Mallikarjun Kharge: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ: ಕಾಂಗ್ರೆಸ್ ಹೇಳಿದ್ದೇನು?
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಪೂರೈಸಿದ್ದು, ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು 'ಮಹತ್ವದ ಪ್ರಗತಿ' ಸಾಧಿಸಿದೆ ಮತ್ತು ಸಂಘಟನಾ ರಚನೆಯನ್ನು ಪುನಶ್ಚೇತನಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪಕ್ಷವು ಸಂತಸ ವ್ಯಕ್ತಪಡಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಪಕ್ಷದ ಆಂತರಿಕ ಚುನಾವಣೆಯಲ್ಲಿ ಶಶಿ ತರೂರ್ ಅವರನ್ನು ಸೋಲಿಸಿ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದರು. ಅಕ್ಟೋಬರ್ 26ರಂದು ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

'ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷರು ಜನರ ಒಳಿತಿಗೆ ಬದ್ಧರಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಅಂತರ್ಗತ ಬೆಳವಣಿಗೆ ಮತ್ತು ದೇಶಭಕ್ತಿಯ ಸದ್ಗುಣಗಳನ್ನು ಸಾಕಾರಗೊಳಿಸಿದ್ದಾರೆ' ಎಂದು ಕಾಂಗ್ರೆಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ಹಂತ ಹಂತವಾಗಿ ಉನ್ನತ ಹುದ್ದೆಗೆ ಏರಿದ ಅವರು, ಉತ್ಸಾಹ ಮತ್ತು ಪರಿಶ್ರಮದಿಂದ ಏನನ್ನು ಸಾಧಿಸಬಹುದು ಎಂಬುದಕ್ಕೆ ಆದರ್ಶ ಉದಾಹರಣೆಯಾಗಿದ್ದಾರೆ' ಎಂದು ಪಕ್ಷ ಹೇಳಿದೆ.
ಬ್ಲಾಕ್ ಮಟ್ಟದಿಂದ ರಾಷ್ಟ್ರ ನಾಯಕನವರೆಗೆ
ಬ್ಲಾಕ್ ಮಟ್ಟದ ನಾಯಕನ ಸ್ಥಾನದಿಂದ ಪಕ್ಷದ ರಾಷ್ಟ್ರ ಮಟ್ಟದ ಚುನಾಯಿತ ಅಧ್ಯಕ್ಷರಾಗುವವರೆಗೆ, 55 ವರ್ಷಗಳ ಯಶಸ್ಸಿನೊಂದಿಗೆ ಅವರ ಪ್ರಯಾಣವು ಅವರ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಪ್ರಜಾಪ್ರಭುತ್ವದ ಕಾರಣಕ್ಕಾಗಿ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ನಂಬಿದ ಆದರ್ಶಗಳಿಗಾಗಿ ಹೋರಾಡುವ ಮತ್ತು ರಕ್ಷಿಸುವ ನಿರ್ಭೀತ ನಾಯಕರಾಗಿದ್ದಾರೆ. ಅವರು ಬಡವರು ಮತ್ತು ಹಿಂದುಳಿದ ವರ್ಗಗಳ ಜನರ ಹಕ್ಕುಗಳ ರಕ್ಷಣೆಗೆ ಬದ್ದರಾಗಿದ್ದಾರೆ ಎಂದು ಪಕ್ಷ ಹೇಳಿದೆ.
'ಅವರ ನೇತೃತ್ವದಲ್ಲಿ ಪಕ್ಷ ಗಮನಾರ್ಹ ಪ್ರಗತಿ ಸಾಧಿಸಿದೆ. ಪಕ್ಷದ ಸಾಂಸ್ಥಿಕ ರಚನೆ ಮತ್ತು ಜನರನ್ನು ತಲುಪುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ,' ಎಂದು ಕಾಂಗ್ರೆಸ್ ಹೇಳಿದೆ.
ಖರ್ಗೆಯವರು ದೂರದೃಷ್ಟಿಯ ನಾಯಕರಾಗಿದ್ದು, ಅವರು ಭಾರತಕ್ಕೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಬದ್ಧರಾಗಿದ್ದಾರೆ, ಒಮ್ಮತ ಮೂಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದು, ನ್ಯಾಯಕ್ಕಾಗಿ ದೃಢವಾಗಿ ನಿಲ್ಲುತ್ತಾರೆ,' ಎಂದು ಪಕ್ಷವು ಮಲ್ಲಿಕಾರ್ಜುನ ಖರ್ಗೆಯನ್ನು ಹೊಗಳಿದೆ.
'ನಮ್ಮ ಅಧ್ಯಕ್ಷರು ಅಧಿಕಾರದಲ್ಲಿ ಒಂದು ವರ್ಷವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ, ನಾವು ಅವರಿಗೆ ಶುಭ ಹಾರೈಸುತ್ತೇವೆ ಮತ್ತು ಬದಲಾವಣೆಯನ್ನು ಮಾಡಲು ಶ್ರಮಿಸುವ ಎಲ್ಲರಿಗೂ ಅವರ ಪ್ರಯತ್ನಗಳು ಮತ್ತು ಸ್ಪೂರ್ತಿಯಾಗುತ್ತವೆ' ಎಂದು ಪಕ್ಷ ಹೇಳಿದೆ.
ಮಲ್ಲಿಕಾರ್ಜುನ್ ಖರ್ಗೆ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಲವಾರು ಕಾಂಗ್ರೆಸ್ ನಾಯಕರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಸುಪ್ರಿಯಾ ಶ್ರಿನಾಟೆ, ಅಭಿಷೇಕ್ ಸಿಂಘ್ವಿ ಮತ್ತು ಮನೀಶ್ ತಿವಾರಿ ಮುಂತಾದವರು ಖರ್ಗೆ ಅವರನ್ನು ಶ್ಲಾಘಿಸಿದರು ಮತ್ತು ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದಕ್ಕೆ ಶುಭ ಹಾರೈಸಿದರು.












Click it and Unblock the Notifications