Cyclone Michaung: ಮಿಚುವಾಂಗ್ ಚಂಡಮಾರುತ- ಮಳೆಯ ನಡುವೆ ತಿರುಮಲ ಬೆಟ್ಟದಲ್ಲಿ ಆವರಿಸಿದ ಕತ್ತಲು
ಮಿಚುವಾಂಗ್ ಚಂಡಮಾರುತದಿಂದಾಗಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು ತಿರುಪತಿಯಲ್ಲೂ ಇದರ ಎಫೆಕ್ಟ್ ಕಾಣಿಸಿಕೊಂಡಿದೆ. ಕಳೆದ ಕೆಲ ದಿನಗಳಿಂದ ಚೆನ್ನೈ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದ್ದು ತಿರುಪತಿಯಲ್ಲೂ ವರುಣ ಅರ್ಭಟಿಸುತ್ತಿದ್ದಾನೆ. ಇಂದು ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು ಅಧಿಕ ಚಳಿ ಆವರಿಸಿದೆ. ತಿರುಪತಿಯಲ್ಲಿ ಕತ್ತಲಾದಂತೆ ಮೋಡ ಕವಿದಿದ್ದು ಮಳೆಯಾಗು ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಮಿಚುವಾಂಗ್ ಚಂಡಮಾರುತ ಕರಾವಳಿ ಸಮೀಪಿಸುತ್ತಿದ್ದಂತೆ ಚಂಡಮಾರುತದ ಪ್ರಭಾವದಿಂದ ತಮಿಳುನಾಡಿನ ದಕ್ಷಿಣ ಕರಾವಳಿ ಮತ್ತು ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಈ ವೇಳೆ ಬಲವಾದ ಗಾಳಿ ಬೀಸಲಿದೆ. ಜೊತೆಗೆ ರಾಯಲಸೀಮಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಮಾತ್ರವಲ್ಲದೆ ತೆಲಂಗಾಣದಲ್ಲೂ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ನಿರಂತರ ಮಳೆಯಾಗಲಿದ್ದು, ಈಗಾಗಲೇ 204.4 ಮಿ.ಮೀ ಮಳೆಯಾಗಿದೆ. ಹೀಗಾಗಿ ಎಪಿ ಮತ್ತು ತಮಿಳುನಾಡಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಪ್ರದೇಶಗಳು ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಎಪಿಯಲ್ಲಿ ಭಾರೀ ಮಳೆ ದಾಖಲಾಗಿದೆ. ಮಿಚುವಾಂಗ್ ಚಂಡಮಾರುತವು ಕರಾವಳಿಯನ್ನು ಸಮೀಪಿಸುವ ಮೊದಲು ಮಳೆ ಅರ್ಭಟ ಹೆಚ್ಚಾಗಲಿದೆ. ಇದರಿಂದಾಗಿ ತಿರುಪತಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಈಗಾಗಲೇ ತಿರುಮಲದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಭಕ್ತರಿಗೆ ಈ ಬಗ್ಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.
ತಿರುಪತಿಯಲ್ಲಿ ನಾಲ್ಕು ವರ್ಷದ ಮಗು ಸಾವು
ಭಾರೀ ಮಳೆಗೆ ತಿರುಪತಿ ಜಿಲ್ಲೆಯ ಎರ್ಪಾಡು ಮಂಡಲದ ಚಿಂದೇಪಲ್ಲಿ ಎಸ್‌ಟಿ ಕಾಲೋನಿಯಲ್ಲಿ ನಾಲ್ಕು ವರ್ಷದ ಬಾಲಕ ಯಶವಂತ್ ಮೃತಪಟ್ಟಿದ್ದಾನೆ. ನೆಲ್ಲೂರು, ಅನ್ನಮಯ್ಯ ರಾಯಚೋಟಿ, ಚಿತ್ತೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರದಿಂದಲೂ ಈ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಚಂಡಮಾರುತ ಕರಾವಳಿಯನ್ನು ಸಮೀಪಿಸಿದ ನಂತರ ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಿರುಪತಿಯಲ್ಲಿ ಮಳೆಯಿಂದಾಗಿ ಆಹ್ಲಾದಕರ ವಾತಾವರಣವಿದೆ. ಈ ಹೊಸ ಅನುಭವದಿಂದ ಭಕ್ತರು ಸಂತಸಗೊಂಡಿದ್ದಾರೆ. ಬೆಳಗಿನ ಸುಪ್ರಭಾತ ಸೇವೆಯ ಸಮಯದಲ್ಲಿ ಬೆಟ್ಟದ ಮೇಲೆ ಮತ್ತು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ವಿಶೇಷ ಅನುಭವವನ್ನು ನೀಡುತ್ತಿವೆ. ತಿರುಪತಿಯಲ್ಲಿ ಇತ್ತೀಚಿಗೆ ಸುರಿದ ಧಾರಾಕಾರ ಮಳೆಯಿಂದಾಗಿ ಮೋಡ ಕವಿದ ವಾತಾವರಣ ಹಾಗೂ ಮಂಜಿನಿಂದಾಗಿ ಹಿಮದ ಹೊದಿಕೆಯಂತೆ ಕಣಿವೆಗಳು ಗೋಚರಿಸುತ್ತಿದೆ. ಇಂತಹ ಅದ್ಬುತ ನೋಟವನ್ನು ಕಣ್ತುಂಬಿಕೊಳ್ಳುತ್ತಾ ಭಕ್ತರು ಮಳೆ ನೀರಿನಲ್ಲಿಯೇ ಸ್ವಾಮಿಯ ದರ್ಶನ ಮುಗಿಸಿ ಸಂತಸದಿಂದ ಹೊರ ಬರುತ್ತಿದ್ದಾರೆ. ಜೊತೆಗೆ ಹಿಂದೆಂದೂ ಕಾಣದ ಇಂತಹ ಆಹ್ಲಾದಕರ ವಾತಾವರಣವನ್ನು ನೋಡಿ ಸಂತೋಷಗೊಂಡಿದ್ದಾರೆ. ಹೀಗಾಗಿ ಭಕ್ತರು ತಿರುಪತಿಗೆ ತೆರಳಲು ಇದು ಸೂಕ್ತ ಸಮಯವಾಗಿದೆ.












Click it and Unblock the Notifications