ಪ್ರಜಾಪ್ರಭುತ್ವ ಉಳಿಸಿ: ಭಾರತದ ಮುಖ್ಯ ನ್ಯಾಯಮೂರ್ತಿಗೆ ಮಮತಾ ಬ್ಯಾನರ್ಜಿ ಒತ್ತಾಯ
ಕೋಲ್ಕತ್ತಾ, ಅ. 30: ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ರಚನೆಯನ್ನು ಉಳಿಸಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಭಾರತದ ಮುಖ್ಯ ನ್ಯಾಯಾಧೀಶರನ್ನು ಒತ್ತಾಯಿಸಿದ್ದಾರೆ.
ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಉಸಿರುಗಟ್ಟಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ಪ್ರವೃತ್ತಿಯನ್ನು ಮುಂದುವರೆಸಿದರೆ, ರಾಷ್ಟ್ರವು ಅಧ್ಯಕ್ಷೀಯ ಸರ್ಕಾರಕ್ಕೆ ಒಳಗಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ರಚನೆಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿಯಲ್ಲಿ ಮನವಿ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ನ್ಯಾಷನಲ್ ಯೂನಿವರ್ಸಿಟಿ ಆಫ್ ಜ್ಯೂರಿಡಿಕಲ್ ಸೈನ್ಸಸ್ (ಎನ್‌ಯುಜೆಎಸ್) ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಸಿಜೆಐ ನ್ಯಾಯಮೂರ್ತಿ ಯುಯು ಲಲಿತ್ ಅವರ ಉಪಸ್ಥಿತಿಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡುತ್ತಿದ್ದರು. ನ್ಯಾಯಮೂರ್ತಿ ಯುಯು ಲಲಿತ್ ಅವರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾರೆ.

ಜನರನ್ನು ಕಿರುಕುಳದಿಂದ ರಕ್ಷಿಸಬೇಕು ಎಂದ ಮಮತಾ ಬ್ಯಾನರ್ಜಿ, "ಪ್ರಜಾಸತ್ತಾತ್ಮಕ ಅಧಿಕಾರವನ್ನು ಸಮಾಜದ ಒಂದು ನಿರ್ದಿಷ್ಟ ವರ್ಗವು ವಶಪಡಿಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ಎಲ್ಲಿದೆ..? ದಯವಿಟ್ಟು ಪ್ರಜಾಪ್ರಭುತ್ವವನ್ನು ಉಳಿಸಿ" ಎಂದು ಹೇಳಿದ್ದಾರೆ.
ಮಾಧ್ಯಮ ಪಕ್ಷಪಾತದ ವಿರುದ್ಧ ಮಾತನಾಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಅವರು ಯಾರನ್ನಾದರೂ ನಿಂದಿಸಬಹುದೇ? ಅವರು ಯಾರನ್ನಾದರೂ ದೂಷಿಸಬಹುದೇ? ತೀರ್ಪು ಪ್ರಕಟವಾಗುವ ಮುನ್ನವೇ ಹಲವು ವಿಷಯಗಳು ನಡೆಯುತ್ತಿವೆ" ಎಂದು ಆರೋಪಿಸಿದ್ದಾರೆ. ಜೊತೆಗೆ ತಾನು ಹೇಳುತ್ತಿರುವುದು ತಪ್ಪು ಎಂದು ಭಾವಿಸಿದರೇ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
"ಜನರು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ನಾನು ಹೇಳುತ್ತಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನ್ಯಾಯಾಂಗವು ಜನರನ್ನು ಅನ್ಯಾಯದಿಂದ ರಕ್ಷಿಸಬೇಕು ಮತ್ತು ಅವರ ಕೂಗನ್ನು ಆಲಿಸಬೇಕು. ಜನರು ಮುಚ್ಚಿದ ಬಾಗಿಲುಗಳ ಹಿಂದೆ ಅಳುತ್ತಿದ್ದಾರೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಜೊತೆಗೆ ನ್ಯಾಷನಲ್ ಯೂನಿವರ್ಸಿಟಿ ಆಫ್ ಜ್ಯೂರಿಡಿಕಲ್ ಸೈನ್ಸಸ್ (NUJS) ಅನ್ನು ವಿಶ್ವದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದ್ದಾರೆ. "ನಾನು ನ್ಯಾಯಮೂರ್ತಿ ಯುಯು ಲಲಿತ್ ಅವರನ್ನು ಅಭಿನಂದಿಸಬೇಕು. ಅದಕ್ಕಾಗಿ ಈ ವೇದಿಕೆಯನ್ನು ಬಳಸಬಹುದೇ ಎಂದು ನನಗೆ ತಿಳಿದಿಲ್ಲ. ಆದರೆ ಎರಡು ತಿಂಗಳಲ್ಲಿ ಅವರು ನ್ಯಾಯಾಂಗ ಎಂದರೆ ಏನು ಎಂದು ತೋರಿಸಿದ್ದಾರೆ" ಎಂದು ಯುಯು ಲಲಿತ್ ಅವರನ್ನು ಶ್ಲಾಘಿಸಿದ್ದಾರೆ.












Click it and Unblock the Notifications