ಡಿ. 11ಕ್ಕೆ ಮತ್ತೆ ಚಂಡಮಾರುತ ಅಬ್ಬರ! ತಮಿಳುನಾಡು, ಶ್ರೀಲಂಕಾಗೆ ವರುಣಾಘಾತ: ರಾಜ್ಯದ ಮುನ್ಸೂಚನೆ ವರದಿ
ಬೆಂಗಳೂರು, ಡಿಸೆಂಬರ್ 08: ಕರ್ನಾಟಕ ರಾಜ್ಯ ಹಾಗೂ ಶ್ರೀಲಂಕಾ ದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ಭಾರೀ ಸುರಿಯಲು ಹಾಗೂ ಸಂಚಾರ, ಜನಜೀವನ ಅಸ್ತವ್ಯಸ್ತಕ್ಕೆ ಕಾರಣವಾಗಿದ್ದ ಫೆಂಗಲ್ ಚಂಡಮಾರುತ ಅಬ್ಬರ ತಗ್ಗಿದೆ. ಇದರ ಬೆನ್ನಲ್ಲೆ ವಿವಿಧ ರಾಜ್ಯಗಳಿಗೆ ಮುಂದಿನ ಮೂರು ದಿನಗಳಲ್ಲಿ ಮತ್ತೆ ವರುಣಾಘಾತ ಎದುರಾಗಿದೆ. ಕಾರಣ ಡಿಸೆಂಬರ್ 11ರಂದು ಮತ್ತೊಂದು ಚಂಡಮಾರುತ ಅಪ್ಪಳಿಸುವ, ತೀವ್ರಗೊಳ್ಳುವ ಎಲ್ಲ ಮುನ್ಸೂಚನೆ ಲಭ್ಯವಾಗಿವೆ.
ಹೌದು, ಭಾರತೀಯ ಹವಾಮಾನ ಇಲಾಖೆ ಕರ್ನಾಟಕ ಕೇಂದ್ರದ ತಜ್ಞರು ನೀಡಿರುವ ಮಾಹಿತಿ ಪ್ರಕಾರ, ಈಗಾಗಲೇ ಸಮುದ್ರದ ಮಟ್ಟದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದ್ದು, ಅದು ವಾಯುಭಾರ ಕುಸಿತವಾಗಿ ಬದಲಾಗುವ ಹಂತದಲ್ಲಿದೆ. ಅದು ಹೀಗೆ ತೀವ್ರಗೊಳ್ಳುತ್ತಾ ಹೋದರೆ, ಡಿಸೆಂಬರ್ 11ರ ಹೊತ್ತಿಗೆ ಸ್ಪಷ್ಟ ಚಂಡಮಾರುತ ಪರಿಚಲನೆಯಾಗಿ ಪರಿವರ್ತನೆಗೊಳ್ಳುವುಚು ಬಹುತೇಕ ಖಚಿತವಾಗಿದೆ.

ಆಗ್ನೇಯ ಬಂಗಾಳಕೊಲ್ಲಿ ಮತ್ತು ಪಕ್ಕದ ಪೂರ್ವ ಸಮಭಾಜಕ ಹಿಂದೂ ಮಹಾಸಾಗರದ ಮೇಲಿನ ಕಡಿಮೆ ಒತ್ತಡದ ಪ್ರದೇಶ ನಿರ್ಮಾನವಾಗಿದೆ. ಇದು ಮಧ್ಯಮ ವಾಯುಮಂಡಲದ ಮಟ್ಟಗಳವರೆಗೆ ವಿಸ್ತರಿಸುವುದರ ಜೊತೆ ಜೊತೆಗೆ ಚಂಡಮಾರುತದ ಪರಿಚಲನೆಯಾಗಿ ಮುಂದುವರಿಯುತ್ತದೆ. ಮುಂದಿನ 24 ಗಂಟೆಗಳಲ್ಲಿ ಇದು ಪಶ್ಚಿಮ-ವಾಯುವ್ಯ ದಿಕ್ಕಿನ ಕಡೆಗೆ ಚಲಿಸಲಿದೆ ಎಂದು ಭಾನುವಾರ ನೀಡಿರುವ ಹವಾಮಾನ ಮುನ್ಸೂಚನೆಯಲ್ಲಿ IMD ಬೆಂಗಳೂರು ಹವಾಮಾನ ಕೇಂದ್ರದ ಮುಖ್ಯಸ್ಥರು ಹಾಗೂ ವಿಜ್ಞಾನಿ ಡಾ.ಎನ್.ಪುವಿಯರಸನ್ ಅವರು ತಿಳಿಸಿದ್ದಾರೆ.
ವಾಯುವ್ಯ ದಿಕ್ಕಿನತ್ತ ಸಾಗಿ ತದನಂತರ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆ ಇದೆ. ಈ ವೇಳೆ ಚಂಡಮಾರುತದ ಗಾಳಿಯ ವೇಗದಲ್ಲಿ ಬದಲಾವಣೆ ಆಗಬಹುದು. ಡಿಸೆಂಬರ್ 11 ರ ಸುಮಾರಿಗೆ ಶ್ರೀಲಂಕಾ - ತಮಿಳುನಾಡು ಕರಾವಳಿಯಿಂದ ನೈಋತ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆ ಇದೆ.
ನೈಋತ್ಯ ಮತ್ತು ಪಕ್ಕದ ಆಗ್ನೇಯ ಅರೇಬಿಯನ್ ಸಮುದ್ರದ ಮೇಲಿನ ಗಾಳಿಯ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 1.5 ಕಿ.ಮೀ ವರೆಗೆ ವಿಸ್ತರಿಸಲ್ಪಟ್ಟಿದೆ ಎಂದು ಅವರು ಸದ್ಯದ ಚಂಡಮಾರುತದ ಸ್ಥಿತಿ ಗತಿ, ಅದರ ಚಲನೆ ಹಾಗೂ ಮುಂದಿನ ಮುನ್ಸೂಚನೆ ಕುರಿತು ವಿವರಿಸಿದ್ದಾರೆ.
ಡಿಸೆಂಬರ್ 11ರಂದು ಶ್ರೀಲಂಕ ಹಾಗೂ ತಮಿಳುನಾಡು ಕರಾವಳಿಗೆ ಈ ಸೈಕ್ಲೋನ್ ಸಮೀಪಿಸುತ್ತಿದ್ದಂತೆ ಇನಿಲ್ಲದಂತೆ ಭಾರೀ ಮಳೆ ಸುರಿಯುವ ನಿರೀಕ್ಷೆ ಇದೆ. ಸದ್ಯ ಈ ಚಂಡಮಾರತದ ಹೆಸರು ಬಹಿರಂಗವಾಗಬೇಕಿದೆ. ಈ ಹಿಂದಿನ ಫೆಂಗಲ್ ಚಂಡಮಾರುತದಿಂದ ಚೆನ್ನೈ, ತಮಿಳುನಾಡು ಭಾಗದಲ್ಲಿ ವಿಪರೀತ ಮಳೆ ಅಬ್ಬರಿಸಿತ್ತು. ಒಂದು ವಾರಗಳ ಕಾಲ ಜನರು ಪರದಾಡಿದ್ದರು. ಇದರಿಂದ ಬೆಂಗಳೂರು, ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಸಹ ವ್ಯಾಪಕ ಮಳೆ ಆಗಿತ್ತು. ಮುಂದಿನ ಒಂದು ವಾರವು ಇದೇ ರೀತಿಯ ವಾತಾವರಣ ಪುನಃ ನಿರ್ಮಾಣವಾಗುವ ನಿರೀಕ್ಷೆಗಳು ಇವೆ.
ಕರ್ನಾಟಕಕ್ಕೆ ಏನಿದೆ ಮುನ್ಸೂಚನೆ?
ಸದರಿ ಚಂಡಮಾರುತವು ಭೂಮಿಗೆ ಸಮೀಪಿಸಿದರೂ ನೆರೆ ರಾಜ್ಯಗಳ ಮೇಲೆ ಆದಷ್ಟು ಪ್ರಭಾವ ಕರ್ನಾಟಕದ ಮೇಲೆ ಆಗುವುದು ಅನುಮಾನ ಎನ್ನಲಾಗಿದೆ. ಆದರೆ, ಪ್ರತಿ ಬಂಗಾಳಕೊಲ್ಲಿಯಲ್ಲಿ ವೈಪರಿತ್ಯಗಳು ಸೃಷ್ಟಿಯಾದಾಗ ಉಂಟಾಗುವಂತೆ ಈ ಭಾರಿಯು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ರಾಮನಗರ, ಮೈಸೂರು, ಮಂಡ್ಯ, ತುಮಕೂರು, ಹಾಸನ ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮಬ್ಬು ವಾತಾವರಣ ಕಂಡು ಬರಲಿದೆ. ಆಗಾಗ ಸಾಧಾರಣದಿಂದ ಭಾರೀ ಮಳೆಯ ಸಂಭವವು ಇದ್ದು, ತಾಪಮಾನದಲ್ಲಿ ಇಳಿಕೆ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications