ಬ್ರಿಟಿಷ್ ಆಡಳಿತಗಾರರಿಗೆ ಸಾವರ್ಕರ್ ಸಹಾಯ ಮಾಡಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಮುಂಬೈ, ನವೆಂಬರ್ 17: ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರನ್ನು ಗುರಿಯಾಗಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ.
ಬ್ರಿಟಿಷ್ ಆಡಳಿತಗಾರರಿಗೆ ಸಾವರ್ಕರ್ ಸಹಾಯ ಮಾಡಿದ್ದರು. ಭಯದಿಂದ ಅವರಿಗೆ ಕ್ಷಮಾಪಣೆ ಪತ್ರ ಬರೆದಿದ್ದರು ಎಂದು ರಾಹುಲ್ ಆರೋಪಿಸಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆಯನ್ನು ತಡೆಯುವಂತೆಯೂ ರಾಹುಲ್ ಗಾಂಧಿ ಶಿಂಧೆ ನೇತೃತ್ವದ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಬ್ರಿಟಿಷರಿಗೆ ಬರೆದ ಸಾವರ್ಕರ್ ಪತ್ರ ಪ್ರದರ್ಶಿಸಿದ ರಾಹುಲ್
ಮಹಾರಾಷ್ಟ್ರದ ಅಕೋಲ ಜಿಲ್ಲೆಯ ವಡೇಗಾಂವ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ರಾಹುಲ್, ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಪ್ರದರ್ಶಿಸಿದರು. 1920ರ ಸರ್ಕಾರಿ ದಾಖಲೆಗಳಲ್ಲಿ ಈ ಪತ್ರವನ್ನು ನಮೂದಿಸಲಾಗಿದೆ ಎಂದೂ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
'ನಿಮ್ಮ(ಬ್ರಿಟಿಷರ) ಅತ್ಯಂತ ವಿಧೇಯ ಸೇವಕನಾಗಿ ಉಳಿಯಲು ನಾನು ಬಯಸುತ್ತೇನೆ' ಎಂದು ಹೇಳುವ ಸಾವರ್ಕರ್ ಪತ್ರದ ಕೊನೆಯ ಸಾಲನ್ನು ರಾಹುಲ್ ಓದಿದರು. ಇದಕ್ಕೆ ಸಾವರ್ಕರ್ ಸಹಿ ಹಾಕಿದ್ದನ್ನೂ ಅವರು ತೋರಿಸಿದರು.
ಈ ಕ್ಷಮಾಪಣೆ ಪತ್ರದಿಂದ ಸಾವರ್ಕರ್ ಬ್ರಿಟಿಷರಿಗೆ ಸಹಾಯ ಮಾಡಿದ್ದರು ಎಂಬುದು ತಿಳಿದುಬರುತ್ತದೆ ಎಂದು ರಾಹುಲ್ ಹೇಳಿದರು.
'ಜೀವ ಭಯದಿಂದ ಕ್ಷಮಾಪಣೆ ಪತ್ರಕ್ಕೆ ಸಾವರ್ಕರ್ ಸಹಿ ಹಾಕಿದ್ದಾರೆ. ಹಾಗೆ ಮಾಡುವ ಮೂಲಕ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಜವಾಹರಲಾಲ್ ನೆಹರು ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಬಗೆದಿದ್ದಾರೆ' ಎಂದು ರಾಹುಲ್ ಪ್ರತಿಪಾದಿಸಿದರು.

ಬೇಕಿದ್ದರೆ ಭಾರತ್ ಜೋಡೊ ಯಾತ್ರೆ ತಡೆಯಲಿ: ರಾಹುಲ್
ನಾನು ಇದನ್ನೇ ಪ್ರತಿಪಾದಿಸುತ್ತೇನೆ. ಬೇಕಿದ್ದರೆ ಮಹಾರಾಷ್ಟ್ರ ಸರ್ಕಾರ ಭಾರತ್ ಜೋಡೊ ಯಾತ್ರೆಯನ್ನು ನಿಲ್ಲಿಸಲಿ ಎಂದು ಸವಾಲು ಹಾಕಿದರು.
ವಾಶಿಮ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿಯೂ ಸಾವರ್ಕರ್ ವಿರುದ್ಧ ರಾಹುಲ್ ಹರಿಹಾಯ್ದಿದ್ದರು.
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ಗಳು ಸಾವರ್ಕರ್ ಅವರನ್ನು ಸಂಕೇತವನ್ನಾಗಿಸಿಕೊಂಡಿವೆ. ಎರಡರಿಂದ ಮೂರು ವರ್ಷಗಳ ಕಾಲ ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಇದ್ದರು. ಅಲ್ಲಿಂದಲೇ ಅವರು ಕ್ಷಮಾದಾನ ಅರ್ಜಿಗಳನ್ನು ಬರೆಯಲು ಪ್ರಾರಂಭಿಸಿದರು ಎಂದು ಹೇಳಿದ್ದರು.
ಈ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಕ್ಕೆ ಸೇರಿದ ಸಂಸದ ರಾಹುಲ್ ಶೆವಾಲೆ ಅವರು ರಾಹುಲ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಸಾಗುತ್ತಿರುವ ಭಾರತ್ ಜೋಡೊ ಯಾತ್ರೆಗೆ ತಡೆಯೊಡ್ಡಬೇಕೆಂದು ಅವರು ಕರೆ ನೀಡಿದ್ದರು.

ದೇಶದಲ್ಲಿ ದ್ವೇಷ ಹರಡುತ್ತಿರುವ ಬಿಜೆಪಿ
ಶೆವಾಲೆ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿರುವ ರಾಹುಲ್, 'ದೇಶದಲ್ಲಿ ದ್ವೇಷ, ಭಯ ಮತ್ತು ಹಿಂಸಾಚಾರವನ್ನು ಬಿಜೆಪಿ ಹರಡುತ್ತಿದೆ' ಎಂದು ಆರೋಪಿಸಿದ್ದಾರೆ.
'ರೈತರು ಮತ್ತು ಯುವಕರ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ. ಈ ಯಾತ್ರೆ ಅಗತ್ಯವಿಲ್ಲ ಎಂಬುದಾಗಿ ಜನರು ಭಾವಿಸಿದ್ದರೆ, ಲಕ್ಷಾಂತರ ಮಂದಿ ಹೊರಬಂದು ಬೆಂಬಲ ನೀಡುತ್ತಿರಲಿಲ್ಲ' ಎಂದು ಅವರು ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆಯಿಂದ ನಾನು ಬಹಳಷ್ಟು ಕಲಿತಿದ್ದೇನೆ. ಇದು ನನಗೆ ಕಲಿಕೆಯ ಅನುಭವವನ್ನು ನೀಡುತ್ತಿದೆ. ಜನರನ್ನು ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡುತ್ತಿದೆ' ಎಂದು ಅವರು ತಿಳಿಸಿದ್ದಾರೆ.

ಸಾಮಾನ್ಯ ಜನರು ಬೇರೆಯದೇ ಹೇಳುತ್ತಾರೆ ಎಂದ ರಾಹುಲ್
'ಇದು ಎರಡು ರಾಜಕೀಯ ಪಕ್ಷಗಳ ನಡುವಿನ ಸಂಘರ್ಷವನ್ನು. ದೇಶದಲ್ಲಿನ ಸಂಸ್ಥೆಗಳು ಈ ರೀತಿಯ ವಾತಾವರಣವನ್ನು ಹುಟ್ಟುಹಾಕುತ್ತಿವೆ. ಆದರೆ, ಸಾಮಾನ್ಯ ಜನರು ಬೇರೆಯದೇ ಹೇಳುತ್ತಾರೆ. ನೀವು ನನ್ನ ಜೊತೆ ಸಾಗಿದರೆ, ಇದು ನಿಮಗೆ ಅರ್ಥವಾಗಲಿದೆ' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.
ವಿರೋಧಿಗಳನ್ನೂ ಪ್ರೀತಿಸುವುದು, ಸಹಾನೂಭೂತಿ ತೋರುವುದು ಭಾರತೀಯ ಮೌಲ್ಯಗಳಾಗಿವೆ. ಈ ಯಾತ್ರೆಯು ಅದನ್ನೇ ಸಾರುತ್ತಿದೆ ಎಂದು ರಾಹುಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಯಾತ್ರೆಯು ಸಹಾನೂಭೂತಿ ಹಾಗೂ ಪ್ರೀತಿಯನ್ನು ಹೊತ್ತು ಸಾಗುತ್ತಿದೆ. ಎದುರಾಳಿಗಳ ಅಭಿಪ್ರಾಯಗಳನ್ನು ತಪ್ಪೆಂದು ಭಾರತ್ ಜೋಡೊ ಯಾತ್ರೆ ಒತ್ತಿ ಹೇಳುತ್ತಿದೆ ಎಂದು ಹೇಳಿದ್ದಾರೆ.












Click it and Unblock the Notifications