ಮೇಘಾಲಯ ಮುಖ್ಯಮಂತ್ರಿಯಾಗಿ ಕೊನ್ರಾಡ್ ಪ್ರಮಾಣವಚನ ಸ್ವೀಕಾರ
ಶಿಲ್ಲಾಂಗ್, ಮಾರ್ಚ್ 6: ಹತ್ತು ವರ್ಷಗಳ ಕಾಂಗ್ರೆಸ್ ಆಧಿಪತ್ಯಕ್ಕೆ ಮಂಗಳ ಹಾಡಿ ಕೊನೆಗೂ ಮೇಘಾಲಯದಲ್ಲಿ ಎನ್ ಪಿಪಿ ಮೈತ್ರಿಕೂಟ ಸರಕಾರ ರಚಿಸಿದೆ.
ನ್ಯಾಶ್ನಲ್ ಪೀಪಲ್ಸ್ ಪಾರ್ಟಿ(ಎನ್ ಪಿಪಿ) ಅಧ್ಯಕ್ಷ ಕೊನ್ರಾಡ್ ಸಂಗ್ಮಾ ಅವರು ಮೇಘಾಲಯದ 12 ನೇ ಮುಖ್ಯಮಂತ್ರಿಯಾಗಿ ಇಂದು(ಮಾ.06) ಪ್ರಮಾಣವಚನ ಸ್ವೀಕರಿಸುವ ಮೂಲಕ ಹೊಸ ಸರ್ಕಾರಕ್ಕೆ ನಾಂದಿಹಾಡಿದರು.
ಮಾರ್ಚ್ 03 , ಶನಿವಾರದಂದು ಹೊರಬಿದ್ದ ಫಲಿತಾಂಶದ ನಂತರ ಮೇಘಾಲಯ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಸಂಗ್ಮಾ ಅವರನ್ನು ಸರ್ಕಾರ ರಚನೆಗೆ ಆಮಂತ್ರಿಸಿದ್ದರು.

ಒಟ್ಟು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎನ್ ಪಿಪಿ, ಬಿಜೆಪಿಯ 2 ಮತ್ತು ಇತರ ಪ್ರಾದೇಶಿಕ ಪಕ್ಷಗಳ 13 ಶಾಸಕರ ಬಲ ಪಡೆದಿದೆ. ಸದ್ಯಕ್ಕೆ ಒಟ್ಟು 34 ಶಾಸಕ ಬಲದೊಂದಿಗೆ ಬಹುಮತ ಪಡೆದು ಸರ್ಕಾರ ರಚಿಸಿದೆ.
ಎನ್ ಪಿಪಿ ಗೆ ಬಿಜೆಪಿಯೂ ಬೆಂಬಲ ನೀಡುತ್ತಿರುವುದರಿಂದ ರಾಜಭವನದಲ್ಲಿ ನಡೆಯುತ್ತಿರುವ ಪ್ರಮಾಣವಚನ ಗೃಹಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದಾರೆ.
ಫೆ.27 ರಂದು ನಡೆದಿದ್ದ ವಿಧಾನಸಭೆ ಚುನಾವಣೆಯ ಫಲಿತಾಂಶ ಮಾ.3 ರಂದು ಹೊರಬಿದ್ದಿತ್ತು. ಮೇಘಾಲಯ ಚುನಾವಣಾ ಫಲಿತಾಂಶ: ಬಿಜೆಪಿ-2, ಕಾಂಗ್ರೆಸ್-21, ಯುಡಿಪಿ-6, ಎನ್ ಪಿಪಿ-19, ಇತರರು-11












Click it and Unblock the Notifications