maharashtra election 2024: ಮಹಾರಾಷ್ಟ್ರ ಮುಂದಿನ ಸಿಎಂ ಯಾರು? ಎಂವಿಎ-ಮಹಾಯುತಿ ನಡುವೆ ಫೈಟ್
ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆ ಹೊರಬೀಳಲಿದೆ. ಇದಕ್ಕೂ ಮುನ್ನವೇ ಮಹಾರಾಷ್ಟ್ರದ ಮುಂದಿನ ಸಿಎಂ ಬಗ್ಗೆ ಚರ್ಚೆಗಳು ಜೋರಾಗಿವೆ. ಮತಗಳ ಎಣಿಕೆಗೆ ಮುಂಚೆಯೇ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಜೋರಾಗಿದೆ.
ಎರಡೂ ಪಾಳಯಗಳಿಂದ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಹೊಸ ಸರ್ಕಾರ ರಚನೆಯ ಹುಮ್ಮಸ್ಸಿನಲ್ಲಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರದ ವಿಧಾನಸಭೆಗೆ ಕಳೆದ ಬುಧವಾರ ಮತದಾನ ಪೂರ್ಣಗೊಂಡಿದೆ. ನವೆಂಬರ್ 23ರಂದು (ನಾಳೆ) ಮತ ಎಣಿಕೆ ನಡೆಯಲಿದ್ದು ಈ ಬಾರಿ ಗೆಲುವುದು ನಮ್ಮದೇ ಎಂದು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ಹೇಳಿಕೊಳ್ಳುತ್ತಿವೆ.

ಮತದಾನದ ನಂತರ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ತಮ್ಮ ಪಕ್ಷದ ನಾಯಕತ್ವದಲ್ಲಿ ಮಹಾರಾಷ್ಟ್ರದಲ್ಲಿ ಎಂವಿಎ ಸರ್ಕಾರವನ್ನು ರಚಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ನಾಳೆ ಬೆಳಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಮಹತ್ವದ ಗೆಲುವಿನತ್ತ ಸಾಗುತ್ತಿರುವ ವಿಶ್ವಾಸವಿದೆ. ನಮ್ಮ ಪಕ್ಷದಿಂದ ಸುಮಾರು 160-165 ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

ಮಹಾಯುತಿಯ ಎಲ್ಲ ನಾಯಕರು ಒಟ್ಟಿಗೆ ಕುಳಿತು ಮುಂದಿನ ಸಿಎಂ ಬಗ್ಗೆ ನಿರ್ಧರಿಸುತ್ತಾರೆ. ಇಲ್ಲಿ ಎಂದಿಗೂ ಮುಖ್ಯಮಂತ್ರಿಯಾಗಲು ನಾಯಕರ ನಡುವೆ ಪೈಪೋಟಿ ಇರಲಿಲ್ಲ. ಹೆಚ್ಚಿನ ಅಭಿವೃದ್ಧಿಗಾಗಿ ನಾವು ಸರ್ಕಾರ ರಚಿಸಲು ಬಯಸುತ್ತೇವೆ. ಮುಂದಿನ ಐದು ವರ್ಷಗಳಲ್ಲಿ ಕೆಲಸ ಮಾಡುವುದು ನಮ್ಮ ಉದ್ದೇಶ ಎಂದು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಹೇಳಿದ್ದಾರೆ.
ಟುಡೇಸ್ ಚಾಣಕ್ಯ ಸಂಸ್ಥೆ ಕೂಡ ತಡವಾಗಿ ಮಹಾರಾಷ್ಟ್ರದ ಎಕ್ಸಿಟ್ ಪೋಲ್ ಫಲಿತಾಂಶ ರಿಲೀಸ್ ಮಾಡಿದೆ. ಈ ಸಮೀಕ್ಷೆಯಲ್ಲೂ ಬಿಜೆಪಿ ಬಹುಮತ ಪಡೆದುಕೊಂಡಿದೆ. ಬಿಜೆಪಿಗೆ ಬರೋಬ್ಬರಿ 175 (11) ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಕಾಂಗ್ರೆಸ್ 100 (11) ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಇನ್ನು ಇತರೆ 13 (5) ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ಟುಡೇಸ್ ಚಾಣಕ್ಯ ನುಡಿದಿರುವ ಭವಿಷ್ಯದಂತೆ ವರದಿ ಪ್ರಕಟಿಸಿದೆ.
ಪೀಪಲ್ ಪಲ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 102-120 ಸ್ಥಾನ ಪಡೆಯಲಿದೆ. ಶಿವಸೇನೆ (ಇಎಸ್) 42-61 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ. ಈಗಾಗಲೇ ಬಿಜೆಪಿ ಜೊತೆಗೆ ಶಿವಸೇನೆ ಕೈಜೋಡಿಸಿದ್ದು, ಈ ಎರಡೂ ಸಂಖ್ಯೆಗಳು ಸೇರಿದರೆ ಮೈತ್ರಿ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.
ಎನ್‌ಸಿಪಿ (ಎಪಿ) 14-25 ಸ್ಥಾನ, ಐಎನ್‌ಸಿ (ಕಾಂಗ್ರೆಸ್) 24-44, ಶಿವಸೇನಾ (ಯುಬಿಟಿ) 21-36, ಎನ್‌ಸಿಪಿ (ಎಸ್‌ಪಿ) 28-41 ಹಾಗೂ ಇತರೆ 6-12 ಸ್ಥಾನಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಮ್ಯಾಜಿಕ್ ನಂಬರ್ 145. ಶಿವಸೇನಾ, ಬಿಜೆಪಿ ಹಾಗೂ ಎನ್‌ಸಿಪಿ (ಎಪಿ) ಒಳಗೊಂಡ ಮಹಾಯುತಿ ಒಕ್ಕೂಟವು 175ರಿಂದ 195 ಸ್ಥಾನಗಳನ್ನು ಪಡೆಯಲಿದ್ದು, ಮಹಾ ವಿಕಾಸ್ ಅಘಾಡಿಯು 85ರಿಂದ 112 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಎಲ್ಲರ ಚಿತ್ತ ನಾಳಿನ ಚುನಾವಣಾ ಫಲಿತಾಂಶದತ್ತ ಇದೆ.












Click it and Unblock the Notifications