ದೆಹಲಿ ಚುನಾವಣೆ: ನಾಮಪತ್ರ ಸಲ್ಲಿಸಿದ ಅರವಿಂದ್ ಕೇಜ್ರಿವಾಲ್, ಯಾವ ಕ್ಷೇತ್ರ? ಎದುರಾಳಿಗಳು ಯಾರ್ಯಾರು?
ಬೆಂಗಳೂರು, ಜನವರಿ 15: ದೆಹಲಿ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಘಟಾನುಘಟಿ ನಾಯಕರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬುಧವಾರ ನಾಮಪತ್ರ ಸಲ್ಲಿಸಿದರು. ಫೆಬ್ರವರಿ 5 ರಂದು ನಡೆಯಲಿರುವ ದೆಹಲಿ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಸಿರುವ ಅವರು ದೇವರ ಪೂಜೆ ನೆರವೇರಿಸಿ ಉಮೇರದುವಾರಿಕೆ ಸಲ್ಲಿಸಿದರು.
ಇಂದು ಬೆಳಗ್ಗೆ ನಾಮಪತ್ರ ಸಲ್ಲಿಕೆಗೂ ಮೊದಲು ಅರವಿಂದ್ ಕೇಜ್ರಿವಾಲ್ ಅವರು ವಾಲ್ಮೀಕಿ ಮತ್ತು ಹನುಮಾನ್ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಚುನವಣಾಧಿಕಾರಿಗಳ ಕಚೇರಿಗೆ ಪತ್ನಿ, ಪಕ್ಷದ ಬೆಂಬಲಿಗರ ಸಮೇತರಾಗಿ ಬಂದು ನಾಮಪತ್ರ ಫೈಲ್ ಮಾಡಿದರು.

ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅಧಿಕೃತಿ ಮಾಹಿತಿ ನೀಡಿದ ಅವರು, ನವದೆಹಲಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದೇನೆ. ಕಳೆದ ಎರಡು ಭಾರಿ ಎಎಪಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ಕಳೆದೊಂದು ದಶಕದಲ್ಲಿ ರಾಜಧಾನಿ ಜನರು ನನಗೆ ನೀಡಿರುವ ಪ್ರೀತಿ ಹಾಗೂ ಆಶೀರ್ವಾದಗಳು ನನಗೆ ಪೂರ್ಣ ಸಮರ್ಪಣೆ ಮತ್ತು ಸೇವಾ ಮನೋಭಾವದಿಂದ ಕೆಲಸ ಮಾಡಲು ಶಕ್ತಿ ತುಂಬಿದೆ. ಅವರ ನಂಬಿಕೆಯೇ ನನಗೆ ಸ್ಫೂರ್ತಿ ಎಂದರು.
ದೆಹಲಿಯ ಜನರು ಈ ಬಾರಿಯೂ ಕೆಲಸದ ರಾಜಕೀಯ ಆಯ್ಕೆ ಮಾಡುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಎಎಪಿಗೆ ಮತ್ತೊಮ್ಮೆ ಆಶೀರ್ವಾದ ಮಾಡಲಿದ್ದಾರೆ. ನಮ್ಮ ಪಕ್ಷ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ತಾಯಂದಿರು, ಅಕ್ಕ ತಮ್ಮಂದಿರ ಆಯ್ಕೆ ಎಎಪಿ ಆಗಿರಲಿದೆ ಎಂಬ ನಂಬಿಕೆ ನನ್ನಲ್ಲಿದೆ ಎಂದರು. ಅವರು ನವದೆಹಲಿ ಕ್ಷೇತ್ರದಿಂದ ಬಿಜೆಪಿಯ ಪರ್ವೇಶ್ ವರ್ಮಾ ಮತ್ತು ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ವಿರುದ್ಧ ಕಣಕ್ಕಿಳಿದಿದ್ದಾರೆ. ದೇಶದಲ್ಲಿ ನವದೆಹಲಿಯತ್ತ ಜನರ ಚಿತ್ತ ನೆಟ್ಟಿದೆ. ಇದೀಗ ನವದೆಹಲಿ ಕ್ಷೇತ್ರವು ರಾಜಕೀಯ ಗಮನ ಸೆಳೆಯಲು ಸಜ್ಜಾಗಿದೆ.
ಪ್ರಸಕ್ತ ಸಾಲಿನ ದೆಹಲಿ ವಿಧಾನಸಭಾ ಚುನಾವಣೆ ಫೆಬ್ರವರಿ 5 ರಂದು ಎಲ್ಲ 70 ಕ್ಷೇತ್ರಗಳಿಗೆ ಒಂದೇ ಭಾರಿಯಲ್ಲಿ ಮತದಾನ ನಡೆಯಲಿದೆ. ಅಂದು ಬೆಳಗ್ಗೆಯಿಂದ ಸಂಜೆವರೆಗೆ ಮತದಾರರು ಮತದಾನ ಮಾಡಲಿದ್ದಾರೆ. ಅದಾಗಿ ಮೂರು ದಿನದ ಬಳಿಕ ಫೆಬ್ರವರಿ 8 ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರ ಬೀಳಲಿದೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಎಎಪಿ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಇದೇ ರೀತಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಸಹ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಇಂಡಿಯಾ ಮೈತ್ರಿಕೂಟದ ಪಕ್ಷಗಳು ಹೀಗೆ ಪ್ರತ್ಯೇಕವಾಗಿ ಕಣಕ್ಕಳಿದಿರುವುದಕ್ಕೆ ಅಮಿತ್ ಶಾ ಅವರು ವಾಗ್ದಾಳಿ ನಡೆಸಿದ್ದರು.












Click it and Unblock the Notifications