'ಮಾಜಿ ಸಂಸದರಿಗೆ ವಿಧಾನಸಭೆ ಟಿಕೆಟ್ ಬೇಡವೇ ಬೇಡ! ಯಾಕಂದ್ರೆ...'
ನವದೆಹಲಿ, ಅಕ್ಟೋಬರ್ 29: ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಈಗಾಗಲೇ ತೆರೆಮರೆಯ ಕಸರತ್ತು ಆರಂಭವಾಗಿದೆ.
ಈ ಮಧ್ಯೆ ಮಾಜಿ ಸಂಸದರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಕುರಿತಂತೆ ಎದ್ದಿದ್ದ ಕೂಗಿಗೆ ಬ್ರೇಕ್ ನೀಡುವಂತ ವರದಿಯನ್ನು ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ನೀಡಿದೆ.
ಮಾಜಿ ಸಂಸದರು ಅಥವಾ ಹಾಲಿ ಸಂಸದರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವುದು ಒಲಳ್ಳೆಯ ಬೆಳವಣಿಗೆಯಲ್ಲ, ಇದರಿಂದ ಪಕ್ಷಕ್ಕೆ ಒಳಿತಾಗುವುದಿಲ್ಲ ಎಂದು ಈ ವರದಿ ಹೇಳಿದ್ದು, ಹೈಕಮಾಂಡಿಗೆ ಹೊಸ ತಲೆನೋವಾಗಿದೆ. ಆದರೆ ವರದಿ ಏನೇ ಹೇಳಿದರೂ ಅಂತಿಮ ನಿರ್ಧಾರ ಮಾತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೇ ಬಿಟ್ಟಿರುವುದರಿಂದ ಅವರು ಟಿಕೆತ್ ನೀಡಲು ಬಯಸಿದರೆ ಅದಕ್ಕೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಕೊರತೆಯಾಗಬಹುದು!
ಹಾಲಿ ಸಂಸದರನ್ನು ಅಥವಾ ಮುಂದೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವವರನ್ನು ಇದೀಗ ವಿಧಾನಸಭೆ ಚುನಾವಣೆಗೆ ನಿಲ್ಲಿಸಿಬಿಟ್ಟರೆ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಅಭ್ಯರ್ಥಿಗಳ ಕೊರತೆಯಾಗಬಹುದು.

ಜನರಲ್ಲಿ ಉತ್ತಮ ಅಭಿಪ್ರಾಯ ಮೂಡೋಲ್ಲ!
ಅದೂ ಅಲ್ಲದೆ, ಈಗ ಹಾಲಿ ಸಂಸದರನ್ನು ವಿಧಾನಸಭೆಗೆ ಕರೆಸಿ, ನಂತರ ಮತ್ತೆ ಅವರು ರಾಜೀನಾಮೆ ನೀಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದರಿಂದ ಸಮಯ, ಶಕ್ತಿ, ಹಣ ಎಲ್ಲವೂ ವ್ಯರ್ಥವಾಗುತ್ತದೆ. ಇದು ಮತದಾರರಲ್ಲೂ ಪಕ್ಷದ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡುವುದಿಲ್ಲ ಎಂಬುದು ಸ್ಕ್ರೀನಿಂಗ್ ಕಮಿಟಿಯ ಅಂಬೋಣ.

ಬಿಜೆಪಿಗೂ ಇದೇ ತಲೆನೋವು?
ಬಿಜೆಪಿಯೂ ತನ್ನ ಹಾಲಿ ಸಂಸದರನ್ನು ಐದು ರಾಜ್ಯಗಳ ವಿಧಾನಸಭೆ ಚುಣಾವಣೆಗಳಲ್ಲಿ ಕಣಕ್ಕಿಳಿಸಲು ನಿರ್ಧರಿಸಿದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದರಿಂದ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಬೇಕಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿಗೆ ಆಶಾಕಿರಣವಾಗಿ ಕಂಡಿದ್ದು ಹಾಲಿ ಸಚಿವರು. ಆದರೆ ಅವರನ್ನು ಇಲ್ಲಿ ಚುನಾವಣೆಗೆ ನಿಲ್ಲಿಸಿದರೆ ಮತ್ತೆ ಮೇ-ಜೂನ್ ನಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದು ದೊಡ್ಡ ತಲೆನೋವಾಗಿದೆ!

ಚುನಾವಣೆ ಯಾವಾಗ? ಫಲಿತಾಂಶ ಯಾವತ್ತು?
ಛತ್ತೀಸ್ ಗಢ- ನವೆಂಬರ್ 12 ಮತ್ತು 20 (ಎರಡು ಹಂತ) ಮಧ್ಯಪ್ರದೇಶ- ನವೆಂಬರ್ 28 (ಒಂದು ಹಂತ) ಮಿಜೋರಾಂ- ನವೆಂಬರ್ 28 (ಒಂದು ಹಂತ) ರಾಜಸ್ಥಾನ - ಡಿಸೆಂಬರ್ 07 (ಒಂದು ಹಂತ) ತೆಲಂಗಾಣ - ಡಿಸೆಂಬರ್ 07 (ಒಂದು ಹಂತ) ಫಲಿತಾಂಶ: ಡಿಸೆಂಬರ್ 11, ಮಂಗಳವಾರ











Click it and Unblock the Notifications