ಜ.3ರಿಂದ 15 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ ಅಭಿಯಾನ
ನವದೆಹಲಿ, ಜನವರಿ 03: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ದೇಶದ ಹಲವು ರಾಜ್ಯಗಳಿಗೆ ಹೊಸ ರೂಪಾಂತರಿ ಭೀತಿ ಆವರಿಸಿದೆ. ಈ ನಡುವೆ 15-18 ವರ್ಷ ವಯಸ್ಸಿನ ಯುವ ಪೀಳಿಗೆಗೆ ಇಂದಿನಿಂದ(ಜ3) ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆ ನಡೆಯಲಿದೆ. ಈ ವಯೋಮಿತಿಯವತಿಗೆ ಪ್ರತ್ಯೇಕ ಮೀಸಲಾದ ಕೋವಿಡ್-19 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರವು ರಾಜ್ಯಗಳಿಗೆ ಸಲಹೆ ನೀಡಿದೆ, ಆದರೆ ಪ್ರತ್ಯೇಕ ಲಸಿಕೆ ತಂಡ ಮತ್ತು ಎಲ್ಲಾ ಇತರ ಸಿವಿಸಿಗಳಲ್ಲಿ ಪ್ರತ್ಯೇಕ ಸರತಿ ಸಾಲುಗಳನ್ನು ನಿರ್ವಹಿಸಬೇಕಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25, 2021 ರಂದು ತಮ್ಮ ಭಾಷಣದಲ್ಲಿ 15-18 ವರ್ಷ ವಯಸ್ಸಿನ ಮಕ್ಕಳು ಜನವರಿ 3, 2022ರಿಂದ ಕೋವಿಡ್-19 ವಿರುದ್ಧ ಲಸಿಕೆಯನ್ನು ಪಡೆಯಲು ಪ್ರಾರಂಭಿಸುತ್ತಾರೆ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಜನವರಿ 10ರಿಂದ ಮುನ್ನೆಚ್ಚರಿಕೆಯ ಪ್ರಮಾಣವನ್ನು (ಬೂಸ್ಟರ್ ಡೋಸ್) ಸ್ವೀಕರಿಸಲು ಪ್ರಾರಂಭಿಸುತ್ತಾರೆ ಎಂದು ಘೋಷಿಸಿದರು.
ಭಾರತ್ ಬಯೋಟೆಕ್‌ನ ಕೋವಾಕ್ಸಿನ್, 12ರಿಂದ 18 ವರ್ಷದೊಳಗಿನ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ ಅನುಮೋದನೆಯನ್ನು ನೀಡಲಾಗಿದೆ, ಇದು ಮಕ್ಕಳಿಗೆ ಲಭ್ಯವಿರುವ ಏಕೈಕ ಲಸಿಕೆಯಾಗಿದೆ.

ಭಾನುವಾರ ದೇಶದಲ್ಲಿ 27,553 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1,525 ಆಗಿದೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಕೇರಳದಲ್ಲಿ ಹೆಚ್ಚು ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ.
ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೂಸ್ಟರ್ ಡೋಸ್ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಸಹ ಘೋಷಣೆ ಮಾಡಿದ್ದಾರೆ. ಕೊರೊನಾ ವಾರಿಯರ್‌ಗಳು, ಆರೋಗ್ಯರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಈಗಲೂ ತಮ್ಮ ಬಹು ಸಮಯವನ್ನು ಕೊರೊನಾ ರೋಗಿಗಳಿಗೆ ಸೇವೆ ಮಾಡುವುದರಲ್ಲಿ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಲಸಿಕೆ ಅಭಿಯಾನ ಪ್ರಮುಖ ಅಂಶಗಳು:
* ಆಸ್ಪತ್ರೆ ಹಾಗೂ ಪ್ರತ್ಯೇಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಈ ಪ್ರಕ್ರಿಯೆ ಶಾಲೆಗಳ ಸಹಯೋಗ ಇರಲಿದೆ.
* ಹಲವೆಡೆ ನೋಂದಾಯಿತ ಯುವಕ, ಯುವತಿಯರಿಗೆ ಶಾಲೆಗಳಲ್ಲೇ ಲಸಿಕೆ ನೀಡುವ ಪ್ರಕ್ರಿಯೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
* 2007ರಲ್ಲಿ ಜನಿಸಿದವರು ಅಥವಾ ಇದಕ್ಕೂ ಮುಂಚಿತವಾಗಿ ಜನಸಿದವರು 15 ರಿಂದ 18 ವರ್ಷ ವಯಸ್ಸಿನ ದೃಢೀಕರಣ ಪತ್ರ ಹೊಂದಿರುವವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.
* ಆಧಾರ್ ಮತ್ತು ಇತರ ರಾಷ್ಟ್ರೀಯ ಗುರುತಿನ ಚೀಟಿಗಳಲ್ಲದೆ, ಮಕ್ಕಳು ತಮ್ಮ 10ನೇ ತರಗತಿಯ ಗುರುತಿನ ಚೀಟಿಯನ್ನು ನೋಂದಣಿಗಾಗಿ ಬಳಸಬಹುದು.
* ಜನವರಿ 3ರಂದು ಕೋವಿಡ್ -19 ವಿರುದ್ಧ ಡೋಸ್ ಪಡೆಯಲು ಪ್ರಾರಂಭಿಸುವ ಮಕ್ಕಳಿಗೆ ಲಸಿಕೆ ಹಾಕಲು ವಾಕ್-ಇನ್ ಮತ್ತು ಆನ್‌ಲೈನ್ ನೋಂದಣಿ ಎರಡೂ ಲಭ್ಯವಿರುತ್ತವೆ.
* 15-18 ವಯೋಮಾನದವರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದ್ದು, ಇದಕ್ಕಾಗಿ ಹೆಚ್ಚುವರಿ ಡೋಸ್ ರಾಜ್ಯಗಳಿಗೆ ರವಾನೆ ಮಾಡಲಾಗಿದೆ.
* ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು, ಕೋಮಾರ್ಬಿಡ್ ಹಿರಿಯ ನಾಗರಿಕರು ಜನವರಿ 10ರಿಂದ ಮುನ್ನೆಚ್ಚರಿಕೆಯ ಲಸಿಕೆ ಸ್ವೀಕರಿಸಲು ಅನುಮತಿ ನೀಡಲಾಗಿದೆ.
* ಎಲ್ಲಾ ವಯೋಮಿತಿಯವರಿಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ.
* ಕೋರ್ಬೆವಾಕ್ಸ್, ಕೋವೋವಾಕ್ಸ್ ಎಂಬ ಎರಡು ಹೊಸ ಲಸಿಕೆಗಳಿಗೆ ಅನುಮತಿ ಸಿಕ್ಕಿದ್ದು, ಇವೆರಡನ್ನು ಬೂಸ್ಟರ್ ಲಸಿಕೆ ಮಾದರಿಯಲ್ಲೂ ಬಳಸಬಹುದಾಗಿದೆ. ಅಲ್ಲದೆ, ಮಕ್ಕಳು ಸೇರಿದಂತೆ ಎಲ್ಲಾ ವಯೋಮಿತಿಯವರಿಗೂ ಇದು ಸೂಕ್ತವಾಗಿದೆ ಎಂಬ ವರದಿ ಬಂದಿದೆ.
ಕೋವಿಡ್-19 ಲಸಿಕೀಕರಣದ ಮೊದಲ ಹಂತ
2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.












Click it and Unblock the Notifications