀಕ್ಷೆಗಳು ನಡೆಯುತ್ತಿವೆ. ಈಗ ಪ್ರಕಟವಾಗಿರುವ ಸಮೀಕ್ಷೆಯೊಂದು ಎಎಪಿ ಪಕ್ಷ ಪುನಃ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ ಎಂದು ಅಂದಾಜಿಸಿದೆ. ಬಿಜೆಪಿ ಸಹ ಉತ್ತಮ ಫಲಿತಾಂಶ ಪಡೆಯಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ ಉಂಟಾಗಲಿದೆ ಎಂದು ವಿಶ್ಲೇಷಣೆ ಮಾಡಿದೆ.
ಸಮೀಕ್ಷೆಯ ವರದಿ ಹೇಳುವುದೇನು?; ದೆಹಲಿ ವಿಧಾನಸಭೆ ಚುನಾವಣೆ 2025ರ ಕುರಿತು Janmat Polls ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಈಗ ಚುನಾವಣೆ ನಡೆದರೆ ಆಮ್ ಆದ್ಮಿ ಪಕ್ಷ 39-41 ಸೀಟುಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ಅಂದಾಜಿಸಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಸಮೀಕ್ಷೆಯ ಪ್ರಕಾರ ಎಎಪಿ ಸ್ಪಷ್ಟ ಬಹುಮತ ಪಡೆಯಲಿದೆ.
ಸಮೀಕ್ಷೆಯ ವರದಿಯಂತೆ ಬಿಜೆಪಿ 29-31 ಮತ್ತು ಕಾಂಗ್ರೆಸ್ 1-2 ಸೀಟುಗಳಲ್ಲಿ ಗೆಲ್ಲಲಿದೆ. ಇತರರು ಯಾವುದೇ ಸ್ಥಾನವನ್ನು ಗೆಲ್ಲುವುದಿಲ್ಲ. ಈ ಸಮೀಕ್ಷೆಯ ವರದಿ ಪ್ರಕಾರ ಬಿಜೆಪಿ ಮತ್ತು ಎಎಪಿ ಚುನಾವಣೆಯಲ್ಲಿ ಎದುರಾಳಿಗಳು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮುಖಭಂಗವನ್ನು ಅನುಭವಿಸಲಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ 'ಇಂಡಿಯಾ' ಮೈತ್ರಿಕೂಟದಲ್ಲಿ ಮಿತ್ರಪಕ್ಷಗಳು. ಆದರೆ ದೆಹಲಿ ವಿಧಾನಸಭೆ ಚುನಾವಣೆಯನ್ನು ಎರಡೂ ಪಕ್ಷಗಳು ಏಕಾಂಗಿಯಾಗಿ ಎದುರಿಸುತ್ತಿವೆ. ಆದರೆ ಚುನಾವಣಾ ಫಲಿತಾಂಶ ಕಾಂಗ್ರೆಸ್‌ಗೆ ಸಂತಸ ತರುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.
2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 62 ಸೀಟುಗಳಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ 2ನೇ ಬಾರಿಗೆ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ 8 ಸೀಟುಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಲು ಸಹ ವಿಫಲವಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ 1-2 ಸೀಟು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಕಾಂಗ್ರೆಸ್, ಬಿಜೆಪಿಯ ಪ್ರಕಾರ ದೆಹಲಿಯಲ್ಲಿ ಎಎಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಭ್ರಷ್ಟಾಚಾರ ಆರೋಪ, ಅರವಿಂದ ಕೇಜ್ರಿವಾಲ್ ಜೈಲುವಾಸ, ಮುಖ್ಯಮಂತ್ರಿಗಳ ಬದಲಾವಣೆ ಬಳಿಕ ಎಎಪಿ ವಿರುದ್ಧ ಜನಾಕ್ರೋಶವಿದೆ. ಇದನ್ನು ಬಳಕೆ ಮಾಡಿಕೊಂಡು ಅಧಿಕಾರ ಹಿಡಿಯಬೇಕು ಎಂದು ಎರಡೂ ಪಕ್ಷಗಳು ತಂತ್ರವನ್ನು ರೂಪಿಸಿವೆ.
ಫೆಬ್ರವರಿ 5ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ 70 ಕ್ಷೇತ್ರಗಳಿಗೆ 981 ಅಭ್ಯರ್ಥಿಗಳು 1,521 ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಶನಿವಾರ ನಾಮಪತ್ರಗಳ ಪರಿಶೀಲನೆ ನಡೆದಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಜನವರಿ 20ರ ಸೋಮವಾರ ಕೊನೆಯ ದಿನವಾಗಿದೆ.
ಹಾಲಿ ದೆಹಲಿಯ ಮುಖ್ಯಮಂತ್ರಿ ಅತಿಶಿ ಮಾರ್ಲೆನಾ. ಚುನಾವಣೆಯಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಅರವಿಂದ ಕೇಜ್ರಿವಾಲ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅತಿಶಿ ಮಾರ್ಲೆನಾ ಮತ್ತು ಎಎಪಿ ಪಕ್ಷ ಈಗಾಗಲೇ ಘೋಷಣೆ ಮಾಡಿದೆ. ಬಿಜೆಪಿ, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆ ಎದುರಿಸುತ್ತಿವೆ.












Click it and Unblock the Notifications