ದೇಶದಲ್ಲಿ ಫೆಬ್ರವರಿ ವೇಳೆ ಹೆಚ್ಚಲಿದೆ ಓಮಿಕ್ರಾನ್ ಪ್ರಕರಣಗಳು
ನವದೆಹಲಿ, ಡಿಸೆಂಬರ್ 18: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, ಭಾರತದಲ್ಲೂ ಫೆಬ್ರವರಿ ವೇಳೆಗೆ ಓಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗಲಿವೆ ಎಂದು ನ್ಯಾಷನಲ್ ಕೋವಿಡ್ 19 ಸೂಪರ್‌ಮಾಡೆಲ್ ಕಮಿಟಿ ತಿಳಿಸಿದೆ.
ಐಐಟಿ ಹೈದರಾಬಾದ್‌ನ ಪ್ರೊ.ವಿದ್ಯಾಸಾಗರ್ ಮಾತನಾಡಿ, ಯುಕೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದಂತೆ ಭಾರತದಲ್ಲೂ ಹೆಚ್ಚಾಗಲಿದೆ ಎನ್ನುವ ವಾದ ಸುಳ್ಳು ಅದು ಪ್ರಸ್ತುತ ಅಲ್ಲ ಎಂದಿದ್ದಾರೆ.
ಕೊರೊನಾದ ಹೊಸ ರೂಪಾಂತರಿ ವೈರಾಣು 'ಓಮಿಕ್ರಾನ್' ಸೋಂಕಿನ ಪ್ರಕರಣಗಳು ಜನವರಿ, ಫೆಬ್ರವರಿ ತಿಂಗಳಿನಲ್ಲಿ ದೇಶಾದ್ಯಂತ ತೀವ್ರವಾಗಿ ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ಹೇಳಿರುವ ಕೇಂದ್ರ ಸರಕಾರವು, ಹೊಸ ರೂಪಾಂತರಿಯು ಡೆಲ್ಟಾದಷ್ಟು ತೀವ್ರವಾಗಿರುವುದಿಲ್ಲ ಎಂದು ತಿಳಿಸಿದೆ.

''ಓಮಿಕ್ರಾನ್ ತೀವ್ರವಾಗಿ ಪ್ರಸರಣ ಹೊಂದಿದರೂ ತೀರಾ ಅಪಾಯಕಾರಿಯಲ್ಲ. ಡೆಲ್ಟಾಗಿಂತಲೂ ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಈ ಸೋಂಕು ಉಂಟುಮಾಡಲಿದೆ.
ಏಕೆಂದರೆ ಸಾಂಕ್ರಾಮಿಕ ಪ್ರಸರಣದ ಅಂತ್ಯ ಭಾಗದಲ್ಲಿನಾವಿದ್ದೇವೆ,'' ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ಸಾಂಕ್ರಾಮಿಕದ ಅಂತ್ಯಭಾಗದಲ್ಲಿ ಪ್ರಸರಣದ ವೇಗ ವಿಪರೀತ ಇರುತ್ತದೆ. ಆದರೆ ಸಾವಿನ ಸಂಖ್ಯೆ ಇಳಿಮುಖವಾಗುತ್ತದೆ. ಅಂಥ ಸಂದರ್ಭವನ್ನು ನಾವಿದ್ದೇವೆ.
ವಿಶ್ವಾದ್ಯಂತ ಸದ್ಯಕ್ಕೆ 100 ಮಂದಿಯಲ್ಲಿ ಮಾತ್ರ ಓಮಿಕ್ರಾನ್ ಸೋಂಕು ದೃಢವಾಗಿರಬಹುದು. ಅವರೆಲ್ಲರೂ ಸೌಮ್ಯ ಸ್ವಭಾವದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಮತ್ತು ಲಸಿಕೆಯ ಎರಡೂ ಡೋಸ್ ಪಡೆಯುವ ಮುನ್ನೆಚ್ಚರಿಕೆಯನ್ನು ಜನರು ತಪ್ಪದೇ ಪಾಲಿಸಿದರೆ ಸಾಕು,'' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಮೊದಲ ಪ್ರಕರಣ ದಾಖಲಾದ ಬಳಿಕ ಸದ್ಯ 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಓಮಿಕ್ರಾನ್ ವ್ಯಾಪಿಸಿದೆ. ಇಂಥ ವೇಗದ ಪ್ರಸರಣವನ್ನು ಹಿಂದೆಂದೂ ಕಂಡಿಲ್ಲ.
ಸದ್ಯ ಡೆಲ್ಟಾ ಸೋಂಕಿತರೇ ವಿಶ್ವಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಎರಡು ತಿಂಗಳಲ್ಲಿ ಓಮಿಕ್ರಾನ್ ಸೋಂಕಿತರು ಗರಿಷ್ಠ ಸಂಖ್ಯೆ ಮುಟ್ಟುತ್ತಾರೆ.
ಹೆಚ್ಚೆಚ್ಚು ಜನರು ಕೊರೊನಾ ನಿರೋಧಕ ಲಸಿಕೆ ಪಡೆದಿರುವ ಕಾರಣ ಓಮಿಕ್ರಾನ್ ಸೋಂಕಿನಿಂದಾಗುವ ಅನಾರೋಗ್ಯದ ಗಂಭೀರತೆ ಕಡಿಮೆಯಿದೆ. ಎರಡೂ ಡೋಸ್ ಲಸಿಕೆಯನ್ನು ಪ್ರತಿ ಪ್ರಜೆಗೆ ನೀಡುವತ್ತ ಎಲ್ಲ ರಾಷ್ಟ್ರಗಳು ಗಮನಹರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.
ದೇಶದಲ್ಲಿ ಕೊರೊನಾ ರೂಪಾಂತರಿ ವೈರಾಣು ಓಮಿಕ್ರಾನ್ ವೇಗವಾಗಿ ಪ್ರಸರಣ ಹೊಂದುತ್ತಿದ್ದು, ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 10, ಮಹಾರಾಷ್ಟ್ರದಲ್ಲಿ 8, ಕೇರಳದಲ್ಲಿಇಬ್ಬರಿಗೆ ರೂಪಾಂತರಿ ವೈರಾಣು ಸೋಂಕು ತಗುಲಿರುವುದು ದೃಢಪಟ್ಟಿದೆ.
ಮುಖ್ಯವಾಗಿ ಮಹಾರಾಷ್ಟ್ರದಲ್ಲಿ 3 ವರ್ಷದ ಬಾಲಕ ಮತ್ತು 18 ತಿಂಗಳ ಹೆಣ್ಣು ಮಗುವಿಗೆ ಓಮಿಕ್ರಾನ್ ಸೋಂಕು ತಗುಲಿರುವುದು ತಜ್ಞ ವೈದ್ಯರನ್ನು ಚಿಂತೆಗೆ ದೂಡಿದೆ. ದೇಶದಲ್ಲಿ 11 ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.
ಅತ್ಯಧಿಕ ಬಾರಿ ತನ್ನ ರಚನೆಯನ್ನು ಮಾರ್ಪಡಿಸಿಕೊಂಡು, ಪ್ರಸರಣ ವೇಗ ಹೆಚ್ಚಿಸಿಕೊಂಡಿರುವ ಓಮಿಕ್ರಾನ್ ಕೊರೊನಾ ರೂಪಾಂತರಿಯು, ಡೆಲ್ಟಾಗಿಂತಲೂ ವೇಗವಾಗಿ ದೇಶಾದ್ಯಂತ ಹರಡುವ ಮೂಲಕ ಮೂರನೇ ಅಲೆ ಎಬ್ಬಿಸುವ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
ಓಮಿಕ್ರಾನ್ ಆತಂಕ ಹೆಚ್ಚಳದ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್, 'ಸಾಮುದಾಯಿಕ ಪ್ರಸರಣ ವೇಗದಲ್ಲಿ 2ನೇ ಅಲೆಯನ್ನು ಸೃಷ್ಟಿಸಿದ್ದ ಡೆಲ್ಟಾ ರೂಪಾಂತರಿಯನ್ನು ಓಮಿಕ್ರಾನ್ ಹಿಂದಿಕ್ಕಲಿದೆ. ಬಹಳ ಬೇಗನೇ ದೇಶದಲ್ಲಿ ಮೂರನೇ ಕೊರೊನಾ ಅಲೆ ಏಳುವ ಸಾಧ್ಯತೆಯಿದೆ' ಎಂದು ಹೇಳಿದ್ದಾರೆ.












Click it and Unblock the Notifications