ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ; ತಯಾರಿ ಹೇಗಿರಲಿದೆ?
ಚೆನ್ನೈ, ಸೆಪ್ಟೆಂಬರ್ 06: ಕಾಂಗ್ರೆಸ್‌ನ ಬಹುನಿರೀಕ್ಷಿತ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಗಲಿದೆ. ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೂಲಕ 12 ರಾಜ್ಯಗಳಲ್ಲಿ 3,570 ಕಿ. ಮೀ. ಕ್ರಮಿಸುವ ಗುರಿಯನ್ನು ಹೊಂದಿದ್ದಾರೆ.
ಬುಧವಾರ ಪ್ರಾರಂಭವಾಗುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು 119 ಭಾರತ್ ಯಾತ್ರಿಗಳನ್ನು ಹೊಂದಿರುತ್ತದೆ. ಪಾದಯಾತ್ರೆ ವೇಳೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ರಸ್ತೆಯಲ್ಲೇ ಪ್ರಯಾಣಿಸುತ್ತಾರೆ. ಅಲ್ಲಲ್ಲಿ ಕ್ಯಾಂಪ್ ಸೈಟ್‌ಗಳಲ್ಲಿ ಉಳಿದುಕೊಂಡು ಅಡುಗೆ ಮಾಡುತ್ತಾರೆ. ಮುಂದಿನ 150 ದಿನಗಳವರೆಗೆ ಮೂರು ದಿನಗಳಿಗೊಮ್ಮೆ ತಮ್ಮ ದಿನಬಳಕೆಯ ಬಟ್ಟೆ ಒಗೆಯಲು ಮೀಸಲಿಡಲಿದ್ದಾರೆ. 12 ರಾಜ್ಯಗಳ ಈ ಪಾದಯಾತ್ರೆ ಕನ್ಯಾಕುಮಾರಿಯಿಂದ ಆರಂಭವಾಗಿ ಕಾಶ್ಮೀರದವರೆಗೆ 3,570 ಕಿ.ಮೀ. ಕ್ರಮಿಸಲಿದೆ.
ಟ್ರಕ್‌ಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ 59 ಕಂಟೈನರ್‌ಗಳಲ್ಲಿ ಪಾದಯಾತ್ರಿಗಳು ವಿಶ್ರಾಂತಿ ಪಡೆಯುತ್ತಾರೆ. ಭದ್ರತಾ ಕಾರಣದಿಂದ ರಾಹುಲ್ ಗಾಂಧಿ ಅವರಿಗೆ ಪ್ರತ್ಯೇಕದಾದ ಒಂದು ಕಂಟೈನರ್ ಇರುತ್ತದೆ. ಒಂದು ಕಂಟೈನರ್‌ನಲ್ಲಿ 12 ಮಂದಿ ನಿದ್ರಿಸಬಹುದಾಗಿದೆ.
ಈ ಪಾದಯಾತ್ರೆಯಲ್ಲಿ ಭಾಗವಹಿಸುವವರ ಸರಾಸರಿ ವಯಸ್ಸು 38 ಆಗಿರುತ್ತದೆ. ಹಿರಿಯ ಪಾದಯಾತ್ರಿ ಎಂದರೆ 58 ವರ್ಷ ವಯಸ್ಸಿನ ರಾಜಸ್ಥಾನದ ವಿಜೇಂದ್ರ ಸಿಂಗ್ ಮಹ್ಲಾವತ್ ಮತ್ತು ಕಿರಿಯ ಪಾದಯಾತ್ರಿ 25 ವರ್ಷ ವಯಸ್ಸಿನ ಅರುಣಾಚಲ ಪ್ರದೇಶದ ಅಜಂ ಜೊಂಬ್ಲಾ ಮತ್ತು ಬೆಮ್ ಬಾಯಿ. ಪಾದಯಾತ್ರೆಯಲ್ಲಿ 28 ಮಹಿಳೆಯರು ಇರುತ್ತಾರೆ.
ಪಾದಯಾತ್ರೆಗಾಗಿ ಬಹುತೇಕ ಯಾತ್ರಿಗಳು ಈಗಾಗಲೇ ಕನ್ಯಾಕುಮಾರಿಯಲ್ಲಿ ಆರಂಭಿಕ ಹಂತದಲ್ಲಿ ಸಮಾವೇಶಗೊಂಡಿದ್ದಾರೆ. ವಯಸ್ಸು ನಿಜವಾಗಿಯೂ ಒಂದು ವಿಷಯವಲ್ಲ. ನಾನು 98 ವರ್ಷ ವಯಸ್ಸಿನವನಾದರೂ ನಮ್ಮ ನಾಯಕ ರಾಹುಲ್ ಗಾಂಧಿಯವರು ಮುನ್ನಡೆಸುತ್ತಿರುವ ಈ ಭಾರತ್ ಜೋಡೋ ಯಾತ್ರೆಗೆ ನಾನು ಸೇರುತ್ತಿದ್ದೇನೆ. ನಾನು ಈಗಾಗಲೇ ನನಗಿಂತ ಹೆಚ್ಚು ಕಿರಿಯರಾಗಿರುವ ನನ್ನ ಸಹ ಪಾದಯಾತ್ರಿಗಳನ್ನು ಮೀರಿಸುವಂತೆ ಪಾಲ್ಗೊಳ್ಳಲಿದ್ದೇನೆ ಎಂದು ರಾಜಸ್ಥಾನದ ವಿಜೇಂದ್ರ ಸಿಂಗ್ ಮಹ್ಲಾವತ್ ಹೇಳಿದರು.
ಮಹ್ಲವತ್ ಅವರು ಮೂರು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದರೆ, ಇಟಾನಗರದ ಬೆಮ್ ಬಾಯಿ ಮೂರು ವರ್ಷಗಳ ಹಿಂದೆಯಷ್ಟೇ ಕಾಂಗ್ರೆಸ್ ಸೇರಿದ್ದಾರೆ. ಪ್ರಯಾಣದ ವ್ಯಾಪ್ತಿ ಮತ್ತು ದೀರ್ಘ ದಿನಗಳ ಈ ಯಾತ್ರೆಗೆ ಅವರ ಕುಟುಂಬವು ಅವರನ್ನು ಕಳುಹಿಸಲು ಹೆಚ್ಚು ಉತ್ಸುಕರಾಗಿರಲಿಲ್ಲ ಉದ್ಯೋಗವನ್ನು ಹುಡುಕಲು ಹೆಣಗಾಡುತ್ತಿರುವ ನನ್ನಂತಹ ಅನೇಕ ಯುವಕರ ದುಸ್ಥಿತಿಯನ್ನು ಎತ್ತಿ ತೋರಿಸುವುದೇ ಯಾತ್ರೆಗೆ ಸೇರಲು ನನ್ನ ದೊಡ್ಡ ಪ್ರೇರಣೆಯಾಗಿದೆ. ಇದು ನಮ್ಮ ಇತ್ತೀಚಿನ ವರ್ಷಗಳಲ್ಲಿ ದೇಶದ ಗಂಭೀರ ಸಮಸ್ಯೆಯೂ ಆಗಿದೆ ಎಂದು ಬೆಮ್ ಬಾಯಿ ಹೇಳಿದರು.
ಪಾದಯಾತ್ರೆಯಲ್ಲಿ 119 ಯಾತ್ರಿಗಳ ಜೊತೆಗೆ ಭದ್ರತಾ ಸಿಬ್ಬಂದಿ, ಛಾಯಾಗ್ರಾಹಕರು, ಸಾಮಾಜಿಕ ಮಾಧ್ಯಮದ ಸಿಬ್ಬಂದಿ ಮತ್ತು ವೈದ್ಯಕೀಯ ತಂಡವನ್ನು ಒಳಗೊಂಡಿರುವ ಪಕ್ಷದ ಸಂವಹನ ತಂಡವು ಯಾತ್ರೆಯೊಂದಿಗೆ ಪ್ರಯಾಣಿಸುವುದರಿಂದ ಒಟ್ಟು ಪಾದಯಾತ್ರಿಗಳ ಸಂಖ್ಯೆಯು 300ಕ್ಕೆ ತಲುಪಿದೆ. ಪಾದಯಾತ್ರಿಗಳು ಏಕರೂಪತೆಯನ್ನು ಕಾಯ್ದುಕೊಳ್ಳಲು ಬಿಳಿ ಬಟ್ಟೆಯನ್ನು ಧರಿಸಲು ತಿಳಿಸಲಾಗಿದೆ.
ಮೂರು ದಿನಗಳಿಗೊಮ್ಮೆ ಬಟ್ಟೆ ಒಗೆಯಲು ಸಮಯ ಮೀಸಲಿಡುತ್ತಾರೆ. ಯಾತ್ರೆಯು ದಿನಕ್ಕೆ ಸರಾಸರಿ 22ರಿಂದ 23 ಕಿ.ಮೀ ಕ್ರಮಿಸುವ ನಿರೀಕ್ಷೆಯಿದೆ. ಪ್ರತಿದಿನ ಬೆಳಿಗ್ಗೆ 7 ರಿಂದ 10 ರವರೆಗೆ ಪಾದಯಾತ್ರೆ ಜರುಗುತ್ತದೆ. ನಂತರ ವಿರಾಮ. 3.30ಕ್ಕೆ ಮತ್ತೆ ಆರಂಭ ರಾತ್ರಿ 7 ಗಂಟೆಯವರೆಗೆ ಪಾದಯಾತ್ರೆ ನಡೆಯುತ್ತದೆ. 119 ಯಾತ್ರಿಗಳಿಗೆ ಮೀಸಲಾಗಿರುವ ಈ ಕಂಟೈನರ್‌ಗಳು ಯಾತ್ರೆಯೊಂದಿಗೆ ಸಾಗುವುದಿಲ್ಲ ಬದಲಿಗೆ ಅವುಗಳು ದಿನದ ಕೊನೆಯಲ್ಲಿ ಗೊತ್ತುಪಡಿಸಿದ ಕ್ಯಾಂಪ್‌ಸೈಟ್‌ನಲ್ಲಿ ಬಂದು ಸೇರುತ್ತವೆ.

ಯಾತ್ರೆ ಸೇರಲು ಲಕ್ಷಾಂತರ ಮಂದಿ
ಭಾರತ್ ಜೋಡೋ ಯಾತ್ರೆ ಇದು ಆಧುನಿಕ ಇತಿಹಾಸದಲ್ಲಿ ಅತಿದೊಡ್ಡ ರಾಜಕೀಯ ಅಭಿಯಾನಗಳಲ್ಲಿ ಒಂದಾಗಿದೆ. ಪ್ರಾರಂಭದಲ್ಲಿ ಸ್ವಲ್ಪ ಆತಂಕ ಇದೆ. ಆದರೆ ಯಾತ್ರೆಯ ದಿನಾಂಕವು ಸಮೀಪಿಸುತ್ತಿರುವಂತೆ ನಾನು ರೋಮಾಂಚನಗೊಂಡಿದ್ದೇನೆ ಮತ್ತು ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ. ದಿನೇ ದಿನೇ ನಾವು ಜನರಿಂದ ಹೆಚ್ಚಿನ ಬೆಂಬಲ ಮತ್ತು ಪ್ರೀತಿಯನ್ನು ಪಡೆಯುತ್ತಿದ್ದೇವೆ. ವಾಸ್ತವವಾಗಿ ಪ್ರತಿದಿನ ನಾವು ಯಾತ್ರೆಗೆ ಸೇರಲು ಆಶಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗಿಂತ ಹೆಚ್ಚಿನ ಜನರು ಪಾಲ್ಗೊಳ್ಳುವ ಬಯಕೆ ಹೊಂದಿದ್ದಾರೆ. ಆದರೆ ನಮಗೆ ಇನ್ನು ಮುಂದೆ ಸ್ಥಳಾವಕಾಶವಿಲ್ಲ ಎಂದು ಪಕ್ಷದ ಸಂವಹನ ವಿಭಾಗದ ಕಾರ್ಯದರ್ಶಿ ವೈಭವ್ ವಾಲಿಯಾ ಹೇಳಿದರು.

ಮಧ್ಯಾಹ್ನ 3 ಗಂಟೆಗೆ ಕನ್ಯಾಕುಮಾರಿಗೆ ರಾಹುಲ್
ಬುಧವಾರ ಸಿರಿಪೆರಂಬದೂರಿನಲ್ಲಿ ಒಂದು ಗಂಟೆಯ ಪ್ರಾರ್ಥನಾ ಸಭೆಯ ನಂತರ ರಾಹುಲ್ ಗಾಂಧಿ ಅವರು ಮಧ್ಯಾಹ್ನ 3 ಗಂಟೆಗೆ ಕನ್ಯಾಕುಮಾರಿ ತಲುಪಲಿದ್ದಾರೆ. ಯಾತ್ರೆಯ ಆರಂಭಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕ, ತಿರುವಳ್ಳುವರ್ ಪ್ರತಿಮೆ ಮತ್ತು ಕಾಮರಾಜ್ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.

ಭೂಪೇಶ್ ಬಾಘೇಲ್ ಅವರಿಗೆ ತ್ರಿವರ್ಣ ಧ್ವಜ ಹಸ್ತಾಂತರ
ನಂತರ ಮಹಾತ್ಮ ಗಾಂಧಿ ಮಂಟಪಕ್ಕೆ ತೆರಳಿ ಅಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರಿಸಲಿದ್ದಾರೆ. ನಿಜವಾದ ಪ್ರಯಾಣ ಗುರುವಾರ ಆರಂಭವಾಗಲಿದೆ. ಹಾಗಾಗಿ, ರಾಜ್ಯ ಕಾಂಗ್ರೆಸ್ ಘಟಕಗಳು ಯಾತ್ರಾರ್ಥಿಗಳಿಗೆ ಮಧ್ಯಾಹ್ನದ ನಂತರ ಊಟದ ವ್ಯವಸ್ಥೆ ಮಾಡುವ ನಿರೀಕ್ಷೆಯಿದೆ. ನಂತರ ಯಾತ್ರಿಗಳು ತಮ್ಮ ಉಪಹಾರ ಮತ್ತು ಊಟವನ್ನು ಕ್ಯಾಂಪಿಂಗ್ ಸೈಟ್‌ನಲ್ಲಿ ತಯಾರಿಸುತ್ತಾರೆ.

ಸೆಪ್ಟೆಂಬರ್ 30ಕ್ಕೆ ಕರ್ನಾಟಕ ಪ್ರವೇಶ
ಪಾದಯಾತ್ರೆಯು ಸೆಪ್ಟೆಂಬರ್ 11ರಂದು ಕೇರಳವನ್ನು ತಲುಪಲಿದ್ದು, ಮುಂದಿನ 18 ದಿನಗಳ ಕಾಲ ರಾಜ್ಯದ ಮೂಲಕ ಸಂಚರಿಸಲಿದೆ. ಸೆಪ್ಟೆಂಬರ್ 30ರಂದು ಕರ್ನಾಟಕವನ್ನು ತಲುಪಲಿದೆ. ಅಕ್ಟೋಬರ್ 17 ರಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ನಡೆದರೆ, ಎಲ್ಲಾ ಯಾತ್ರಿಗಳಿಗೆ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಮೂಲಕ ಯಾತ್ರೆ ನಡೆಯಲಿದೆ.












Click it and Unblock the Notifications