ಪ್ಯಾರಿಸ್ ಒಲಿಂಪಿಕ್ಸ್‌ನಿಂದ ವಿನೇಶ್ ಫೋಗಟ್ ಅನರ್ಹ: ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. 50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಕೂಡ ವಿನೇಶ್ ಫೋಗಟ್ ಅನರ್ಹತೆಯನ್ನು ಖಚಿತಪಡಿಸಿದೆ. ಇದರಿಂದ ಭಾರತೀಯರಿಗೆ ಆಘಾತವಾಗಿದ್ದು, ವಿನೇಶ್ ಫೋಗಟ್ ಅನರ್ಹಗೊಂಡಿರುವುದಕ್ಕೆ ಸಂಪೂರ್ಣ ದೇಶ ಬೇಸರದಲ್ಲಿದೆ.
ದೇಶದ ಹೆಮ್ಮೆಯಾಗಿದ್ದ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡಿರುವ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡೆದಿರುವುದು ದುರದೃಷ್ಟಕರ ಘಟನೆ. ವಿನೇಶ್ ಫೋಗಟ್ ಅವರ ಶಕ್ತಿ, ಸ್ಥೈರ್ಯ, ಮತ್ತು ಸಮರ್ಪಣೆ ರಾಷ್ಟ್ರವನ್ನು ಯಾವಾಗಲೂ ಪ್ರೇರಿಪಿಸುತ್ತದೆ.

ಈ ಒಂದು ಕ್ಷಣ, ನಿಮ್ಮ ಲೆಕ್ಕವಿಲ್ಲದಷ್ಟು ಸಾಧನೆ ಹಾಗೂ ನೀವು ಭಾರತಕ್ಕೆ ತಂದ ಹೆಮ್ಮೆಯನ್ನು ಕಡಿಮೆ ಮಾಡುವುದಿಲ್ಲ. ನೀವು ಮತ್ತು ನಿಮ್ಮ ಈ ಸಾಧನೆಯ ಪಯಣದ ಬಗ್ಗೆ ನಮಗೆ ನಂಬಿಕೆ ಇದೆ. ನೀವು ಸದಾ ನಮ್ಮ ಚಾಂಪಿಯನ್ ಆಗಿರುತ್ತೀರಿ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹ ಯಾಕೆ..?
50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿದ್ದಾರೆ. ವಿನೇಶ್ ಫೋಗಟ್ ಅವರು 50 ಕೆಜಿ ತೂಕ ವಿಭಾಗದಲ್ಲಿ ಅಂತಿಮ ಹಣಾಹಣಿಯಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್ರನ್ನ ಎದುರಿಸಬೇಕಿತ್ತು. ಇಂದು ಮಧ್ಯಾಹ್ನ 12:45ಕ್ಕೆ ಈ ಸ್ಪರ್ಧೆ ನಡೆಯಬೇಕಿತ್ತು. ಆದರೆ ಹೆಚ್ಚಿನ ತೂಕದ ಕಾರಣ ನೀಡಿ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಲಾಗಿದೆ.
ನಿನ್ನೆ ನಡೆದ ತೂಕ ಪರೀಕ್ಷೆಯಲ್ಲಿ ವಿನೇಶ್ ಅವರ ತೂಕ ನಿಗದಿಗಿಂತ ಹೆಚ್ಚಿತ್ತು. ಹೀಗಾಗಿ ಭಾರತ ತಂಡವು ರಾತ್ರಿಯಿಡೀ ಅವರ ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸಿತು. ಆದರೆ ಇಂದು ಬೆಳಿಗ್ಗೆ ನಡೆದ ತೂಕ ಪರೀಕ್ಷೆಯಲ್ಲಿಯೂ ಕೂಡ ಅವರ ತೂಕವು ಹೆಚ್ಚಾಗಿದೆ. ಹೀಗಾಗಿ ಅವರನ್ನು ಅನರ್ಹಗೊಳಿಸಲಾಗಿದೆ. ಇದು ಇಡೀ ದೇಶಕ್ಕೆ ಆಘಾತ ತಂದಿದೆ.












Click it and Unblock the Notifications