ಗಿಫ್ಟ್ ಬಾಕ್ಸ್ ನಲ್ಲಿ "ಗರ್ಭನಿರೋಧಕ ಮಾತ್ರೆ.. " ಬೆಚ್ಚಿಬಿದ್ದ ಮದುಮಗಳು! ಮುಖ್ಯಮಂತ್ರಿ ಭಾಗವಹಿಸಿದ್ದ ಮದುವೆ ಸಮಾರಂಭದಲ್ಲಿ ಶಾಕ್
ಭೋಪಾಲ್ ಮೇ 31: ಮದುವೆ ಸಮಾರಂಭದಲ್ಲಿ ವಧುವಿಗೆ ನೀಡಲಾದ ಮೇಕಪ್ ಕಿಟ್‌ನಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳು ಕಂಡು ಬಂದಿದ್ದು ಮದುಮಗಳು ಶಾಕ್ ಆಗಿದ್ದಾಳೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದ ಸಾಮೂಹಿಕ ಮದುವೆ ಸಮಾರಂಭದಲ್ಲಿ ನಡೆದಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಈ ಸಾಮೂಹಿಕ ಮದುವೆಯಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳು ಇರುವ ಮೇಕಪ್ ಕಿಟ್ ಅನ್ನು ಎಲ್ಲಾ ನವ ದಂಪತಿಗಳಿಗೆ ನೀಡಲಾಗಿದೆ.
ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಸಮಸ್ಯೆಯಾಗಿಯೇ ಮುಂದುವರಿದಿದೆ. ಇತ್ತೀಚೆಗಷ್ಟೇ ನಾವು ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಿಂದ ಮೊದಲನೆಯದಕ್ಕೆ ಸ್ಥಳಾಂತರಗೊಂಡಿದ್ದೇವೆ. ಜನಸಂಖ್ಯೆ ಹೆಚ್ಚಳವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಮದುವೆ ಸಮಾರಂಭದಲ್ಲಿ ನಡೆದ ಘಟನೆ ನೋಡುಗರನ್ನ ಬೆಚ್ಚಿ ಬೀಳಿಸಿದೆ.

ಆಘಾತಕಾರಿ ಘಟನೆ:
ಮಧ್ಯಪ್ರದೇಶದಲ್ಲಿ ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ನೀಡಲಾಗಿದ್ದ ಮೇಕಪ್ ಕಿಟ್‌ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳಿದ್ದ ಘಟನೆ ಸಂಚಲನ ಮೂಡಿಸಿದೆ. ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಆಗಮಿಸಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಸುಮಾರು 300 ಜೋಡಿಗಳ ವಿವಾಹ ಸಮಾರಂಭದ ನೇತೃತ್ವ ವಹಿಸಿದ್ದರು. ಅಲ್ಲಿಯೇ ಮಹಿಳೆಯರಿಗೆ ನೀಡಿದ್ದ ಮೇಕಪ್ ಬಾಕ್ಸ್ ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿವೆ.
ಕಾಂಡೋಮ್, ಗರ್ಭನಿರೋಧಕ ಮಾತ್ರೆ:
ಮುಖ್ಯಮಂತ್ರಿ ಚೌಹಾಣ್ ಅಧ್ಯಕ್ಷತೆಯಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಆರ್ಥಿಕವಾಗಿ ಹಿಂದುಳಿದ 300 ಮಹಿಳೆಯರು ವಿವಾಹವಾದರು. ಮದುವೆಯಾದ ಎಲ್ಲಾ ನವದಂಪತಿಗಳಿಗೆ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ವಿತರಿಸಲಾಗಿದೆ. ದಂಪತಿಗಳಿಗೆ ನೀಡಿದ ಮೇಕಪ್ ಬಾಕ್ಸ್ ಗಳಲ್ಲಿ ಇವು ಪತ್ತೆಯಾಗಿವೆ.
ಜಿಲ್ಲೆಯ ಹಿರಿಯ ಅಧಿಕಾರಿಗಳ ಪ್ರಕಾರ, ಮಧ್ಯಪ್ರದೇಶದ ಆರೋಗ್ಯ ಇಲಾಖೆ ಇದನ್ನು ಮಾಡಿದೆ. ಕುಟುಂಬ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮದ ಅಂಗವಾಗಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ವಿತರಿಸಿರಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇವುಗಳನ್ನು ಜಿಲ್ಲಾಡಳಿತ ನೀಡುತ್ತಿಲ್ಲ.. ಹಾಗಾಗಿ ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳಿಗೆ ನಾವು ಜವಾಬ್ದಾರರಲ್ಲ, ಕುಟುಂಬ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯ ಆರೋಗ್ಯ ಇಲಾಖೆ ಈ ರೀತಿ ಮಾಡಿರಬಹುದು ಎನ್ನಲಾಗಿದೆ.
ಗರ್ಭಧಾರಣೆ ಪರೀಕ್ಷೆ:
ಮಧ್ಯಪ್ರದೇಶದಲ್ಲಿ 2006ರಿಂದ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ವಿವಾಹಕ್ಕೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆ ಕಳೆದ ತಿಂಗಳು ವಿವಾದಕ್ಕೆ ಕಾರಣವಾಗಿತ್ತು. ಏಕೆಂದರೆ ತಿಂದೋರಿಯ ಕಚ್ಚಾರೈ ಪ್ರದೇಶದಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ಕೆಲವು ವಧುಗಳನ್ನು ಗರ್ಭಧಾರಣೆಯ ಪರೀಕ್ಷೆಗೆ ಒಳಪಡಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಮದುವೆಗಳಲ್ಲಿ ಗರ್ಭಧಾರಣೆಯ ಪರೀಕ್ಷೆಗಳು ವಿವಾದಾತ್ಮಕವಾಗಿವೆ. ಆದರೆ, ಇದು ಮಾಮೂಲಿ ಪರೀಕ್ಷೆಯಾಗಿದ್ದು, ವಯಸ್ಸನ್ನು ದೃಢೀಕರಿಸಲು ಹಾಗೂ ಮದುವೆಗೆ ದೈಹಿಕವಾಗಿ ಸದೃಢರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎಂದು ಸರ್ಕಾರ ಹೇಳಿತ್ತು.












Click it and Unblock the Notifications