Delhi AIIMS server hack : ದೆಹಲಿ ಏಮ್ಸ್ ಸರ್ವರ್ ಹ್ಯಾಕ್ ಮಾಡಿ 200 ಕೋಟಿ ಕ್ರಿಪ್ಟೋಕರೆನ್ಸಿಗೆ ಬೇಡಿಕೆ
ನವದೆಹಲಿ, ನವೆಂಬರ್ 29: ದೇಶದ ಉನ್ನತ ವೈದ್ಯಕೀಯ ಕಾಲೇಜು ಎನಿಸಿರುವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ನ ಸರ್ವರ್‌ಗಳು ಸತತ ಆರನೇ ದಿನವೂ ಸ್ಥಗಿತಗೊಂಡಿದ್ದು, ಇದನ್ನು ಹ್ಯಾಕ್ ಮಾಡಿರುವ ಹ್ಯಾಕರ್‌ಗಳು 200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ 6 ದಿನಗಳಿಂದ ಪ್ರತಿಷ್ಠಿತ ದೆಹಲಿಯ ಏಮ್ಸ್ ಆಸ್ಪತ್ರೆಯ ಸರ್ವರ್ ಹ್ಯಾಕ್ ಆಗಿದೆ. ಇದಕ್ಕೆ ಹ್ಯಾಕ್ ಆಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಸರ್ವರ್ ಹ್ಯಾಕ್ ಮಾಡಿರುವವರು ಸುಮಾರು 3 ರಿಂದ 4 ಕೋಟಿ ರೋಗಿಗಳ ವೈದ್ಯಕೀಯ ಮತ್ತು ವೈಯಕ್ತಿಕ ಡೇಟಾವನ್ನು ಕದ್ದು ಮಾರಾಟ ಮಾಡಿಕೊಳ್ಳಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಬುಧವಾರ (ನವೆಂಬರ್ 23) ಬೆಳಗ್ಗೆ ಏಮ್ಸ್ ದೆಹಲಿಯ ಸೈಬರ್ ದಾಳಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಸುಮಾರು ಒಂದು ವಾರದಿಂದ ಸರ್ವರ್ ಡೌನ್ ಆಗಿರುವುದರಿಂದ ಏಮ್ಸ್ ವೈದ್ಯಕೀಯ ಸಂಸ್ಥೆಯಲ್ಲಿನ ಸಿಬ್ಬಂದಿಗೆ ತುರ್ತು, ಹೊರರೋಗಿ, ಒಳರೋಗಿ ಮತ್ತು ಪ್ರಯೋಗಾಲಯದಂತಹ ರೋಗಿಗಳ ಸೇವೆಗಳನ್ನು ಹಸ್ತಚಾಲಿತವಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
ದೆಹಲಿ ಪೊಲೀಸ್, ಗೃಹ ಸಚಿವಾಲಯ ಮತ್ತು ಭಾರತ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ ಸದಸ್ಯರನ್ನು ಒಳಗೊಂಡ ತಂಡದಿಂದ ಸೈಬರ್ ದಾಳಿಯ ಬಗ್ಗೆ ತನಿಖೆ ನಡೆಯುತ್ತಿದೆ. ದೆಹಲಿ ಪೊಲೀಸ್‌ನ ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ ಘಟಕವು ನವೆಂಬರ್ 25 ರಂದು ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆಯ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಹಲವಾರು ವಿಐಪಿಗಳ ವೈಯುಕ್ತಿ ಡೇಟಾ ಸಂಗ್ರಹ
ತನಿಖಾ ಸಂಸ್ಥೆಗಳ ಶಿಫಾರಸಿನ ಮೇರೆಗೆ ವೈದ್ಯಕೀಯ ಸಂಸ್ಥೆಯಲ್ಲಿನ ಕಂಪ್ಯೂಟರ್‌ಗಳಲ್ಲಿ ಇಂಟರ್‌ನೆಟ್ ಅನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿಗಳು, ಮಂತ್ರಿಗಳು, ನ್ಯಾಯಾಧೀಶರು ಮತ್ತು ಅಧಿಕಾರಿಗಳು ಸೇರಿದಂತೆ ಹಲವಾರು ವಿಐಪಿಗಳ ಡೇಟಾವನ್ನು ಸಹ ಏಮ್ಸ್‌ನ ಸರ್ವರ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಈಗ ಇದು ಹ್ಯಾಕ್ ಆಗಿದ್ದು, ಕಳುವಾದರೆ ಸಮಸ್ಯೆ ಬಿಗಡಾಯಿಸಲಿದೆ.

ಇನ್ನೂ ಐದು ದಿನಗಳವರೆಗೆ ಪರಿಶೀಲನೆ
ರಾಷ್ಟ್ರೀಯ ಮಾಹಿತಿ ಕೇಂದ್ರದ ತಂಡವು ವೈದ್ಯಕೀಯ ಸೇವೆಗಳ ವಿತರಣೆಗೆ ಅಗತ್ಯವಿರುವ ಏಮ್ಸ್‌ನಲ್ಲಿನ ಇ- ಹಾಸ್ಪಿಟಲ್ ಸರ್ವರ್‌ಗಳನ್ನು ಸ್ಕ್ಯಾನ್ ಮಾಡಿ ಪರಿಶೀಲಿಸುತ್ತಿದೆ. ನೆಟ್‌ವರ್ಕ್‌ನ ಸಂಪೂರ್ಣ ತನಿಖೆಯು ಇನ್ನೂ ಐದು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಅದರ ನಂತರ, ಇ ಆಸ್ಪತ್ರೆ ಸೇವೆಗಳನ್ನು ಹಂತ ಹಂತವಾಗಿ ಹೊರತರಬಹುದು. ಆದರೆ ಅದುವರೆಗೂ ತುರ್ತು, ಹೊರರೋಗಿ, ಒಳರೋಗಿ, ಪ್ರಯೋಗಾಲಯ ಇತ್ಯಾದಿ ಸೇವೆಗಳನ್ನು ಒಳಗೊಂಡಂತೆ ರೋಗಿಗಳ ಆರೈಕೆ ಸೇವೆಗಳನ್ನು ಹಸ್ತಚಾಲಿತ ಮಾದರಿಯಲ್ಲಿ ಮುಂದುವರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

23ನೇ ತಾರೀಖು ಬೆಳಗ್ಗೆ 7ರಿಂದಲೇ ಕೆಟ್ಟಿದ್ದ ಸರ್ವರ್
ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯ ಸರ್ವರ್ ರಾಮ್ಸ್‌ವೇರ್ (ಒಂದು ಬಗೆಯ ಸೈಬರ್ ಸಾಫ್ಟ್‌ವೇರ್ ವೈರಸ್) ದಾಳಿಗೆ ಒಳಗಾಗಿರಬಹುದು ಎಂದು 23ರಂದು ಆಸ್ಪತ್ರೆ ತಿಳಿಸಿತ್ತು. ಆಸ್ಪತ್ರೆಯ ಸರ್ವರ್‌ಗಳು 23ನೇ ತಾರೀಖು ಬೆಳಗ್ಗೆ 7ರಿಂದಲೇ ಕೆಟ್ಟು ನಿಂತಿದ್ದರಿಂದ ಆಸ್ಪತ್ರೆಯ ಎಲ್ಲ ವಿಭಾಗಗಳು ಕೈಯಿಂದಲೇ ಕಾರ್ಯನಿರ್ವಹಿಸುತ್ತಿವೆ. ಬುಧವಾರ ಸಂಜೆ ಆಸ್ಪತ್ರೆಯ ಸಿಸ್ಟಮ್ ಅನ್ನು ಮರುಚಾಲನೆಗೊಳಿಸಲು ಕೆಲಸ ಮಾಡುತ್ತಿರುವ ನ್ಯಾಷನಲ್ ಇನ್ಫೋಮ್ಯಾಟಿಕ್ಸ್ ಸೆಂಟರ್ ಇದು ಸೈಬರ್ ವೈರಸ್ ದಾಳಿಯಾಗಿರಬಹುದು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಸರ್ವರ್ ಹ್ಯಾಕ್ ಮಾಡಿ ಹಣ ಪೀಕುವ ಹ್ಯಾಕರ್‌ಗಳು
ಡಿಜಿಟಲ್ ಸೇವೆಗಳನ್ನು ಮರುಚಾಲನೆಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅಲ್ಲದೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್‌ಟಿ-ಇನ್) ಮತ್ತು ರಾಷ್ಟ್ರೀಯ ಮಾಹಿತಿ ಕೇಂದ್ರದಿಂದ ಬೆಂಬಲವನ್ನು ಪಡೆಯಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಮ್ಸ್‌ವೇರ್ ಎನ್ನುವುದು ದುರುದ್ದೇಶಪೂರಿತ ಸಾಫ್ಟ್‌ವೇರ್ ವೈರಸ್ ಆಗಿದ್ದು, ಬಳಕೆದಾರರು ಅಥವಾ ಸಂಸ್ಥೆಯು ಅವರ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳಿಗೆ ಪ್ರವೇಶವನ್ನು ನಿರಾಕರಿಸಲು ವಿನ್ಯಾಸಗೊಳಿಸಲಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಸೈಬರ್ ಹ್ಯಾಕರ್‌ಗಳು ಫೈಲ್‌ಗಳಿಗೆ ಪ್ರವೇಶವನ್ನು ಅನುಮತಿಸಲು ಹಣವನ್ನು ಕೋರುತ್ತಾರೆ.












Click it and Unblock the Notifications