ಮೋದಿ ಭಾಷಣಕ್ಕೆ ಸಂಸತ್ತಿನಲ್ಲಿ ಅಡ್ಡಿ: ಇದರ ಹಿಂದಿದೆ ರಾಹುಲ್ 'ಕೈ'ವಾಡ
Recommended Video

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಪ್ರಧಾನಿ ಮೋದಿ ಬುಧವಾರ (ಫೆ 7) ಮಾಡಿದ ಸುಮಾರು 90 ನಿಮಿಷದ ಭಾಷಣದುದ್ದಕ್ಕೂ, ಕಾಂಗ್ರೆಸ್ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಲೇ ಇದ್ದರು. ಆದರೆ, ಬಿಟ್ಟಾರಾ ಮೋದಿ? ಕಾಂಗ್ರೆಸ್ಸಿಗರ ಕೂಗಾಟದಿಂದ ಪ್ರಧಾನಿ ಭಾಷಣ ಇನ್ನಷ್ಟು ತೀಕ್ಷ್ನತೆ ಪಡೆಯಿತೇ ಹೊರತು, ಮೋದಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲೇ ಇಲ್ಲ..
ಈ ಮಧ್ಯೆ, ಪ್ರಧಾನಿ ಮೋದಿ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷದ ಅಡ್ಡಿಯ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ತಂತ್ರಗಾರಿಕೆ ಇದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಗೆರಿಲ್ಲಾ ಸ್ಟೈಲ್ ತಂತ್ರಗಾರಿಕೆ ಇದು ಎಂದು ಪತ್ರಿಕೆ ಹೇಳಿದೆ.
ಮೋದಿ ತಮ್ಮ ಭಾಷಣದಲ್ಲಿ ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್, ಎನ್ ಟಿ ರಾಮರಾವ್, ರಾಹುಲ್ ಗಾಂಧಿಯಿಂದ ಹಿಡಿದು, ಕಾಂಗ್ರೆಸ್ ಕುಟುಂಬ ರಾಜಕಾರಣವನ್ನು ಎಳೆ ಎಳೆಯಾಗಿ ಬಿಡಿಸಿ, ಕಾಂಗ್ರೆಸ್ ಪಕ್ಷವನ್ನು ಅಕ್ಷರಸ: ಜಾಲಾಡಿಸಿದ್ದರು.
ಜೊತೆಗೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನೂ ಮೋದಿ ಬಿಡಲಿಲ್ಲ. ಖರ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದ್ದ ಬಶೀರ್ ಬದ್ರ್ ಅವರ ಕವನದ ಸಾಲನ್ನು ಮುಂದುವರಿಸುತ್ತಾ ಮಾತನಾಡಿದ ಮೋದಿ, ನಿಮ್ಮ ಆ ಕವನದ ಸಾಲನ್ನು ಕರ್ನಾಟಕದ ಮುಖ್ಯಮಂತ್ರಿಗಳು ಕೇಳಿಸಿಕೊಂಡಿರಬಹುದು, ಕೇಳಿಲ್ಲಾಂದ್ರೆ ಒಮ್ಮೆ ಅವರಿಗೆ ಕೇಳಿಸಿಬಿಡಿ ಎಂದರು.
ಭಾರತದ ಸಂಸತ್ತಿನ ಇತಿಹಾಸದಲ್ಲೇ ಅತ್ಯಂತ ಆಕ್ರಮಣಕಾರಿ ಭಾಷಣಗಳಲ್ಲೊಂದು ಎಂದೇ ದಾಖಲಾದ ಈ ಭಾಷಣದಲ್ಲಿ " ಜೀ ಕರ್ತಾ ಹೇ ಸಚ್ ಬೋಲೆ, ಕ್ಯಾ ಕರೇ ಹೌಸ್ಲಾ ನಹೀ ಹೋತಾ" (ನಿಜ ಹೇಳಬೇಕೆಂದು ಮನಸ್ಸು ಬಯಸುತ್ತೆ, ಆದರೆ ನಿಮಗೆ ಧೈರ್ಯವಿಲ್ಲ) ಇದನ್ನೂ ನೀವು ಹೇಳಬೇಕಾಗಿತ್ತು ಎಂದು ಖರ್ಗೆಯವರನ್ನು ಮೋದಿ ಚೇಡಿಸಿದರು. ಮುಂದೆ ಓದಿ..

ಅಡ್ಡಿಪಡಿಸಲು ಪ್ರಯತ್ನಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ
ಲೋಕಸಭೆಯಲ್ಲಿ ಪ್ರಧಾನಿ ಭಾಷಣ ಮಾಡುತ್ತಿದ್ದ ವೇಳೆ, ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಾ ಅಡ್ಡಿಪಡಿಸಲು ಪ್ರಯತ್ನಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಂಗ್ರೆಸ್ಸಿನ ಈ ನಡೆ ಹಲವರಿಗೆ ಅಚ್ಚರಿಯನ್ನು ತಂದಿತ್ತು. ಮೂಲಗಳ ಪ್ರಕಾರ, ಇದೊಂದು ವ್ಯವಸ್ಥಿತ ತಂತ್ರಗಾರಿಕೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಸಂಸದರ ಈ ನಡೆಗೆ ವ್ಯಾಪಕ ಟೀಕೆ
ಸಂಸತ್ತಿನ ಘನತೆಗೆ ಕುಂದು ತರುವಂತಹ ಕಾಂಗ್ರೆಸ್ ಸಂಸದರ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹನ್ನೆರಡು ಗಂಟೆಗೆ ಕಾಂಗ್ರೆಸ್ ಸಂಸದರು ಲೋಕಸಭೆಯಲ್ಲಿ ಹಾಜರಿರಬೇಕೆಂದು ರಾಹುಲ್ ಸೂಚನೆ ನೀಡಿದ್ದರು. ರಾಹುಲ್ ಈ ಹೊಸ ತಂತ್ರಗಾರಿಕೆಗೆ ಸೋನಿಯಾ ಗಾಂಧಿ ಕೂಡಾ ಮೊದಲು ಕೊಂಚ ವಿಚಲಿತರಾಗಿದ್ದರು ಎಂದು ವರದಿಯಾಗಿದೆ.

ರಾಹುಲ್ ಗಾಂಧಿ ತಮ್ಮ ಸಂಸದರಿಗೆ ಸೂಚನೆ ನೀಡಿದ್ದರು
ವಿಷಯಾಧಾರಿತವಾಗಿ ಪ್ರಧಾನಿ ಭಾಷಣದ ವೇಳೆ ಘೋಷಣೆಯನ್ನು ಕೂಗಿ ಎಂದು ರಾಹುಲ್ ಗಾಂಧಿ ತಮ್ಮ ಸಂಸದರಿಗೆ ಸೂಚನೆ ನೀಡಿದ್ದರು. ಇವೆಲ್ಲಾ ತಂತ್ರಗಾರಿಕೆಯನ್ನು ಕಾರ್ಯರೂಪಕ್ಕೆ ತಂದಿದ್ದು ರಾಜಸ್ಥಾನದ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಎಂದು ತಿಳಿದು ಬಂದಿದೆ.

ಸೂಚನೆ ನೀಡುತ್ತಿದ್ದ ಸೋನಿಯಾ ಗಾಂಧಿ
ಕಾಂಗ್ರೆಸ್ ಸಂಸದರು ಪ್ಲೇಕಾರ್ಡ್ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದಾಗ, ಇತರ ವಿರೋಧ ಪಕ್ಷಗಳ ಮುಖಂಡರೂ ಸ್ವಲ್ಪಹೊತ್ತು ಅವರ ಜೊತೆ ಸೇರಿದರು. ಪ್ರಧಾನಿ ಭಾಷಣ ಮುಗಿಯುವವರೆಗೂ ಘೋಷಣೆ ಕೂಗುತ್ತಿದ್ದ ತಮ್ಮ ಸಂಸದರ ಗಂಟಲು ನೋವಾಗದಂತೆ ನೋಡಿಕೊಳ್ಳಿ ಎಂದು ಸೋನಿಯಾ ಸೂಚಿಸುತ್ತಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.

ಬಿಹಾರ ಸೌಪಾಲ್ ಕ್ಷೇತ್ರದ ಸಂಸದ ರಂಜೀತ್ ರಂಜನ್
ವಿಷಯಾಧಾರಿತವಾಗಿ ಮಾತ್ರ ಘೋಷಣೆಯನ್ನು ಕೂಗಬೇಕೇ ಹೊರತು ವೈಯಕ್ತಿಕ ನಿಂದನೆ ಮಾಡಬಾರದೆಂದು ರಾಹುಲ್ ನಮಗೆ ಸೂಚಿಸಿದ್ದರು ಎಂದು ಅತಿಹೆಚ್ಚು ಘೋಷಣೆಯನ್ನು ಕೂಗಿದ ಬಿಹಾರ ಸೌಪಾಲ್ ಕ್ಷೇತ್ರದ ಸಂಸದ ರಂಜೀತ್ ರಂಜನ್ ಹೇಳಿದ್ದಾರೆ.












Click it and Unblock the Notifications