Deepavali 2023: ಅಗ್ನಿ ದುರಂತ, ಮುಂಜಾಗೃತ ಕ್ರಮ ಕೈಗೊಂಡ ತಮಿಳುನಾಡು, 750 ಹಾಸಿಗೆ ಮೀಸಲು, ಮೆಚ್ಚುಗೆ
ಬೆಂಗಳೂರು, ನವೆಂಬರ್ 08: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದು, ದೇಶದ ಜನರು ಆಚರಣೆಗೆ ಕಾತರರಾಗಿದ್ದಾರೆ. ತಮಿಳುನಾಡಿನಲ್ಲೂ ವಿಜೃಂಭಣೆಯ ಆಚರಣೆಗಳು ನಡೆಯಲಿವೆ. ಆದರೆ ಆಚರಣೆಗಳ ಸಂದರ್ಭದಲ್ಲಿ ಯಾವದೇ ಅವಘಡ ಜರುಗಿದರೂ ಅವರ ರಕ್ಷಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರದ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಸುಪ್ರೀಂ ಕೋರ್ಟ್ ಸೇರಿದಂತೆ ರಾಜ್ಯ ಸರ್ಕಾರಗಳು ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಹೊಡೆಯುವುದನ್ನು ನಿಷೇಧಿಸಿದೆ. ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ. ಆಚರಣೆ ಸಂದರ್ಭಗಳಲ್ಲಿ ಪಟಾಕಿ ಹೊಡೆಯುವಾಗ, ಇಲ್ಲವೇ ಇನ್ನಿತರ ಕಾರಣಗಳಿಂದ ಬೆಂಕಿ ಅವಘಡ ಸಂಭವಿಸಿದರೆ ಜನರ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಬುಧವಾರ ಮಾಹಿತಿ ನೀಡಿದ್ದಾರೆ.

ಚೆನ್ನೈನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಮಾ.ಸುಬ್ರಮಣಿಯನ್ ಅವರು, ದೀಪಾವಳಿಗೆ ಮುನ್ನ ಅಗ್ನಿ ಅವಘಡಗಳನ್ನು ಕಡಿಮೆ ಮಾಡಲು ರಾಜ್ಯ ಆರೋಗ್ಯ ಇಲಾಖೆಯು ಹಲವಾರು ಕ್ರಮ ಜಾರಿಗೆ ತಂದಿದೆ. ತಮಿಳುನಾಡಿನಾದ್ಯಂತ 95 ಆಸ್ಪತ್ರೆಗಳಲ್ಲಿ ವಿಶೇಷವಾಗಿ 750 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವರು ಹೇಳಿದರು.
ಹಬ್ಬ ಹತ್ತಿರವಾಗುತ್ತಿದ್ದು, ತಮಿಳುನಾಡಿನಲ್ಲಿ ಅಗ್ನಿ ಅವಘಡಗಳನ್ನು ಕಡಿಮೆ ಮಾಡಲು ಆರೋಗ್ಯ ಇಲಾಖೆ ಸಿದ್ಧವಾಗಿದೆ. ಒಂದು ವೇಳೆ ಅಗ್ನಿ ಅವಘಡ ಸಂಭವಿಸಿದರೂ, ಜನರನ್ನು ಉಳಿಸಲು ರಕ್ಷಣಾ ಸೇವೆಗಳು ಸಿದ್ಧವಾಗಿವೆ.
ಆರೋಗ್ಯ ಸೌಲಭ್ಯ ಹೆಚ್ಚಿಸಿದ ರಾಜ್ಯ ಸರ್ಕಾರ
ತಮಿಳುನಾಡಿನಾದ್ಯಂತ 95 ಆಸ್ಪತ್ರೆಗಳಲ್ಲಿ ಇದಕ್ಕಾಗಿ ವಿಶೇಷವಾಗಿ 750 ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ, ಕಳೆದ ಎರಡು ವರ್ಷಗಳಿಂದ ದೀಪಾವಳಿ ಆಚರಣೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಈ ದೀಪಾವಳಿಯಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಬಾರದು ಎಂಬ ಆಶಯದಿಂದ ಅಧಿಕಾರಿಗಳಿಗೆ ರಕ್ಷಣಾ ಕ್ರಮವಹಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಬೆಂಗಳೂರು ಹೊರವಲಯ, ತಮಿಳುನಾಡು ಗಡಿಭಾಗ ಹೊಸೂರು ವ್ಯಾಪ್ತಿಯಲ್ಲಿ ಪಟಾಕಿ ದುರಂತಗಳು ನಡೆದಿವೆ. ವಿವಿಧ ಜಿಲ್ಲೆ ರಾಜ್ಯಗಳಲ್ಲಿ ಪಟಾಕಿ ದುರಂತ ನಡೆದ ಬೆನ್ನಲ್ಲೆ ಸುಪ್ರಿಂ ಕೋರ್ಟ್ ಪಟಾಕಿ ಹೊಡೆಯುವುದನ್ನು ನಿಷೇಧಿಸಿದೆ. ಈ ಆದೇಶ ಪಾಲನೆ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಪಟಾಕಿ ನಿಷೇಧಿಸಿವೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ತಮಿಳುನಾಡು ಸರ್ಕಾರ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಆರೋಗ್ಯ ಸೌಲಭ್ಯಗಳನ್ನು ರಾಜ್ಯಾದ್ಯಂತ ಏರಿಕೆ ಮಾಡಿದೆ.












Click it and Unblock the Notifications