Breaking news: ಹರ್ಯಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್, ಎಎಪಿ ಮೈತ್ರಿ
ನವದೆಹಲಿ, ಸೆಪ್ಟೆಂಬರ್ 03: 'ಇಂಡಿಯಾ' ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಎಎಪಿ ಪಕ್ಷ ಹರ್ಯಾಣ ವಿಧಾನಸಭೆ ಚುನಾವಣೆ 2024ರಲ್ಲಿ ಮೈತ್ರಿ ಮಾಡಿಕೊಳ್ಳಲಿವೆ. ಈ ಕುರಿತು ಪ್ರಾಥಮಿಕ ಮಾತುಕತೆಗಳಿಗೆ ಚಾಲನೆ ಸಿಕ್ಕಿದೆ. ಈಗಾಗಲೇ ಕಾಂಗ್ರೆಸ್ ಪಕ್ಷ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ ಜೊತೆ ಮೈತ್ರಿ ಮಾಡಿಕೊಂಡು, ಸೀಟು ಹಂಚಿಕೊಂಡಿದೆ.
ಅಕ್ಟೋಬರ್ 5ರಂದು ಹರ್ಯಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. 90 ಸದಸ್ಯ ಬಲದ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷವೇ ಎಎಪಿಯನ್ನು ಆಹ್ವಾನಿಸಿದೆ. ಪಂಜಾಬ್, ದೆಹಲಿ ಎರಡು ರಾಜ್ಯದಲ್ಲಿ ಅಧಿಕಾರದಲ್ಲಿರುವ ಎಎಪಿ, ಈಗ ಹರ್ಯಾಣ ಚುನಾವಣೆಯ ಮೇಲೆಯೂ ಕಣ್ಣಿಟ್ಟಿದೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯಂತೆಯೇ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಬಯಸಿದೆ. ಸೋಮವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಕುರಿತು ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯವನ್ನು ರಾಹುಲ್ ಸಂಗ್ರಹ ಮಾಡಿದ್ದಾರೆ.
ಇಬ್ಬರು ನಾಯಕರ ಭೇಟಿ: ಎಎಪಿ ನಾಯಕ, ರಾಜ್ಯಸಭಾ ಸದಸ್ಯ ರಾಘವ್ ಚಡ್ಡ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಇಂದು ರಾತ್ರಿ ಅಥವ ನಾಳೆ 90 ಸದಸ್ಯ ಬಲದ ಹರ್ಯಾಣದಲ್ಲಿ ಸೀಟು ಹಂಚಿಕೆ ಹೇಗೆ? ಎಂದು ಪ್ರಾಥಮಿಕ ಹಂತದ ಮಾತುಕತೆಯನ್ನು ನಡೆಸಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷ 31 ಶಾಸಕರ ಪೈಕಿ 28 ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಆದರೆ ಎಎಪಿ ಜೊತೆ ಮೈತ್ರಿ ಮಾಡಿಕೊಂಡರೆ ಚುನಾವಣಾ ಲೆಕ್ಕಾಚಾರಗಳು ಬದಲಾಗಲಿವೆ. 2025ರಲ್ಲಿ ನಡೆಯುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಹರ್ಯಾಣದಲ್ಲಿನ ಕಾಂಗ್ರೆಸ್, ಎಎಪಿ ಮೈತ್ರಿ ಮಹತ್ವವನ್ನು ಪಡೆದುಕೊಂಡಿದೆ.
ಎಎಪಿ ಮತ್ತು ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ರಚನೆಯಾದ 'ಇಂಡಿಯಾ' ಮೈತ್ರಿಕೂಟದ ಮಿತ್ರ ಪಕ್ಷಗಳು. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿಯೂ ಹರ್ಯಾಣ ರಾಜ್ಯದಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸಿದ್ದವು. ಈಗ ವಿಧಾನಸಭೆ ಚುನಾವಣೆಯಲ್ಲಿಯೂ ಒಂದಾಗಿ ಸಾಗಲಿವೆ.
2024ರ ಲೋಕಸಭೆ ಚುನಾವಣೆಯಲ್ಲಿ ಹರ್ಯಾಣ ರಾಜ್ಯದಲ್ಲಿ ಕಾಂಗ್ರೆಸ್ 5 ಸೀಟುಗಳನ್ನು ಗೆದ್ದಿದೆ. ಎಎಪಿ ಸ್ಪರ್ಧಿಸಿದ್ದ ಒಂದು ಸೀಟಿನಲ್ಲಿಯೂ ಸೋಲು ಕಂಡಿದೆ. ಆದರೆ ಕಾಂಗ್ರೆಸ್‌ನ ಮತಗಳಿಕೆ ಹೆಚ್ಚಾಗಲು ಎಎಪಿ ಜೊತೆಗಿನ ಮೈತ್ರಿ ಕಾರಣ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಆದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಎಎಪಿ ಜೊತೆ ಕೈ ಜೋಡಿಸಲು ಬಯಸಿದೆ.
ಹರ್ಯಾಣ ವಿಧಾನಸಭೆ ಚುನಾವಣೆ ಪೂರ್ವ ಸಮೀಕ್ಷೆಗಳು ಪ್ರಕಟವಾಗುತ್ತಿವೆ. ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸುತ್ತಿವೆ. ಇದು ಪಕ್ಷದ ನಾಯಕರ ಉತ್ಸಾಹವನ್ನು ಹೆಚ್ಚಿಸಿದೆ. ಎಎಪಿ, ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು ಎಂಬುದು ಲೆಕ್ಕಾಚಾರವಾಗಿದೆ.












Click it and Unblock the Notifications