ಕೇದಾರನಾಥ ಪುಣ್ಯಕ್ಷೇತ್ರದಲ್ಲಿ SBIಗೆ ಸಿಕ್ತು 1.9 ಕೋಟಿ ರೂ
ಡೆಹ್ರಾಡೂನ್, ಸೆ.16- ಕೇದಾರನಾಥ ಪುಣ್ಯಕ್ಷೇತ್ರದಲ್ಲಿ ಕೈಲಾಸನಾಥನಿಗೆ ಮತ್ತೆ ಪೂಜೋಪಚಾರಗಳು ಸಾಂಗೋಪಾಂಗವಾಗಿ ನೇರವೇರಲಾರಂಭಿಸುತ್ತಿದ್ದಂತೆ ಸಂತಸದ ಸುದ್ದಿಯೊಂದು ಬಂದಿದೆ. ಹೀಗೂ ಉಂಟೆ? ಎಂದು ಆಶ್ಚರ್ಯಗೊಳ್ಳುವಷ್ಟು ಕೇದಾರನಾಥ ಪುಣ್ಯಕ್ಷೇತ್ರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ ಕಳೆದುಕೊಂಡಿದ್ದ 1.9 ಕೋಟಿ ರೂ ಬೃಹತ್ ಮೊತ್ತ ಮತ್ತೆ ಪತ್ತೆಯಾಗಿದೆ.
ಪುರಾಣಪ್ರಸಿದ್ಧ ಕೇದಾರನಾಥ ಹಿಮಾಲಯ ಸುನಾಮಿಯಲ್ಲಿ ಜಲಪ್ರಳಯದಿಂದ ಅಕ್ಷರಶಃ ಕೊಚ್ಚಿಹೋಗಿತ್ತು. ಕಳೆದ ವಾರ ಕೇದಾರನಾಥ ಕ್ಷೇತ್ರವನ್ನು ಶುಚಿಗೊಳಿಸುವ ವೇಳೆ ಕಲ್ಲು-ಮಣ್ಣು ಹಾಗೂ ಅವಶೇಷಗಳ ನಡುವೆ ಹೂತುಹೋಗಿದ್ದ ಸ್ಥಳೀಯ SBI ಶಾಖೆಯ ಲಾಕರ್ ಪತ್ತೆಯಾಗಿದೆ. ಅದನ್ನು ತೆರೆದು ನೋಡಿದಾಗ ಬರೋಬ್ಬರಿ 1.90 ಕೋಟಿ ರೂ. ನಗದು ದೊರೆತಿದೆ.

ಕೇದಾರನಾಥ ದೇಗುಲದ ಕೆಳಪ್ರದೇಶದಲ್ಲಿ 60 ಮೀಟರ್ ದೂದರಲ್ಲಿ ಈ ಲಾಕರ್ ಬಿದ್ದಿತ್ತು. ಪ್ರವಾಹದ ವೇಳೆ ಯಾರೋ ಲಾಕರನ್ನು ದೋಚಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಘಟನೆ ನಡೆದ 3 ತಿಂಗಳ ನಂತರ ಹಣ ಸುರಕ್ಷಿತವಾಗಿದ್ದು ವಿಶೇಷವಾಗಿದೆ.
ಆದರೆ ಸೆ. 11ರಿಂದ ಕೇದಾರನಾಥ ದೇಗುಲದಲ್ಲಿ ಪೂಜೆ ಪುನಾರಂಭಿಸುವ ಸಲುವಾಗಿ ಶುಚಿಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸೆ. 8ರಂದು ಅವಶೇಷಗಳ ನಡುವೆ ಈ ಲಾಕರ್ ಪತ್ತೆಯಾಗಿದೆ. ಕೂಡಲೇ ಡೆಹ್ರಾಡೂನಿನಲ್ಲಿನ ಎಸ್ ಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಶನಿವಾರ ಪೊಲೀಸರು ಹಾಗೂ ಬ್ಯಾಂಕಿನ ಅಧಿಕಾರಿಗಳ ಸಮ್ಮುಖದಲ್ಲಿ ಲಾಕರ್ ತೆರೆದಾಗ 1.90 ಕೋಟಿ ರೂ. ನಗದು ಅದರಲ್ಲಿ ಇತ್ತು. ಅಷ್ಟೂ ಹಣವನ್ನು ಎಸ್ ಬಿಐ ಮುಖ್ಯ ವ್ಯವಸ್ಥಾಪಕ ಅನೂಪ್ ಲಾಂಬಾ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ರುದ್ರಪ್ರಯಾಗ ಪೊಲೀಸ್ ವರಿಷ್ಠಾಧಿಕಾರಿ ವರೀಂದರ್ ಜೀತ್ ಸಿಂಗ್ ತಿಳಿಸಿದ್ದಾರೆ.












Click it and Unblock the Notifications