FIR against Rahul Gandhi: ಬಿಜೆಪಿ ಸಂಸದರಿಗೆ ಗಾಯ- ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲು
ಸಂಸತ್ ಆವರಣದಲ್ಲಿ ಇಂದು ಬಿಜೆಪಿ ಹಾಗೂ ಕಾಂಗ್ರೆಸ್ ಹೈಡ್ರಾಮ ನಡೆದಿದೆ. ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರು ಗಾಯಗೊಂಡಿದ್ದಾರೆ. ಇವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರತಿಭಟನೆ ವೇಳೆ ಬಿಜೆಪಿ ಸಂಸದರೊಬ್ಬರನ್ನು ರಾಹುಲ್ ಗಾಂಧಿ ಅವರನ್ನು ತಡೆದಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಗಾಂಧಿ ಅವರು ಸಂಸದ ಚಂದ್ರ ಸಾರಂಗಿ ಅವರನ್ನು ತಳ್ಳಿದ್ದರಿಂದ ಅವರು ಬಿದ್ದು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಇದೇ ವೇಳೆ ಬಿಜೆಪಿಯಿಂದ ವಿಡಿಯೋ ಕೂಡ ಬಿಡುಗಡೆಯಾಗಿದೆ.
"ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ರಾಹುಲ್ ಗಾಂಧಿ ಬಂದು ನನ್ನನ್ನು ತಳ್ಳಿದರು" ಎಂದು ಸಾರಂಗಿ ಆರೋಪ ಮಾಡಿದ್ದಾರೆ. ಪ್ರತಿಭಟನೆಯ ವೇಳೆ ಇಬ್ಬರು ಬಿಜೆಪಿ ಸಂಸದರ ಮೇಲೆ ರಾಹುಲ್ ಗಾಂಧಿ ಹಲ್ಲೆ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿದ್ದಾರೆ. ಆದರೆ ಇದನ್ನು ಕಾಂಗ್ರೆಸ್ ಬಲವಾಗಿ ನಿರಾಕರಿಸಿದೆ.

''ಬಿಜೆಪಿ ಸಂಸದರು ಅಡ್ಡಿಪಡಿಸುತ್ತಿದ್ದ ಪ್ರವೇಶ ದ್ವಾರದ ಬಳಿ ತಾನು ನಿಂತಿದ್ದೆ. ಅವರು ನನ್ನನ್ನು ತಳ್ಳುತ್ತಿದ್ದರು ಮತ್ತು ನನಗೆ ಬೆದರಿಕೆ ಹಾಕುತ್ತಿದ್ದರು. ನನ್ನಿಂದ ಅವರಿಗೆ ಪೆಟ್ಟಾಗಿಲ್ಲ" ಎಂದು ರಾಹುಲ್ ಗಾಂಧಿ ಸಮರ್ಥಿಸಿಕೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು. ಕಳೆದ ದಿನ ಸಂಸತ್ ಆವರಣದಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ಹಲವಾರು ಸಂಸದರು ಪ್ರತಿಭಟನೆ ನಡೆಸಿದ್ದರು.
ಇದರ ಪ್ರತಿಯಾಗಿ ಬಿಜೆಪಿ ಸಂಸದರು ಕೂಡ ಇಂದು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಎರಡೂ ಪಕ್ಷಗಳ ಸದಸ್ಯರ ನಡುವೆ ಗದ್ದಲ ಉಂಟಾಗಿ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರು ಕೆಳಗೆ ಬಿದ್ದು ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ. ಇತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿಯವರನ್ನೂ ತಳ್ಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ
ಘಟನೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ ಅವರು, 'ಸಂಸತ್ ಪ್ರವೇಶ ದ್ವಾರದಲ್ಲಿ ಬಿಜೆಪಿ ಸಂಸದರು ನಮ್ಮನ್ನು ತಡೆ ಹಿಡಿದರು. ಸಂಸತ್ ಒಳಗೆ ಹೋಗುವ ಹಕ್ಕು ನಮಗಿದೆ. ಆದರೆ ಬಿಜೆಪಿ ಸಂಸದರು ನಮ್ಮನ್ನು ಹೋಗಲು ಬಿಡಲಿಲ್ಲ. ಬಿಜೆಪಿ ಸಂಸದರು ನನ್ನನ್ನು ನೂಕಿದರು, ತಳ್ಳಿದರು, ಬೆದರಿಕೆ ಹಾಕಿದರು. ಈ ತಳ್ಳಾಟದಲ್ಲಿ ಸಂಸತ್ ಪ್ರತಾಪ್ ಅವರಿಗೆ ಗಾಯ ಆಗಿರಬಹುದು. ನಾನು ಉದ್ದೇಶಪೂರ್ವಕವಾಗಿ ಯಾರ ಮೇಲೂ ಹಲ್ಲೆ ಮಾಡಿಲ್ಲ. ಬಿಜೆಪಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದೆ. ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದೆ' ಎಂದು ಕಿಡಿ ಕಾರಿದ್ದಾರೆ.
ಆದರೆ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಗಂಭೀರ ಆರೋಪ ಮಾಡಿದೆ. 'ರಾಹುಲ್ ಗಾಂಧಿ ಇಬ್ಬರು ಬಿಜೆಪಿ ಸಂಸದರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಘಟನೆ ಬಗ್ಗೆ ಆಕ್ರೋಶಗೊಂಡರು.












Click it and Unblock the Notifications