Breaking: ಭಾರತ್ ಜೋಡೊ ಯಾತ್ರೆ ಸ್ಥಗಿತಗೊಳಿಸಿದ ಕಾಂಗ್ರೆಸ್
ನವದೆಹಲಿ, ಜನವರಿ 14: ಭಾರತ್ ಜೋಡೊ ಯಾತ್ರೆ ಮೆರವಣಿಗೆಯ ವೇಳೆ ಹೃದಯಾಘಾತದಿಂದ ನಿಧನರಾದ ಪಕ್ಷದ ಸಂಸದ ಸಂತೋಖ್ ಸಿಂಗ್ ಚೌಧರಿ ಅವರಿಗೆ ಗೌರವ ಸೂಚಕವಾಗಿ ಪಂಜಾಬ್‌ನಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಶನಿವಾರ ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿದೆ.
ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಜನವರಿ 15 ರಂದು ಜಲಂಧರ್‌ನಲ್ಲಿ ತಮ್ಮ ನಿಗದಿತ ಪತ್ರಿಕಾಗೋಷ್ಠಿಯನ್ನು ಮುಂದೂಡಿದರು. ಈಗ ಅದು ಜನವರಿ 17 ರಂದು ಹೋಶಿಯಾರ್‌ಪುರದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಇಂದು ಬೆಳಗ್ಗೆ ನಿಧನರಾದ ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರಿಗೆ ಗೌರವ ಸೂಚಕವಾಗಿ ಭಾರತ್ ಜೋಡೋ ಯಾತ್ರೆಯನ್ನು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುವುದು. ನಾಳೆ ಮಧ್ಯಾಹ್ನ ಜಲಂಧರ್‌ನ ಖಾಲ್ಸಾ ಕಾಲೇಜು ಮೈದಾನದಿಂದ ಯಾತ್ರೆ ಪುನರಾರಂಭವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

"ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರ ಅನಿರೀಕ್ಷಿತ ಮತ್ತು ಆಘಾತಕಾರಿ ನಿಧನದಿಂದಾಗಿ ನಾಳೆ ಜಲಂಧರ್‌ನಲ್ಲಿ ನಿಗದಿಯಾಗಿದ್ದ ರಾಹುಲ್ ಗಾಂಧಿಯವರ ಪತ್ರಿಕಾಗೋಷ್ಠಿಯನ್ನು ಈಗ ಜನವರಿ 17 ರಂದು ಹೋಶಿಯಾರ್‌ಪುರದಲ್ಲಿ ನಡೆಸಲಾಗುವುದು ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ ವೇಳೆ ಹೃದಯಾಘಾತದಿಂದ ಚೌಧರಿ ಶನಿವಾರ ಬೆಳಿಗ್ಗೆ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಎರಡು ಬಾರಿ ಸಂಸದರಾಗಿರುವ ಅವರು ಜಲಂಧರ್‌ನ ಫಿಲ್ಲೌರ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು, ಅವರು ಯಾತ್ರೆ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಮೂರ್ಛೆ ಹೋದರು ಎಂದು ಪಕ್ಷದ ಹಿರಿಯ ನಾಯಕ ಪರತಾಪ್ ಸಿಂಗ್ ಬಾಜ್ವಾ ಹೇಳಿದರು.

ಚೌಧರಿ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಫಗ್ವಾರಾದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಬಳಿಕ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಲೋಹ್ರಿಗೆ ಒಂದು ದಿನದ ವಿರಾಮದ ನಂತರ ಶನಿವಾರ ಪಂಜಾಬ್‌ನಲ್ಲಿ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಿತ್ತು.












Click it and Unblock the Notifications