ರಾಜ್ಯಸಭೆ ಉಪ ಸಭಾಪತಿ ಚುನಾವಣೆ: ಕಾಂಗ್ರೆಸ್ಸಿನಿಂದ ಹರಿಪ್ರಸಾದ್ ಸ್ಪರ್ಧಿ
ನವದೆಹಲಿ, ಆಗಸ್ಟ್ 08: ರಾಜ್ಯಸಭೆ ಉಪಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಅಧಿಕೃತ ಅಭ್ಯರ್ಥಿಯಾಗಿ ಸಂಸದ ಬಿ.ಕೆ ಹರಿಪ್ರಸಾದ್ ಅವರು ಕಣಕ್ಕಿಳಿಯುತ್ತಿದ್ದಾರೆ. ಎನ್ಡಿಎ ಅಭ್ಯರ್ಥಿ ಹರಿವಂಶ ನಾರಾಯಣ ಸಿಂಗ್ ಅವರ ವಿರುದ್ಧ ಯುಪಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಎನ್ಡಿಎ ಅಭ್ಯರ್ಥಿಯಾಗಿ ಜೆಡಿಯು ಸಂಸದ ಹರಿವಂಶ್ ನಾರಾಯಣ ಸಿಂಗ್ ಅವರನ್ನು ಘೋಷಿಸಿದ ಬೆನ್ನಲ್ಲೇ ವಿಪಕ್ಷದಿಂದ ಎನ್ಸಿಪಿ ಸಂಸದೆ, ಪುಣೆ ಮಾಜಿ ಮೇಯರ್ ವಂದನಾ ಚವಾನ್ ಸ್ಪರ್ಧಿಸಲಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ, ವಂದನಾ ಅವರ ಆಯ್ಕೆಯ ಬಗ್ಗೆ ಒಮ್ಮತ ಮೂಡಿರಲಿಲ್ಲ.
ಎನ್ಡಿಎ ಘೋಷಿಸಿರುವ ಅಭ್ಯರ್ಥಿಯ ವಿಷಯದಲ್ಲಿ ಮಿತ್ರ ಪಕ್ಷಗಳು ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ಪುಣೆ ಮೂಲದ ವಂದನಾ ಅವರಿಗೆ ಶಿವಸೇನಾ ಬೆಂಬಲ ಸಿಗುವ ಸಾಧ್ಯತೆಯಿದೆ ಎಂಬ ವಾದ ಬಂದಿತ್ತು.

ವಂದನಾ ಅವರನ್ನು ಈ ನಿರ್ಣಯದ ಬಗ್ಗೆ ಪ್ರಾದೇಶಿಕ ಪಕ್ಷಗಳಾದ ಟಿಆರ್ಎಸ್, ಬಿಜೆಡಿ ಒಪ್ಪಿಗೆ ಸೂಚಿಸಿರಲಿಲ್ಲ.
ಗೆಲ್ಲಲು ಎಷ್ಟು ಮತ ಬೇಕು?: 245 ಸಂಖ್ಯಾಬಲದ ಸದನದಲ್ಲಿ ಅಭ್ಯರ್ಥಿಯು ಗೆಲ್ಲಲು 122 ಮತಗಳು ಬೇಕಾಗುತ್ತದೆ. ಬಿಹಾರದ ಒಂದು ಸ್ಥಾನ ಖಾಲಿ ಇದೆ.
ಬಿಜೆಪಿ 71 ಸಂಖ್ಯಾಬಲ ಹೊಂದಿದ್ದು ಹಾಗೂ ಮಿತ್ರಪಕ್ಷಗಳ ನೆರವಿನಿಂದ 115 ಸಂಖ್ಯೆ ತಲುಪಬಹುದಾಗಿದೆ. ಹೀಗಾಗಿ, ಎಐಎಡಿಎಂಕೆಯ 13 ಸದಸ್ಯರ ಬೆಂಬಲದ ನಿರೀಕ್ಷೆಯಿದೆ.
ಇದಲ್ಲದೆ, ಬಿಜೆಡಿಯ 9 ಸದಸ್ಯರ ನೆರವು ಸಿಕ್ಕರೆ, ಬಿಜೆಪಿ ಅಭ್ಯರ್ಥಿಗೆ ಜಯ ಲಭಿಸಲಿದೆ. ತೆಲುಗು ದೇಶಂ ಪಾರ್ಟಿ 6 ಜನ ಸದಸ್ಯರನ್ನು ಹೊಂದಿದ್ದು, ಈಗ ಎನ್ಡಿಎ ಮೈತ್ರಿಕೂಟದಿಂದ ದೂರಾಗಿದ್ದು, ವಿಪಕ್ಷಗಳು ಟಿಡಿಪಿ ಬೆಂಬಲದ ನಿರೀಕ್ಷೆಯಲ್ಲಿದ್ದು, 117 ಮತಗಳನ್ನು ಹೊಂದಲಿದೆ.
ಯುಪಿಎ ಪರ 112 ಮತಗಳಿವೆ, ಎನ್ಡಿಎ 90 +42(ಇನ್ನೂ ನಿರ್ಧಾರವಾಗದ ಸದಸ್ಯರು) ಹೊಂದಿದೆ.












Click it and Unblock the Notifications